ಬೆಂಗಳೂರು: ರಾಜಧಾನಿಯಲ್ಲಿ ಚಾಲ್ತಿಯಲ್ಲಿರುವ ಕೆಲವು ಮಸಾಜ್ ಪಾರ್ಲರ್ ಹಾಗೂ ಬಾಡಿ ಸ್ಪಾಗಳಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದರೂ ನಗರ ಪೊಲೀಸರು ಕಾನೂನು ಕ್ರಮ ವಹಿಸದೆ ನಿರ್ಲಕ್ಷ್ಯ ವಹಿಸಿದ ಗಂಭೀರ ಆರೋಪ ಕೇಳಿಬಂದಿದೆ.
ನಗರ ಪೊಲೀಸರ ವಿರುದ್ಧ ಇಂತಹ ಗಂಭೀರ ಆರೋಪ ಮಾಡಿ ಸಾಮಾಜಿಕ ಕಾರ್ಯಕರ್ತ ಜಯಕುಮಾರ್ ಹಿರೇಮಠ್ ಎಂಬುವವರು ಈ ಕುರಿತು ಲೋಕಾಯುಕ್ತಕ್ಕೆ ದೂರು ದಾಖಲಿಸಿದ್ದಾರೆ. ದೂರಿನಲ್ಲಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರನ್ನು ಪ್ರತಿವಾದಿಯನ್ನಾಗಿ ಪರಿಗಣಿಸಲಾಗಿದೆ. ಜಯಕುಮಾರ್ ಅವರ ದೂರನ್ನು ವಿಚಾರಣೆಗೆ ಪರಿಗಣಿಸಿ ಜ.18ರಂದು ವಿಚಾರಣೆ ನಡೆಸಿರುವ ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ ಶೆಟ್ಟಿ ಅವರು, ಆರೋಪದ ದೂರಿನ ಕುರಿತು ಕ್ರಮ ವಹಿಸುವಂತೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರಿಗೆ ಆದೇಶಿಸಿ ನೋಟಿಸ್ ಕೂಡ ಜಾರಿಗೊಳಿಸಿದ್ದಾರೆ.
ದೂರುದಾರರು ಗಂಭೀರವಾದ ಅರೋಪಗಳನ್ನು ಮಾಡಿದ್ದಾರೆ. ಆರೋಪಗಳು ಸತ್ಯವಾಗಿದ್ದು ಪೊಲೀಸರು ಕಾನೂನು ಕ್ರಮವಹಿಸದಿದ್ದಲ್ಲಿ ಕರ್ತವ್ಯಲೋಪವಾಗುತ್ತದೆ ಎಂದು ಲೋಕಾಯುಕ್ತರು ಅಭಿಪ್ರಾಯಪಟ್ಟಿದ್ದಾರೆ. ಅಷ್ಟೇ ಅಲ್ಲದೆ ಆರೋಪಗಳಿಗೆ ಸಂಬಂಧ ಪಟ್ಟಂತೆ ಮಸಾಜ್ ಪಾರ್ಲರ್‌ಗಳ ಚಟುವಟಿಕೆಗಳ ಬಗ್ಗೆ ನಿಗಾವಹಿಸಿ, ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಎಲ್ಲ ಡಿಸಿಪಿಗಳಿಗೆ ಸೂಚನೆ ನೀಡುವಂತೆ ಲೋಕಾಯುಕ್ತರು ಪೊಲೀಸ್ ಆಯುಕ್ತರಿಗೆ ಸೂಚಿಸಿದ್ದಾರೆ.
ದೂರುದಾರರು ಮಾಡಿರುವ ಆರೋಪಗಳಿಗೆ ಸಂಬಂಧಪಟ್ಟಂತೆ ನೀವೇ ಖುದ್ದು ತನಿಖೆ ನಡೆಸಬಹುದು. ಇಲ್ಲವೇ ಡಿಸಿಪಿ ಹಂತದ ಅಧಿಕಾರಿ ತನಿಖೆ ನಡೆಸುವಂತೆ ಕ್ರಮಕೈಗೊಳ್ಳಬೇಕು ಎಂದು ನಿರ್ದೇಶಿಸಿರುವ ಲೋಕಾಯುಕ್ತರು, ದೂರಿನ ವಿಚಾರಣೆಯನ್ನು ಫೆಬ್ರವರಿ 25ಕ್ಕೆ ಮುಂದೂಡಿದ್ದಾರೆ. ಜತೆಗೆ, ಮುಂದಿನ ವಿಚಾರಣೆ ವೇಳೆಗೆ ಕೈಗೊಂಡ ಕ್ರಮಗಳ ಕುರಿತು ಅನುಪಾಲನಾ ವರದಿ ಸಲ್ಲಿಸುವಂತೆಯೂ ಆಯುಕ್ತರಿಗೆ ಆದೇಶಿಸಿದ್ದಾರೆ.ಲೋಕಾಯುಕ್ತರ ಆದೇಶ ಸಂಬಂಧದ ನೋಟೀಸ್ ಕೂಡ ರವಾನೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಪದ್ಮ ಪ್ರಶಸ್ತಿ ಪುರಸ್ಕಾರ: ಅಭಿನಂದನೆ
ಮಸಾಜ್ ಪಾರ್ಲರ್ ಹಾಗೂ ಸ್ಪಾಗಳಲ್ಲಿನ ಅಕ್ರಮ ಚಟುವಟಿಕೆಗಳ ಕುರಿತು ಪೊಲೀಸರು ಕ್ರಮ ವಹಿಸಿಲ್ಲ ಎಂಬ ಆರೋಪ ದೂರಿಗೆ ಸಂಬಂಧಪಟ್ಟಂತೆ ಲೋಕಾಯುಕ್ತ ಕಾಯಿದೆ ಕಲಂ 2 (12) ಅನ್ವಯ ವಿಚಾರಣೆ ನಡೆಸಲಾಗುತ್ತಿದೆ.
ಪಿ.ವಿಶ್ವನಾಥ ಶೆಟ್ಟಿ, ಲೋಕಾಯುಕ್ತ ನ್ಯಾಯಮೂರ್ತಿ
ಮಂಜುನಾಥ್ ಲಘುಮೇನಹಳ್ಳಿ