Advertisement
ಶನಿವಾರ ರಾತ್ರಿ ಆರಂಭಗೊಂಡ ಮಳೆ ರಾತ್ರಿಯೂ ನಿರಂತರವಾಗಿ ಸುರಿಯುತ್ತಿತ್ತು. ಭಾರೀ ಮಳೆಯ ಪರಿಣಾಮ ತಗ್ಗು ಪ್ರದೇಶಗಳಿಗೆ ನೀರು ಆವರಿಸಿದ್ದು, ಕೆಲವೊಂದು ಮನೆ, ಅಂಗಡಿಯೊಳಗೆ ನೀರು ನುಗ್ಗಿತ್ತು. ಕೊಟ್ಟಾರಚೌಕಿ ಬಳಿ ನೀರು ಹರಿಯುವ ಚರಂಡಿ ಅವ್ಯವಸ್ಥೆಯ ಪರಿಣಾಮ ಫ್ಲೈಓವರ್ ಕೆಳ ಭಾಗದಲ್ಲಿ ನೀರು ನಿಂತು ಸುತ್ತ ಮುತ್ತಲಿನ ಅಂಗಡಿಯೊಳಗೂ ವ್ಯಾಪಿಸಿತ್ತು. ರಾತ್ರಿ ವೇಳೆ ಅಂಗಡಿಯೊಳಗೆ ನೀರು ಆವರಿಸಿದ್ದು, ಅಂಗಡಿಯೊಳಗಿದ್ದ ವಸ್ತುಗಳಿಗೆ ಹಾನಿ ಉಂಟಾಗಿದೆ. ಭಾರೀ ಮಳೆ ಸುರಿದರೆ ಕಳೆದ ಅನೇಕ ವರ್ಷ ಗಳಿಂದ ಈ ಪ್ರದೇಶದಲ್ಲಿ ಕೃತಕ ನೆರೆ ಸೃಷ್ಟಿ ಯಾಗುತ್ತಿದ್ದು, ಸಮಸ್ಯೆಗೆ ಇನ್ನೂ ಶಾಶ್ವತ ಪರಿಹಾರ ಸಿಕ್ಕಿಲ್ಲ ಎನ್ನುತ್ತಾರೆ ಸ್ಥಳೀಯರು.
ಬಿಜೈ ಬಳಿ ಮನೆಯೊಂದಕ್ಕೆ ಹಾನಿ ಉಂಟಾಗಿದ್ದು, ನೀರುಮಾರ್ಗ ಬಳಿ ಮನೆಯೊಂದರ ಕಾಂಪೌಂಡ್ ಕುಸಿದಿದೆ. ಬಜಾಲ್ ಬಳಿ ಮನೆಯೊಂದಕ್ಕೆ ಹಾನಿ ಉಂಟಾಗಿದೆ. ಮನೆ ಮಂದಿಯನ್ನು ಸಂಬಂಧಿಕರ ಮನೆಗೆ ಕಳುಹಿಸಲಾಗಿದೆ. ಉರ್ವ ಹೊಗೆಬೈಲ್ ಬಳಿ ಮನೆಯೊಂದಕ್ಕೆ ನೀರು ನುಗ್ಗಿತ್ತು. ನೀರು ಮಾರ್ಗದ ಬಳಿ ಕೃಷಿ ಭೂಮಿಗೆ ಮಳೆಯ ನೀರು ತೋಡಿನ ಮೂಲಕ ಹರಿದು ಬಂದು ಅಪಾರ ಹಾನಿಯಾಗಿದೆ. ಬಂಗ್ರ ಕೂಳೂರಿನಲ್ಲಿ ಮಳೆಗೆ ಮನೆಯೊಂದು ಪೂರ್ಣವಾಗಿ ಹಾನಿಗೊಳಗಾಗಿದೆ. ಇದನ್ನೂ ಓದಿ:ಸೋಮಣ್ಣ, ನನ್ನ ನಡುವೆ ಯಾವುದೇ ರೀತಿಯ ಭಿನ್ನಾಭಿಪ್ರಾಯ ಇಲ್ಲ : ಆರ್. ಅಶೋಕ್ ಸ್ಪಷ್ಟನೆ
Related Articles
ಭಾರೀ ಮಳೆಯ ಹಿನ್ನೆಲೆಯಲ್ಲಿ ಮಂಗಳೂರಿನ ಕೆಲವೊಂದು ಕಡೆ ರಸ್ತೆಗಳಲ್ಲಿ ಕೆಸರು, ಚರಂಡಿ ನೀರು ನಿಂತು ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ನಗರದ ಕೊಟ್ಟಾರಚೌಕಿ, ಕೊಟ್ಟಾರ, ಕೊಡಿಯಾಲ್‌ಬೈಲ್, ಪಡೀಲ್, ಕಣ್ಣೂರು, ಬಿಜೈ ಸಹಿತ ವಿವಿಧ ಕಡೆಗಳಲ್ಲಿ ರಸ್ತೆಯಲ್ಲಿ ನೀರು ನಿಂತಿತ್ತು. ಕೆಲವು ಕಡೆಗಳಲ್ಲಿ ಸ್ಮಾರ್ಟ್‌ಸಿಟಿ ಮತ್ತು ಪಾಲಿಕೆಯಿಂದ ವಿವಿಧ ಕಾಮಗಾರಿಗಳು ನಡೆಯುತ್ತಿದ್ದು, ರಸ್ತೆ ಅಗೆಯಲಾಗಿದೆ. ಮಳೆ ಬಂದ ಕಾರಣ, ಡಾಮರು ರಸ್ತೆ ತುಂಬಾ ಮಣ್ಣು ಹರಡಿದ್ದು, ವಾಹನ ಸಂಚಾರಕ್ಕೆ ತೊಂದರೆಯಾಗಿದೆ.
Advertisement
ಉತ್ತಮ ಮಳೆಮಂಗಳೂರು ಗ್ರಾಮಾಂತರ, ಕಾಸರ ಗೋಡು ಜಿಲ್ಲೆಯ ವಿವಿಧೆಡೆ ಕೂಡ ಉತ್ತಮ ಮಳೆಯಾಗಿದೆ. ಆದರೆ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ಹೊಗೆಬೈಲ್‌ನಲ್ಲಿ ಸಮಸ್ಯೆಗಳ ಸರಮಾಲೆ
ಪ್ರತೀ ಬಾರಿ ಮಳೆ ಬಂದರೆ ಹೊಗೆಬೈಲ್ ನಿವಾಸಿಗಳ ಪಾಡು ಹೇಳತೀರದು. ಮಳೆ ನೀರು ಹರಿಯಲು ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ, ಕೃತಕ ನೆರೆ ಆವರಿಸುತ್ತದೆ. ಜೋರಾಗಿ ಮಳೆ ಸುರಿದರೆ ದೈವಜ್ಞ ಕಲ್ಯಾಣ ಮಂಟಪ ಬಳಿಯ ರಸ್ತೆಯಲ್ಲಿ ಕೃತಕ ನೆರೆ ಆವರಿಸುತ್ತದೆ. ಈ ಭಾಗದಲ್ಲಿ ಮಳೆ ನೀರು ಹರಿಯುವ ತೋಡು ಕಿರಿದಾಗಿದ್ದು, ಸರಾಗವಾಗಿ ನೀರು ಹರಿಯುತ್ತಿಲ್ಲ. ಇಲ್ಲಿನ ಯಶಸ್ವಿನಗರ ರಸ್ತೆಯಲ್ಲಿರುವ ತೋಡಿನ ತಡೆಗೋಡೆಯೂ ಕೆಲವು ದಿನಗಳ ಹಿಂದೆಯೇ ಕುಸಿದಿದೆ. ಅಲ್ಲೇ ಪಕ್ಕದಲ್ಲಿ ಟ್ರಾನ್‌ಫಾರ್ಮರ್ ಕಂಬ ಕೂಡ ಇದ್ದು, ಅಪಾಯ ಸೂಚಿಸುತ್ತಿದೆ. ಸ್ಥಳೀಯಾಡಳಿತ ತತ್‌ಕ್ಷಣ ಸಮಸ್ಯೆ ಬಗೆಹರಿಸಬೇಕು ಎನ್ನುತ್ತಾರೆ ಸ್ಥಳೀಯರು.