ಹೊಸದಿಲ್ಲಿ : ನೋಟು ಅಮಾನ್ಯ, ಜಿಎಸ್‌ಟಿ, ರೈತರ ದಯನೀಯ ಬೆಳೆ ಸಂಕಷ್ಟ ಇವೇ ಮೊದಲಾದ ಕಾರಣಕ್ಕೆ ಭಾರತೀಯ ಜನತಾ ಪಕ್ಷದೊಳಗಿನ ಬಿರುಕು ಇದೀಗ ಬಹಿರಂಗಕ್ಕೆ ಬಂದಿದೆ. ಮಹಾರಾಷ್ಟ್ರದ ಗೋಂಡಿಯಾ ಕ್ಷೇತ್ರದ ಸಂಸದ ನಾನಾ ಪಟೋಳೆ ಅವರು ನೋಟು ಅಮಾನ್ಯ ಮತ್ತು ಜಿಎಸ್‌ಟಿ ವಿರುದ್ಧ ಪ್ರತಿಭಟನೆ ತೋರಿ ತತ್‌ಕ್ಷಣದಿಂದ ಜಾರಿಗೆ ಬರುವಂತೆ ತನ್ನ ಸಂಸತ್ ಸದಸ್ಯತ್ವಕ್ಕೆ ಇಂದು ಶುಕ್ರವಾರ ರಾಜೀನಾಮೆ ನೀಡಿದ್ದಾರೆ.
ಸಂಸದ ಪಟೋಳೆ ಅವರು ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್‌ಗೆ ಸಲ್ಲಿಸಿರುವ ತನ್ನ ತ್ಯಾಗಪತ್ರದಲ್ಲಿ, ತನ್ನ ರಾಜೀನಾಮೆಗೆ ಕಾರಣವಾದ 14 ಸಂಗತಿಗಳನ್ನು ಪಟ್ಟಿ ಮಾಡಿದ್ದಾರೆ.
ಬಿಜೆಪಿ ಬಂಡುಕೋರ ಪಟೋಳೆ ಅವರು ಈಚೆಗೆ ರಾಜ್ಯ ರೈತರ ದಯನೀಯ ಸ್ಥಿತಿಯನ್ನು ಮುಂದಿಟ್ಟುಕೊಂಡು ಬಿಜೆಪಿ ವಿರುದ್ಧ ಬಹಿರಂಗವಾಗಿ ನಿರಂತರ ದಾಳಿ ಮಾಡುತ್ತಲೇ ಬಂದಿದ್ದರು. ಈ ಸಂಬಂಧ ಅವರು ಕಳೆದ ಅಕ್ಟೋಬರ್‌ನಲ್ಲಿ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರನ್ನು ಭೇಟಿಯಾಗಿದ್ದರು.
ಮಹಾರಾಷ್ಟ್ರ ಸರಕಾರದ ಉಗ್ರ ಟೀಕಾಕಾರನಾಗಿದ್ದ ಪಟೋಳೆ, ಹಲವು ಬಾರಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧವೂ ಕಿಡಿ ಕಾರುತ್ತಿದ್ದರು. ಪ್ರಧಾನಿ ಮುಂದೆ ತಾನು ಹಲವಾರು ಗಂಭೀರ ವಿಷಯಗಳನ್ನು ಎತ್ತಿದರೂ ಅವುಗಳನ್ನು ನಿರ್ಲಕ್ಷಿಸಲಾಗಿದೆ ಎಂಬುದು ಪಟೋಳೆ ಅವರ ಆರೋಪವಾಗಿದೆ.
ಪಟೋಳೆ ಅವರು 2014ರಲ್ಲಿ ಬಿಜೆಪಿಗೆ ಸೇರುವ ಮುನ್ನ ಕಾಂಗ್ರೆಸ್ ಮತ್ತು ಇತರ ಕೆಲವು ಪಕ್ಷಗಳ ಸದಸ್ಯರಾಗಿದ್ದರು. 2014ರ ಮಹಾಚುನಾವಣೆಯಲ್ಲಿ ಅವರು ಬಿಜೆಪಿ ಅಭ್ಯರ್ಥಿಯಾಗಿ ಎನ್‌ಸಿಪಿ ಯ ಪ್ರಬಲ ಅಭ್ಯರ್ಥಿ ಪ್ರಫುಲ್ ಪಟೇಲ್ ಅವರನ್ನು ಭಂಡಾರಾ – ಗೋಂಡಿಯಾ ಕ್ಷೇತ್ರದಲ್ಲಿ ಸೋಲಿಸಿದ್ದರು.
ಪಟೋಳೆ ಅವರ ರಾಜೀನಾಮೆಯು ಡಿ.9ರ ಗುಜರಾತ್ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಮುನ್ನಕ್ಕೆ ಬಂದಿರುವುದು ಗಮನಾರ್ಹವಾಗಿದೆ. ಎರಡನೇ ಹಂತದ ಮತದಾನ ಡಿ.14ರಂದು ನಡೆಯಲಿದ್ದು ಮತ ಎಣಿಕೆ ಡಿ.18ರಂದು ನಡೆಯಲಿದೆ.