Advertisement

ಮರೆಯಲಾಗದ ಮಹಾ ಸಾಧಕರು

12:30 AM May 29, 2018 | |

ಇಂದು ಡಾ. ಟಿ.ಎಂ.ಎ.ಪೈ ಹಾಗೂ ಟಿ.ಎ.ಪೈಗಳ ಪುಣ್ಯತಿಥಿ.  ಕುಗ್ರಾಮವಾಗಿದ್ದ ಮಣಿಪಾಲ ವನ್ನು ರಾಷ್ಟ್ರೀಯ- ಅಂತಾ ರಾಷ್ಟ್ರೀಯ ಭೂಪಟದಲ್ಲಿ ಮೂಡಿಸಿದ ಈ ಮಹಾನ್‌ ಸಾಧಕರಿಗೆ ನುಡಿನಮನ.

Advertisement

ಡಾ.ಟಿ.ಎಂ.ಎ ಪೈ ಮತ್ತು ಟಿ.ಎ.ಪೈ ಇವರಿಬ್ಬರೂ ದೇಶ ಕಂಡ ಮಹಾನ್‌ ಸಾಧಕರು. 20ನೇ ಶತಮಾನದ 69 ಮತ್ತು 70ರ ದಶಕದಲ್ಲಿ ಇಬ್ಬರು ಮಹನೀಯರು ದೇಶದ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ರಂಗಕ್ಕೆ ನೀಡಿದ ಕೊಡುಗೆ ಅಪಾರ. ಮಣಿಪಾಲದಂತಹ ಒಂದು ಪಂಚಾಯತ್‌ ಪ್ರದೇಶ ವನ್ನು ತಮ್ಮ ಕಾರ್ಯ ಕ್ಷೇತ್ರವನ್ನಾಗಿಸಿಕೊಂಡು, ಹೇಗೆ ಆಭಿವೃದ್ಧಿಯನ್ನು ಸಾಧಿಸಬಹುದೆಂಬುದನ್ನು ಪ್ರಪಂಚಕ್ಕೆ ತೋರಿಸಿಕೊಟ್ಟು, ಕುಗ್ರಾಮವಾಗಿದ್ದ ಮಣಿಪಾಲ ವನ್ನು ರಾಷ್ಟ್ರೀಯ ಹಾಗೂ ಅಂತಾ ರಾಷ್ಟ್ರೀಯ ಭೂಪಟದಲ್ಲಿ ಮೂಡಿಸಿದರು. 

ಮಣಿಪಾಲದ ಮಹಾ ಚೇತನ
ಡಾ. ಟಿ.ಎಂ.ಎ.ಪೈಯವರು ಬಾಲ್ಯದಿಂದಲೇ ಸಾಮಾ ಜಿಕ ಕಳಕಳಿಯನ್ನು ಮೈಗೂಡಿಸಿಕೊಂಡು ಬೆಳೆದವರು. ತಮ್ಮೂರಿನ ಶಾಲೆ ಮುಚ್ಚುವ ಸ್ಥಿತಿಯಲ್ಲಿ ದ್ದಾಗ, ವಿದ್ಯಾಭ್ಯಾಸವನ್ನೆ ನಿಲ್ಲಿಸಿ, ಶಾಲೆಯ ಪುನರು ಜ್ಜೀವನಕ್ಕೆ ದೇಣಿಗೆ ಸಂಗ್ರಹಿಸಿ, ಶಿಕ್ಷಕನಾಗಿ ಸೇವೆ ಸಲ್ಲಿಸಿ, ಅದಕ್ಕೆ ಹೊಸ ಜೀವ ಕೊಟ್ಟವರು. ಮುಂದೆ ಡಾಕ್ಟರ್‌ ಆಗಿ ಉಡುಪಿಯಲ್ಲಿ ವೈದ್ಯಕೀಯ ಸೇವೆ ಸಲ್ಲಿಸುತ್ತಿದ್ದಾಗ ಬಡ ಜನರ ಬವಣೆಯನ್ನು ಕಣ್ಣಾರೆ ಕಂಡು ಮರುಗಿ ಇದಕ್ಕೆ ಪರಿಹರಿಸಲು ತಾವೇನಾದರೂ ಮಾಡಬೇಕೆಂದು ಕನಸು ಕಂಡು ಅದನ್ನು ನನಸಾಗಿದವರು. ವೈದ್ಯರಾದ ಇವರು ಸಾಮಾಜಿಕ ಪಿಡುಗುಗಳಿಗೆ ಚಿಕಿತ್ಸೆ ನೀಡುವ ಡಾಕ್ಟರರಾದರು. ಬ್ಯಾಂಕ್‌, ವಿದ್ಯಾ ಸಂಸ್ಥೆಗಳು, ಕೈಗಾರಿಕೆಗಳು ಮತ್ತು ಎಲ್ಲಕ್ಕಿಂತ ಮಿಗಿಲಾಗಿ ತಮ್ಮ ಸುತ್ತಮುತ್ತಲಿನ ಜನರನ್ನೇ ಬಳಸಿಕೊಂಡು ಸಾಧನೆ ಮಾಡಿದರು. ಮಾನವ ಸಂಪನ್ಮೂಲವನ್ನು ಸರಿಯಾಗಿ ಬಳಸಿಕೊಂಡರೆ ಏನನ್ನೂ ಸಾಧಿಸಬಹುದೆಂಬುದಕ್ಕೆ ಒಂದು ಜ್ವಲಂತ ನಿದರ್ಶನ ಡಾ.ಪೈಯವರ ಜೀವನ ಮತ್ತು ಸಾಧನೆ. ದಿ.ಕು.ಶಿ.ಯವರು ಬರೆದಂತೆ “ಕಲ್ಲರಳಿ ಹೂವಾಯಿತು’ ಈ ಮಾತು ಡಾ. ಪೈಗಳ ಸಾಧನೆಗೆ ಹಿಡಿದ ಕನ್ನಡಿ. ಯಾರಿಗೂ ಬೇಡದ ಮಣಿಪಾಲದ ಕಲ್ಲು ಗುಡ್ಡವನ್ನು ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡು ಮನುಷ್ಯನ ನೆಮ್ಮದಿಯ ಬದುಕಿಗೆ ಬೇಕಾಗುವ ಎಲ್ಲ ವ್ಯವಸ್ಥೆಗಳನ್ನು ಇಲ್ಲಿ ಮಾಡಿ ತೋರಿಸಿದರು. ಡಾ. ಪೈಯವರು ತಮ್ಮ ಕೆಲಸದಲ್ಲಿ ಯಾವಾಗಲೂ ಶ್ರೇಷ್ಠತೆಯನ್ನು(Excellence)  ಕಾಯ್ದುಕೊಂಡ ವರು. ಇದರಿಂದಾಗಿಯೇ ಇಂದು ಮಣಿಪಾಲದ ಎಲ್ಲ ಸಂಸ್ಥೆಗಳೂ ಜಾಗತಿಕ ಮಟ್ಟವನ್ನು ತಲುಪಲು ಸಾಧ್ಯವಾಯಿತು. 81 ವರ್ಷಗಳ ಸುದೀರ್ಘ‌ ಹಾಗೂ ಯಶಸ್ವೀ ಜೀವನ ನಡೆಸಿದ ಡಾ.ಪೈ ಅವರು ತಮ್ಮ ಕನಸುಗಳನ್ನು ಜೀವಿತ ಕಾಲದಲ್ಲಿ ನನಸು ಮಾಡಿಕೊಂಡ ಮಹಾನ್‌ ಚೇತನ. ಇಂದು (ಮೇ 29) ಅವರ 39ನೇ ಪುಣ್ಯ ತಿಥಿಯಂದು ಅವರ ನೆನಪು ಮಾಡಿಕೊಳ್ಳುವುದು ನಮ್ಮ ಕರ್ತವ್ಯ. 

ಧೀಮಂತ ನಾಯಕ
ಉಡುಪಿ ಜಿಲ್ಲೆಯ ತೋನ್ಸೆಯಲ್ಲಿ ಹುಟ್ಟಿ, ರಾಷ್ಟ್ರದ ಸಾರ್ವಜನಿಕ ರಂಗದಲ್ಲಿ ವ್ಯಾಪಿಸಿ ಉಜ್ವಲವಾಗಿ ಬೆಳಗಿದ ಧೀಮಂತ ನಾಯಕರಲ್ಲಿ ಟಿ.ಎ.ಪೈ ಅಗ್ರ ಗಣ್ಯರು. ಈ ಪ್ರಪಂಚದ ಚರಿತ್ರೆಯನ್ನು ನೋಡಿದರೆ ಜನ ಸಾಮಾನ್ಯರ ಹಿತಕ್ಕೆ ಸ್ಪಂದಿಸುವ ಉದಾರ ಹೃದಯವಂತರ ಸಂಖ್ಯೆ ವಿರಳ. ಇದನ್ನು ಸಾಧಿಸಲು ಸಾಮರ್ಥ್ಯವಿರುವವರು ಇನ್ನೂ ವಿರಳ. ಹಾಗೆ ಜನಹಿತವನ್ನು ಸಾಧಿಸಲು ತಕ್ಕ ಅವಕಾಶ ಪಡೆಯುವ ಭಾಗ್ಯಶಾಲಿಗಳು ಅಪರೂಪ. ಟಿ.ಎ.ಪೈಯವರು ಈ ಮೂರನ್ನೂ ಪಡೆದು ಜನಸೇವೆಯಲ್ಲಿ ಕೃತಾರ್ಥರಾದ ಉತ್ತುಂಗ ವ್ಯಕ್ತಿ. ಅವರು ಹುಟ್ಟಿ ಬೆಳೆದದ್ದು ಸಾಮಾನ್ಯರಾಗಿ, ಅಸಾಮಾನ್ಯ ಅವಕಾಶಗಳು ಅವ ರನ್ನು ಹುಡುಕಿಕೊಂಡು ಬಂದಾಗ ಅವನ್ನು ಅತ್ಯಂತ ಸಮರ್ಥವಾಗಿ ನಿರ್ವಹಿಸಿದರು. 

ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಅವರು ಮಾಡಿದ ಕ್ರಾಂತಿ ಕಾರಿ ಪ್ರಯೋಗಗಳು ಇಡೀ ದೇಶದ ಆರ್ಥಿಕತೆಯನ್ನು ಪ್ರಭಾವಿಸಿದವು. ಜೀವವಿಮಾ ನಿಗಮದ ಅಧ್ಯಕ್ಷರಾಗಿ ಆ ಸಂಸ್ಥೆಗೆ ಪ್ರಗತಿಯ ಹೊಸ ಆಯಾಮ ನೀಡಿದರು. ಭಾರತೀಯ ಆಹಾರ ನಿಗಮದ ಸ್ಥಾಪಕ ಅಧ್ಯಕ್ಷರಾಗಿ ರಾಷ್ಟ್ರದ ಆಹಾರ ಸಮಸ್ಯೆಗೆ ಪರಿಹಾರ ರೂಪವಾದ ಹಸಿರು ಕ್ರಾಂತಿಗೆ ನಾಂದಿ ಹಾಡಿದರು. ಕೇಂದ್ರ ಸರಕಾರದಲ್ಲಿ ಒಬ್ಬ ಪ್ರಭಾವಿ ಮಂತ್ರಿಯಾಗಿ ತಾವು ನಿರ್ವಹಿಸಿದ ಎಲ್ಲ ಖಾತೆಗಳಲ್ಲಿ ಹೊಸ ಚೈತನ್ಯ ತುಂಬಿದರು. ಅದೂ ಉದ್ಯಮ ಖಾತೆಯಲ್ಲಿ ಅದ್ಭುತವನ್ನು ಸಾಧಿಸಿದರು. ಇವೆಲ್ಲದರ ಜೊತೆಯಲ್ಲಿ ಕೃಷಿ ಅಭಿವೃದ್ಧಿ ಮತ್ತು ಸಹಕಾರಿ ಕ್ಷೇತ್ರಕ್ಕೆ ಅಪೂರ್ವ ಕೊಡುಗೆ ನೀಡಿದರು. ಅವರೊಬ್ಬ ಉತ್ತಮ ನಿರ್ವ ಹಣಾ (Management) ವ್ಯಕ್ತಿಯಾಗಿದ್ದರು. ಅವರು ಸ್ಥಾಪಿಸಿದ IIM ಬೆಂಗಳೂರು ಮತ್ತು TAPMI ಮಣಿಪಾಲ ಇಂದು ಮೆನೇಜ್‌ಮೆಂಟ್‌ ಸಂಸ್ಥೆಗಳ ಮುಂಚೂಣಿಯಲ್ಲಿರುವುದು ಹೆಮ್ಮೆಯ ವಿಚಾರ. 

Advertisement

“ನೀನೊಲಿದರೆ ಕೊರಡು ಕೊನರುವುದಯ್ಯ, ಬರಡು ಹಯನಹುದಯ್ಯ’ ಎಂಬ ಬಸವಣ್ಣನವರ ವಚನ ನೆನಪಿಸುವಂತಿತ್ತು ಅವರ ಬಾಳು. ಅವರು ದೀನ ದುರ್ಬಲರಿಗೆ ಬಲ ನೀಡಿದರು. ದಾರಿ ಕಾಣದವರಿಗೆ ದಾರಿ ತೋರಿದರು. ಹತಾಶರಿಗೆ ಉತ್ಸಾಹ ನೀಡಿದರು. ಸಮಸ್ಯೆಗಳಿಗೆ ಪರಿಹಾರ ನೀಡಿದರು. ಸಂಸ್ಥೆಗಳನ್ನು ಉದ್ಧರಿಸಿದರು. 

ಸ್ವಾತಂತ್ರೊತ್ತರ ತಲೆಮಾರಿನ ರಾಜಕೀಯ ನಾಯಕರಲ್ಲಿ ಟಿ. ಎ. ಪೈ ಉಜ್ವಲ ಜ್ಯೋತಿಯಂತಿದ್ದರು. ಅಸಾಧಾರಣ ಕಾರ್ಯ ಸಾಮರ್ಥ್ಯ, ಅಪ್ಪಟ ಪ್ರಾಮಾ ಣಿಕತೆ, ಮಾನವೀಯ ಅಂತಃಕರಣ, ಜನಸೇವೆಯಲ್ಲಿ ನಿಷ್ಕಳಂಕ ನಿಷ್ಠೆ, ನಿರ್ಮಲ ಚಾರಿತ್ರ್ಯ ಇವುಗಳನ್ನೆಲ್ಲ ಮೇಳೈ ಸಿಕೊಂಡಿದ್ದ ಅವರ ಮೇರು ವ್ಯಕ್ತಿತ್ವಕ್ಕೆ ಸರಿ ಸಾಟಿಯಾದವರು ಬೇರೊಬ್ಬರಿಲ್ಲ. ಮನುಷ್ಯರನ್ನು ಕಟ್ಟುವ (Development of Man) ಅವರ ಪರಿಣತಿ ಆಗಾಧವಾದದ್ದು. ಅದರಿಂದಾಗಿಯೇ ಅವರು ಅಜಾತಶತ್ರು ಎನಿಸಿಕೊಂಡಿದ್ದರು. ಕೇವಲ 59 ವರ್ಷ ಬದು ಕಿದ ಟಿ. ಎ. ಪೈಯವರು ಅವರ ಸಂಪರ್ಕಕ್ಕೆ ಬಂದ ವರ ಮೇಲೆ ಆಗಾಧ ಪರಿಣಾಮ ಬೀರುತ್ತಿದ್ದರು.

ಡಾ. ಟಿ.ಎಂ.ಎ.ಪೈ ಹಾಗೂ ಟಿ.ಎ.ಪೈಗಳು ಸಾವಿನಲ್ಲೂ ಸಾಮ್ಯತೆಯನ್ನು ಕಂಡವರು. ಮೇ 29 ಅವರಿಬ್ಬರ ಪುಣ್ಯತಿಥಿ. ಕಳೆದ 37 ವರ್ಷಗಳಿಂದ ಇದನ್ನು ಒಂದು ಸಾರ್ಥಕ ಕಾರ್ಯಕ್ರಮದೊಂದಿಗೆ ಆಚರಿಸುವ ಪರಂಪರೆಯನ್ನು ಮುಂದುವರಿಸುವ ಹಂಬಲ ನಮ್ಮದು. ಈ ವರ್ಷವೂ ಅರ್ಥಪೂರ್ಣ ಕಾರ್ಯಕ್ರಮದೊಂದಿಗೆ ಸ್ಮತಿ ದಿನವನ್ನು ಬೆಳಿಗ್ಗೆ ಉಡುಪಿಯ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಚರಿಸಲಾಗುತ್ತಿದೆ. 

ಕೆ.ಎಂ.ಉಡುಪ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next