ಬೆಳ್ತಂಗಡಿ: ಮಳೆ ಸುರಿಯದಿದ್ದರೂ ಬೆಳ್ತಂಗಡಿ ತಾಲೂಕಿನಲ್ಲಿ ನದಿಗಳು ತುಂಬಿ ಹರಿಯುತ್ತಿದ್ದು, ಇದಕ್ಕೆ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆಯೇ ಕಾರಣ. ಇದರಿಂದಾಗಿ 2019ರ ಪ್ರವಾಹದ ಕಹಿ ಘಟನೆ ಮತ್ತೆ ನೆನಪಾಗುತ್ತಿದೆ.
ಬುಧವಾರ ಸಂಜೆ 3ರ ಸುಮಾರಿಗೆ ಬಂಡಾಜೆ ಅರ್ಬಿ ಫಾಲ್ಸ್‌ನಿಂದ ಧುಮ್ಮಿಕ್ಕಿ ಹರಿದ ಮಣ್ಣು ಮಿಶ್ರಿತ ನೀರಿನ ರಭಸ ಆತಂಕ ಸೃಷ್ಟಿಸಿತ್ತು. ಸುಮಾರು 8 ಕಿ.ಮೀ. ದೂರದಿಂದ ಚಿತ್ರೀಕರಿಸಿದ ವೀಡಿಯೋದಲ್ಲೂ ಅದರ ಗಂಭೀರತೆ ಎದ್ದು ಕಾಣುತ್ತಿತ್ತು. ಎರಡು ದಿನಗಳಿಂದ ನೇತ್ರಾವತಿ ಹಾಗೂ ಮೃತ್ಯುಂಜಯ ನದಿಗಳಲ್ಲಿ ಬಂದ ನೀರಿನ ರಭಸಕ್ಕೆ ಮನೆ ತೋಟಗಳಿಗೆ ನೀರು ನುಗ್ಗಿ ಆತಂಕ ಸೃಷ್ಟಿಸಿತ್ತು.
ಚಿಕ್ಕಮಗಳೂರು ವ್ಯಾಪ್ತಿಯಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಅಲ್ಲಿಂದ ಭಾರೀ ಪ್ರಮಾಣದಲ್ಲಿ ನೀರು ಹರಿದು ಬಂದುದರಿಂದ ಪರಿಣಾಮ ಜಲಪಾತ ಧುಮ್ಮಿಕ್ಕಿ ಹರಿದಿದೆ. ಸುಮಾರು ಒಂದರಿಂದ ಎರಡು ತಾಸು ಮಣ್ಣು ಮಿಶ್ರಿತ ನೀರಿನ ರಭಸ ಕಂಡುಬಂದಿದ್ದು ಬಳಿಕ ಶಾಂತವಾಗಿದೆ. ಘಟ್ಟ ಪ್ರದೇಶದಲ್ಲಿ ಗುಡ್ಡ ಕುಸಿತ ಆಗಿರುವ ರೀತಿ ನೀರು ಧುಮ್ಮಿಕ್ಕಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಮೃತ್ಯುಂಜಯ, ನೇತ್ರಾವತಿ ನದಿ ನೀರಿನ ಮಟ್ಟ ಬುಧವಾರ ಅಪಾಯದ ಸ್ಥಿತಿಗೆ ತಲುಪಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.
ಆದರೆ ದುರ್ಗದ ಬೆಟ್ಟ, ರಾಣಿ ಝರಿ, ಮೈದಾಡಿ ಬೆಟ್ಟದ ಕಡೆಯಿಂದ ಹೊಳೆಯ ನೀರಿನಲ್ಲಿ ಮಣ್ಣು ಮಿಶ್ರಿತ ನೀರು ರಭಸದಿಂದ ಬರುತ್ತಿರುವ ಕುರಿತು ಸ್ಥಳೀಯರಿಂದ ಮಾಹಿತಿ ಬಂದಿದೆ. ಬೆಟ್ಟ ಹಾಗೂ ನದಿ ಪಾತ್ರದಲ್ಲಿರುವವರು ಜಾಗರೂಕರಾಗಿರುವಂತೆ ಮನವಿ ಮಾಡಿಕೊಳ್ಳುತ್ತಿದ್ದೇನೆ. ಜಿಲ್ಲಾಡಳಿತ ಹಾಗೂ ಭೂ ಶಾಸ್ತ್ರಜ್ಞರು ಈ ಭಾಗಕ್ಕೆ ಭೇಟಿ ನೀಡಿ ಪರಿಶೀಲಿಸಿ ವರದಿ ನೀಡಲಿದ್ದಾರೆ ಎಂದು ಶಾಸಕ ಹರೀಶ್ ಪೂಂಜ ತಿಳಿಸಿದ್ದಾರೆ.
ನಿರಂತರ ನೆರೆ
ಬೆಳ್ತಂಗಡಿ ತಾಲೂಕಿನ ಮೃತ್ಯುಂಜಯ ನದಿಯಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರ ನೆರೆ ಬಂದು ಭಾರೀ ಪ್ರಮಾಣದಲ್ಲಿ ಮರಮಟ್ಟುಗಳು ಶೇಖರಣೆಯಾಗಿ ನೀರಿನ ಹರಿವಿಗೆ ಕೂಡ ಸಮಸ್ಯೆಯಾಗಿದೆ. ಚಾರ್ಮಾಡಿ ಘಾಟಿಯಲ್ಲಿ ಮಂಗಳವಾರ ರಾತ್ರಿ ಭಾರೀ ಮಳೆ ಸುರಿದಿತ್ತು.