ಬೆಂಗಳೂರು: “ಮುಂದಿನ ವರ್ಷ ಏಪ್ರಿಲ್‌ನಿಂದ ದೇಶಾದ್ಯಂತ ಏಕರೂಪದ ಟೋಲ್ ಸಂಗ್ರಹ ವ್ಯವಸ್ಥೆ ಜಾರಿಗೆ ಬರಲಿದೆ’ ಎಂದು ಲೋಕೋಪಯೋಗಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ದೇಶದಲ್ಲಿ ಏಕರೂಪದ ಟೋಲ್ ಸಂಗ್ರಹಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಪ್ಪಿಗೆ ನೀಡಿದ್ದು, 2020ರ ಏಪ್ರಿಲ್‌ನಿಂದ ದೇಶಾದ್ಯಂತ ಜಾರಿಗೆ ಬರಲಿದ್ದು, ರಾಜ್ಯದಲ್ಲಿಯೂ ಹೊಸ ವ್ಯವಸ್ಥೆ ಅಳವಡಿಸಿ ಕೊಳ್ಳಲು ತೀರ್ಮಾನಿಸಲಾಗಿದೆ ಎಂದರು.
ರಾಜ್ಯ ಹೆದ್ದಾರಿ ವ್ಯಾಪ್ತಿಯಲ್ಲಿರುವ 32 ಟೋಲ್ ಗೇಟ್‌ಗಳಲ್ಲೂ ಹೊಸ ಟೋಲ್ ವ್ಯವಸ್ಥೆ ಜಾರಿಗೆ ತೀರ್ಮಾನಿಸಲಾಗಿದೆ. ರಾಜ್ಯದ 32 ಟೋಲ್ ಗೇಟ್‌ಗಳಲ್ಲಿ ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ ವ್ಯವಸ್ಥೆ ಜಾರಿಗೊಳಿಸಲು ನಿರ್ಧರಿಸಲಾಗಿದ್ದು, ಇದರಿಂದ ವಾಹನ ಸವಾರರ ಸಮಯ, ಇಂಧನ ಹಾಗೂ ಟ್ರಾಫಿಕ್ ಸಮಸ್ಯೆ ಕಡಿಮೆಯಾಗುತ್ತದೆ. ಅಲ್ಲದೇ ನೋಂದಣಿಯಿಲ್ಲದ ವಾಹನ, ದಾಖಲೆಗಳಿಲ್ಲದೇ ವಾಹನ ಸವಾರಿ ಮಾಡುವುದನ್ನು ಟೋಲ್‌ಗೇಟ್‌ಗಳಲ್ಲಿಯೇ ಪತ್ತೆ ಹಚ್ಚುವ ವ್ಯವಸ್ಥೆ ಜಾರಿಗೆ ಬರಲಿದೆ.
ಅಲ್ಲದೇ ದೇಶದ್ರೋಹಿಗಳು, ಭಯೋತ್ಪಾದಕರ ಗುರುತು ಹಿಡಿಯಲೂ ಟೋಲ್‌ಗಳಲ್ಲಿ ಸಹಕಾರಿಯಾಗುತ್ತದೆ ಎಂದು ಅವರು ಹೇಳಿದರು. ಎಲೆಕ್ಟ್ರಾನಿಕ್ ಟೋಲ್ ವ್ಯವಸ್ಥೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಲಾ 50ರಷ್ಟು ವೆಚ್ಚ ಭರಿಸಲಿದ್ದು, ಕೇಂದ್ರ ಸರ್ಕಾರ ನಿರ್ವಹಣೆಯ ಶೇ.80 ವೆಚ್ಚವನ್ನು ಭರಿಸಲಿದೆ. ಒಂದು ಎಲೆಕ್ಟ್ರಾನಿಕ್ ಟೋಲ್ ಯುನಿಟ್ ಹಾಕಲು 20 ಲಕ್ಷ ರೂ. ವೆಚ್ಚವಾಗಲಿದೆ ಎಂದು ಹೇಳಿದರು.
ಇದೇ ವೇಳೆ, ರಾಜ್ಯದಲ್ಲಿ ಪ್ರವಾಹ ಉಂಟಾಗಿರುವುದರಿಂದ ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ 4200 ಕಿ.ಮೀ. ರಸ್ತೆ ಹಾನಿಯಾಗಿದ್ದು, ಸುಮಾರು 8 ಸಾವಿರ ಕೋಟಿ ರೂ. ನಷ್ಟ ಅಂದಾಜಿಸಲಾಗಿದೆ. ಪ್ರವಾಹದಿಂದ ಹಾನಿಗೊಳಗಾಗಿರುವ ರಸ್ತೆಗಳ ದುರಸ್ಥಿಗೆ 500 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದರು. ಇನ್ನು ಶಿರಾಡಿ ಘಾಟ್ ರಸ್ತೆ ಅಭಿವೃದ್ಧಿಗೆ 4 ಸಾವಿರ ಕೋಟಿ ರೂ.ಯೋಜನೆಯ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸ ಲಾಗಿದ್ದು, ಕೇಂದ್ರದಿಂದ ಅನುಮೋದನೆ ದೊರೆಯುವ ವಿಶ್ವಾಸ ಇದೆ ಎಂದು ಹೇಳಿದರು.