ವಿಜಯಪುರ : ಏಳು ವರ್ಷಗಳ ಹಿಂದೆ ರಾಜ್ಯದಲ್ಲೇ ಭಾರಿ ಸಂಚಲನ ಸೃಷ್ಟಿಸಿದ್ದ ಮಹಿಳೆಯ ಬೆತ್ತಲೆ ಮೆರವಣಿಗೆ ಪ್ರಕರಣದಲ್ಲಿನ ನಿರ್ಲಕ್ಷದ ಆರೋಪದಲ್ಲಿ ಸಸ್ಪೆಂಡ್ ಆಗಿದ್ದ ಎಸ್ ಐ ನಿರ್ದೋಷಿ ಎಂದು ಘೋಷಿತವಾಗಿದ್ದಾರೆ.
ಹಾಲಿ ರೈಲ್ವೇ ಇಲಾಖೆಯಲ್ಲಿ ಸೇವೆಯಲ್ಲಿರುವ ಶಿವಾನಂದ ಆರೇನಾಡ ಇಂಡಿ ಗ್ರಾಮೀಣ ಠಾಣೆ ಪಿಎಸೈ ಆಗಿದ್ದಾಗ 2017 ಜುಲೈ 3 ರಂದು ಮಹಿಳೆಯೊಬ್ಬಳನ್ನು ಹಾಡು ಹಗಲೆ ಬೆತ್ತಲೆಗೊಳಿಸಿ, ಹಲ್ಲೆ ಮಾಡಿದ ಘಟನೆ ಜರುಗಿತ್ತು. ಸದರಿ ಘಟನೆ ರಾಜ್ಯದಾದ್ಯಂತ ಭಾರಿ ಸುದ್ದಿಯಾಗಿತ್ತು.
ಘಟನೆಯಲ್ಲಿ ಅಂದಿನ ಎಸ್ ಐ ಶಿವಾನಂದ ಆರೇನಾಡ ಅವರು ಕರ್ತವ್ಯ ನಿರ್ಲಕ್ಷ ವಹಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ಅಲ್ಲದೇ ಇಲಾಖೆಯ ಉನ್ನತ ಅಧಿಕಾರಿಗಳಿಂದ ತನಿಖಾ ವರದಿ ಆಧರಿಸಿ 2017 ಜುಲೈ 7 ರಿಂದ 2018 ಏಪ್ರೀಲ್ 2 ರ ವರೆಗೆ ಶಿವಾನಂದ ಅವರನ್ನು ಸೇವೆಯಿಂದ ಆಮಾನತು ಮಾಡಲಾಗಿತ್ತು. ಬಳಿಕ ಅವರನ್ನು ರೈಲ್ವೇ ಇಲಾಖೆಗೆ ವರ್ಗಾಯಿಸಿ, ವಿಜಯಪುರ ರೈಲ್ವೇ ಠಾಣೆಗೆ ಕರ್ತವ್ಯಕ್ಕೆ ನಿಯೋಜಿಸಿತ್ತು.
ಆದರೆ ಸದರಿ ಪ್ರಕರಣದಲ್ಲಿ ತನ್ನದೇನೂ ತಪ್ಪಿಲ್ಲ, ತನ್ನಿಂದ ಯಾವುದೇ ನಿರ್ಲಕ್ಷವಾಗಿಲ್ಲ ಎಂದು ಇಲಾಖೆಯ ಉನ್ನತ ಅಧಿಕಾರಿಗಳು ನೀಡಿದ ವರದಿ ಹಾಗೂ ಸಸ್ಪೆಂಡ್ ಆದೇಶವನ್ನು ಪ್ರಶ್ನಿಸಿ ಎಸೈ ಶಿವಾನಂದ ಆರೇನಾಡ ಕರ್ನಾಟಕ ಆಡಳಿತಾತ್ಮಕ ಮಂಡಳಿ (ಕೆಎಟಿ)ಗೆ ನ್ಯಾಯಕ್ಕಾಗಿ ಮೊರೆ ಹೋಗಿದ್ದರು.
ಶಿವಾನಂದ ಅವರ ವಾದ ಎತ್ತಿ ಹಿಡಿದ ಕೆಎಟಿ ಶಿವಾನಂದ ಅವರು ಮಹಿಳೆಯ ಬೆತ್ತಲೆ ಮೆರವಣಿಗೆ, ಹಲ್ಲೆ ಪ್ರಕರಣದಲ್ಲಿ ಕರ್ತವ್ಯ ನಿರ್ಲಕ್ಷ ತೋರಿಲ್ಲ ಎಂದು ಹಾಗೂ ಸಸ್ಪೆಂಡ್ ಮಾಡಿರುವುದು ಸೂಕ್ತವಲ್ಲ ಎಂದು ಆದೇಶಿಸಿತ್ತು.
ಕೆಎಟಿ ಆದೇಶದ ಆಧಾರದಲ್ಲಿ ಕಳೆದ ಜುಲೈ ಮೊದಲ ವಾರ ಬೆಳಗಾವಿ ಉತ್ತರ ವಲಯದ ಐಜಿಪಿ ವಿಕಾಸಕುಮಾರ ವಿಕಾಸ ಅವರು ಶಿವಾನಂದ ಅವರನ್ನು ದೋಷಮುಕ್ತರು ಎಂದು ಆದೇಶಿಸಿದ್ದಾರೆ.
ಅಲ್ಲದೇ ಶಿವಾನಂದ ಅವರು ದೋಷಮುಕ್ತ ಆಗಿರುವ ಕಾರಣ 2017 ಜುಲೈ 7 ರಿಂದ 2018 ಏಪ್ರಿಲ್ 2 ರ ವರೆಗೆ ಶಿವಾನಂದ ಅವರನ್ನು ಸೇವೆಯಿಂದ ಆಮಾನತು ಮಾಡಿದ್ದ ಅವಧಿಯನ್ನು ಕರ್ತವ್ಯದ ಮೇಲೆ ಕಳೆದ ಅವಧಿ ಎಂದು ಪರಿಗಣಿಸುವಂತೆಯೂ ಆದೇಶಿಸಿದ್ದಾರೆ.