Advertisement

Rural area ಸ್ಥಳೀಯ ಪ್ರಾಧಿಕಾರದ‌ಲ್ಲೇ ಏಕವಿನ್ಯಾಸ ನಕ್ಷೆ ಪ್ರಮಾಣ

12:00 AM Jul 26, 2024 | Team Udayavani |

ಬೆಂಗಳೂರು: ಕರಾವಳಿ ಭಾಗದ ಅದರಲ್ಲೂ ಮುಖ್ಯವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಮನೆ ನಿರ್ಮಾಣಕ್ಕೆ ಅಗತ್ಯವಿರುವ ಏಕವಿನ್ಯಾಸ ನಕ್ಷೆ (9 ಮತ್ತು 11ಎ)ಗಳಿಗೆ ಮಂಜೂರಾತಿ ಪಡೆಯುವ ಪ್ರಕ್ರಿಯೆಗೆ ಇರುವ ತಾಂತ್ರಿಕ ತೊಂದರೆ ನಿವಾರಣೆಗೆ ಸರಕಾರ ಉದ್ದೇಶಿಸಿದ್ದು, ನಗರ ಯೋಜನೆ ಸೌಲಭ್ಯವಿರುವ ಸ್ಥಳೀಯ ಪ್ರಾಧಿಕಾರಗಳಲ್ಲೇ ಈ ಸಂಬಂಧದ ಪ್ರಮಾಣಪತ್ರ ಪಡೆಯಲು ಅವಕಾಶ ಕಲ್ಪಿಸಲು ನಿರ್ಧರಿಸಿದೆ.

Advertisement

ವಿಧಾನಸೌಧದಲ್ಲಿ ಗುರುವಾರ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್‌ ಅಧ್ಯಕ್ಷತೆಯಲ್ಲಿ ಕಂದಾಯ, ನಗರಾಭಿವೃದ್ಧಿ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆ ಮತ್ತು ಉಸ್ತುವಾರಿ ಸಚಿವರು, ದಕ್ಷಿಣ ಕನ್ನಡ ಜಿಲ್ಲೆಯ ಶಾಸಕರು, ವಿಧಾನ ಪರಿಷತ್ತಿನ ಸದಸ್ಯರು ಹಾಗೂ ಉನ್ನತ ಅಧಿಕಾರಿಗಳ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.

ಸಾಮಾನ್ಯವಾಗಿ ಯಾವುದೇ ಮನೆ ನಿರ್ಮಿಸುವಾಗ ಏಕವಿನ್ಯಾಸ ನಕ್ಷೆ ಪಡೆಯುವುದು ಅವಶ್ಯ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ನಕ್ಷೆ ಮಂಜೂರಾತಿ ಪಡೆಯಲು ನೂರಾರು ಕಿ.ಮೀ. ದೂರದ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ಕ್ಕೆ ಅಲೆ ದಾಡಬೇಕಿದೆ. ಈಗ ಅದನ್ನು ಆಯಾ ಸ್ಥಳೀಯ ಸಂಸ್ಥೆಗಳಿಂದಲೇ ಅಂದರೆ ಪುತ್ತೂರು ನಗರಾಭಿವೃದ್ಧಿ ಪ್ರಾಧಿಕಾರ (ಪುಡಾ), ಬಂಟ್ವಾಳ ನಗರಾಭಿವೃದ್ಧಿ ಪ್ರಾಧಿಕಾರ, ಉಳ್ಳಾಲ ನಗರಾಭಿವೃದ್ಧಿ ಪ್ರಾಧಿಕಾರದಿಂದಲೇ ಪಡೆಯಲು ಅವಕಾಶ ಕಲ್ಪಿಸಲು ನಿರ್ಣಯ ಕೈಗೊಳ್ಳ ಲಾಯಿತು. ಆದರೆ ಇದು ಲೇಔಟ್‌ಗಳಿಗೆ ಅನ್ವಯ ಆಗುವುದಿಲ್ಲ. ಅಲ್ಲದೆ ಹೀಗೆ ನಿರ್ಮಿಸಲಾಗುವ ಮನೆಗೆ ಸಂಪರ್ಕ ಕಲ್ಪಿಸುವ ಜಾಗವನ್ನು ಮಾಲಕರು ದಾನಪತ್ರವಾಗಿ ಮಾಡಿಕೊಡಬೇಕು. ಹಾಗೂ ಸರಕಾರಿ ರಸ್ತೆ ಮತ್ತು ಸಂಪರ್ಕ ರಸ್ತೆ ಇರುವ ಬಗ್ಗೆಯೂ ನಿರಾಕ್ಷೇಪಣೆ ಪತ್ರ ಪಡೆಯಬೇಕಿದೆ. ಈ ಸಮಸ್ಯೆಯನ್ನೂ ನಿವಾರಣೆ ಮಾಡಲಾಗಿದೆ. ಇವೆರಡರ ಆವಶ್ಯಕತೆಯೂ ಇನ್ನು ಇರುವುದಿಲ್ಲ. ಈ ಸರಳೀಕರಣದಿಂದ ಸ್ಥಳೀಯರು ನಿಟ್ಟುಸಿರು ಬಿಡುವಂತಾಗಿದೆ.

ಈಚೆಗೆ ನಡೆದ ಅಧಿವೇಶನದಲ್ಲಿ ಶಾಸಕ ಅಶೋಕ್‌ ರೈ ಈ ವಿಷಯ ಪ್ರಸ್ತಾವಿಸಿದ್ದರು. ಇದಕ್ಕಾಗಿ ಸಂಬಂಧ ಪಟ್ಟ ಸಚಿವರು, ಅಧಿಕಾರಿಗಳು ಸಭೆ ಕರೆದು ಇತ್ಯರ್ಥಪಡಿಸುವುದಾಗಿ ಸ್ಪೀಕರ್‌ ಭರವಸೆ ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next