Advertisement

ರಾಜ್ಯಾದ್ಯಂತ ಎಲ್ಲಾ ವಿವಿ, ಕಾಲೇಜುಗಳಿಗೆ ಏಕರೂಪದ ವೇಳಾಪಟ್ಟಿ

09:55 PM Jul 09, 2022 | Team Udayavani |

ಬೆಂಗಳೂರು: ರಾಜ್ಯದಲ್ಲಿ ಇದೇ ಮೊದಲ ಬಾರಿಗೆ 2022-23ನೇ ಶೈಕ್ಷಣಿಕ ಸಾಲಿಗೆ ಪದವಿ ಮತ್ತು ಸ್ನಾತಕೋತ್ತರ ಕೋರ್ಸುಗಳಿಗೆ ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳು ಹಾಗೂ ಕಾಲೇಜಿಗೆ ಅನ್ವಯವಾಗುವಂತೆ ಏಕರೂಪದ ವೇಳಾಪಟ್ಟಿಯನ್ನು ಸಿದ್ಧಪಡಿಸಲಾಗಿದೆ.

Advertisement

ಪ್ರತಿಯೊಬ್ಬರು ಇದನ್ನು ಅಳವಡಿಸಿಕೊಂಡು ಕಡ್ಡಾಯವಾಗಿ ಪಾಲನೆ ಮಾಡುವಂತೆ ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್‌ ಅಶ್ವತ್ಥನಾರಾಯಣ ಸೂಚಿಸಿದರು.

ಈ ಕುರಿತು ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಾದ್ಯಂತ ಪದವಿ ತರಗತಿಗಳಿಗೆ ಜು.11ರಿಂದ ಪ್ರವೇಶಾತಿ ಆರಂಭವಾಗಲಿದ್ದು, ಆಗಸ್ಟ್‌ 17ರಿಂದ 22ರ ನಡುವೆ ತರಗತಿಗಳು ಆರಂಭವಾಗಲಿವೆ. ಹಾಗೆಯೇ ಸ್ನಾತಕೋತ್ತರ ಕೋರ್ಸುಗಳಿಗೆ ಅಕ್ಟೋಬರ್‌ 15ರಿಂದ ಪ್ರವೇಶ ಪ್ರಕ್ರಿಯೆ ಆರಂಭವಾಗಲಿದ್ದು, ನ.2ರಿಂದ 14ರ ಅವಧಿಯಲ್ಲಿ ತರಗತಿಗಳಿಗೆ ಚಾಲನೆ ನೀಡಲಾಗುತ್ತದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಈ ವರೆಗೆ ಒಂದೊಂದು ವಿಶ್ವವಿದ್ಯಾಲಯಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಶೈಕ್ಷಣಿಕ ವೇಳಾಪಟ್ಟಿ ರೂಪಿಸಿಕೊಳ್ಳುತ್ತಿವೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಗೊಂದಲ ಮತ್ತು ಅನನುಕೂಲವಾಗುತ್ತಿದೆ. ಇದನ್ನು ಗಮನಿಸಿ ಏಕರೂಪದ ವೇಳಾಪಟ್ಟಿಯನ್ನು ತರಲಾಗಿದೆ. ಸೆಮಿಸ್ಟರ್‌ಗಳ ಆರಂಭ, ದಂಡರಹಿತ ಮತ್ತು ದಂಡ ಸಹಿತ ಪ್ರವೇಶಾತಿ ಅವಧಿ, ತರಗತಿಗಳು ಆರಂಭವಾಗುವ ಮತ್ತು ಮುಗಿಯುವ ದಿನ, ಪರೀಕ್ಷೆ ಆರಂಭವಾಗುವ ದಿನ, ಮೌಲ್ಯಮಾಪನ ಆರಂಭ ಮತ್ತು ಫ‌ಲಿತಾಂಶ ಪ್ರಕಟಣೆಯ ದಿನ, ರಜೆ ಆರಂಭದ ದಿನಗಳನ್ನೆಲ್ಲ ಸ್ಪಷ್ಟವಾಗಿ ಸೂಚಿಸಲಾಗಿದೆ ಎಂದು ವಿವರಿಸಿದರು.

ಪ್ರಮುಖವಾಗಿ ಪದವಿಯ 6, ಸ್ನಾತಕೋತ್ತರ 4 ಮತ್ತು ವೃತ್ತಿಪರ ಕೋರ್ಸುಗಳ 8 ಸೆಮಿಸ್ಟರ್‌ಗಳನ್ನು ಪರಿಗಣಿಸಲಾಗಿದೆ. ಸೆಮಿಸ್ಟರ್‌ ಮುಗಿದ ನಂತರದ ರಜೆ ಅವಧಿಯಲ್ಲಿ ಪರೀûಾ ಕರ್ತವ್ಯ ಬಂದರೆ, ಉಪನ್ಯಾಸಕರು ಆ ಕರ್ತವ್ಯಗಳನ್ನು ನಿರ್ವಹಿಸಬೇಕು ಎಂದು ಹೇಳಿದರು.

Advertisement

ಉನ್ನತ ಶಿಕ್ಷಣ ಪರಿಷತ್‌ ಮುಖ್ಯಸ್ಥರಾದ ಬಿ. ತಿಮ್ಮೇಗೌಡರ ಅಧ್ಯಕ್ಷತೆಯಲ್ಲಿ ಈ ಸಂಬಂಧ ಇದೇ 7ರಂದು ಎಲ್ಲಾ ವಿ.ವಿ.ಗಳ ಕುಲಪತಿಗಳು ಮತ್ತು ಕುಲಸಚಿವರೊಂದಿಗೆ ವರ್ಚುಯಲ್‌ ಸಭೆ ನಡೆಸಲಾಗಿದೆ ಎಂದು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next