ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ 3.O ಸರ್ಕಾರದ ಮೊದಲ ಕೇಂದ್ರ ಬಜೆಟ್‌ಗೆ ಅಂತಿಮ ಹಂತದ ಸಿದ್ಧತೆಗಳು ಗುರುವಾರ ಸಾಂಪ್ರದಾಯಿಕ ಹಲ್ವ ವಿತರಣೆ ಕಾರ್ಯಕ್ರಮದೊಂದಿಗೆ ಶುರುವಾಗಿದೆ.
ನಾರ್ತ್ ಬ್ಲಾಕ್‌ನ ಬಜೆಟ್ ಪ್ರೆಸ್ ಕಚೇರಿಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕಡಾಯಿಯಲ್ಲಿ ತಯಾರಿಸಿದ ಹಲ್ವವನ್ನು ಬಜೆಟ್ ಸಿದ್ಧತೆಯಲ್ಲಿ ತೊಡಗಿಸಿಕೊಳ್ಳುವ ಸಿಬ್ಬಂದಿಗೆ ವಿತರಿಸಿದರು. ಇದಾದ ಬಳಿಕವೇ ಬಜೆಟ್ ದಾಖಲೆಗಳ ಮುದ್ರಣ ಪ್ರಕ್ರಿಯೆ ಆರಂಭವಾಗುತ್ತದೆ. ಇದರ ಗೌಪ್ಯತೆಯ ಕಾಪಾಡಲಾಗುತ್ತದೆ. ಹಲ್ವ ವಿತರಣೆ ಕಾರ್ಯಕ್ರಮ ವೇಳೆ ಕೇಂದ್ರ ಹಣಕಾಸು ರಾಜ್ಯ ಸಚಿವ ಪಂಕಜ್ ಚೌಧರಿ ಹಾಗೂ ಹಣಕಾಸು ಇಲಾಖೆಯ ಕಾರ್ಯದರ್ಶಿಗಳು, ಅಧಿಕಾರಿಗಳು, ಸಿಬ್ಬಂದಿ ಈ ವೇಳೆ ಉಪಸ್ಥಿತರಿದ್ದರು.
ಏನಿದು ಹಲ್ವ ವಿತರಣೆ ಕಾರ್ಯಕ್ರಮ? ಏನಿದರ ವಿಶೇಷತೆ?
ಬಜೆಟ್ ಮಂಡನೆಗೆ ಕೆಲವು ದಿನಗಳಿರುವಾಗ ಸಾಂಪ್ರದಾಯಿಕ ಹಲ್ವ ಕಾರ್ಯಕ್ರಮ ನಡೆಯುತ್ತದೆ. ಹಲವಾರು ದಶಕಗಳಿಂದಲೂ ಇದು ಚಾಲ್ತಿಯಲ್ಲಿರುವ ಸಂಪ್ರದಾಯ. ಕೋವಿಡ್ ಬಿಕ್ಕಟ್ಟಿನ ಸಂದರ್ಭ ಮಾತ್ರ ಮಾಡಿರಲಿಲ್ಲ. ಗೌಪ್ಯತೆಯನ್ನು ಕಾಪಾಡುವ ದೃಷ್ಟಿಯಿಂದ ನಾರ್ತ್ ಬ್ಲಾಕ್‌ನ ಬೇಸ್‌ಮೆಂಟ್ ಭದ್ರಕೋಟೆಯಾಗುತ್ತದೆ.
ಬಜೆಟ್ ಪ್ರತಿಗಳ ಮುದ್ರಣ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಸುಮಾರು 100 ಸಿಬ್ಬಂದಿ ಬಜೆಟ್ ಮಂಡನೆಯಾಗುವ ತನಕ ಕಚೇರಿಯಲ್ಲಿಯೇ ತಂಗಬೇಕಾಗುತ್ತದೆ. ಹೊರ ಜಗತ್ತಿನ ಸಂಪರ್ಕವನ್ನು ಸಂಪೂರ್ಣವಾಗಿ ಕಡಿತಗೊಳಿಸಲಾಗುತ್ತದೆ. ಈ ದಿನಗಳಲ್ಲಿ ತುರ್ತು ಪರಿಸ್ಥಿತಿ ಇದ್ದರೆ ಮಾತ್ರ ಸಿಬ್ಬಂದಿ ಫೋನ್ ಕರೆ ಮಾಡಬಹುದು. ಅದೂ ಮೇಲ್ವಿಚಾರಣೆಯಲ್ಲಿ ನಡೆಯುತ್ತದೆ. ಸಿಸಿಟಿವಿಗಳ ನೆಟ್ ವರ್ಕ್ ಇರುತ್ತದೆ. ಬೇಸ್‌ಮೆಂಟ್‌ನಲ್ಲಿ ಸಚಿವರಿಗೂ ಮೊಬೈಲ್ ಕರೆ ಮಾಡಲು ನಿರ್ಬಂಧ ಇರುತ್ತದೆ.