Advertisement

ನಿರುದ್ಯೋಗ ಬಗೆಹರಿಯದ ಸಮಸ್ಯೆ

12:41 PM Aug 14, 2017 | |

ಹುಬ್ಬಳ್ಳಿ: ಬದುಕಿನಲ್ಲಿ ಭರವಸೆ, ಉತ್ಸಾಹ ಮೂಡಿಸಬೇಕಾದ ಶಿಕ್ಷಣ ಕತ್ತಲು ಆವರಿಸುವಂತೆ ಮಾಡುತ್ತಿದೆ. ನೌಕರಿ ಪಡೆಯುವುದೊಂದೇ ಪರಮೋಚ್ಚ ಗುರಿ ಎಂದು ಬಹುತೇಕ ಯುವ ಸಮೂಹ ಭಾವಿಸಿದ್ದರಿಂದಲೇ ದೇಶಕ್ಕೆ ನಿರುದ್ಯೋಗ ಸವಾಲು ಬಗೆಹರಿಯದ ಸಮಸ್ಯೆಯಾಗಿ ಕಾಡುತ್ತಿದೆ ಎಂದು ರಾಜ್ಯಸಭಾ ಸದಸ್ಯ ಡಾ| ಬಸವರಾಜ ಪಾಟೀಲ ಸೇಡಂ ಹೇಳಿದರು. 

Advertisement

ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆಯ ಹುಬ್ಬಳ್ಳಿ ಘಟಕದ ವಾರ್ಷಿಕ ಸಮ್ಮೇಳನದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಸುಮಾರು 82- 85ಕೋಟಿಯಷ್ಟು ಯುವಕರು ಇದ್ದು, ಪ್ರತಿಯೊಬ್ಬರು ನೌಕರಿ ಮೂಲಕ ಸೇವಕರಾಗಲು ಬಯಸುತ್ತಿದ್ದಾರೆ. ಈ ಸ್ಥಿತಿಯಲ್ಲಿ ದೇವರೇ ಇಳಿದು ಬಂದರೂ ಎಲ್ಲರಿಗೂ ನೌಕರಿ ಕೊಡಿಸುವುದು ಸಾಧ್ಯವಿಲ್ಲ ಎಂದರು.

ನಿರುದ್ಯೋಗಿ ಯುವಕರು ಒಂದು ಕಡೆಯಾದರೆ, ಸರಕಾರಗಳ ಸೌಲಭ್ಯಗಳೊಂದಿಗೆ ಬದುಕುವವರು ಮತ್ತೂಂದು ಗುಂಪಾಗಿದೆ. ಮತಬ್ಯಾಂಕ್‌ ಆಸೆಗಾಗಿ ಸರಕಾರಗಳ ಜನಪ್ರಿಯ ಯೋಜನೆಗಳ ಭರಾಟೆ ಎಲ್ಲಿವರೆಗೆ ಬಂದಿದೆ ಎಂದರೆ ದುಡಿಯುವ ಕೈಗಳನ್ನೇ ಮೈಗಳ್ಳರನ್ನಾಗಿಸುತ್ತಿದೆ. ದೇಶದ ಜನರನ್ನು ಹಾಳು ಮಾಡಲು, ಆರ್ಥಿಕತೆ ನಾಶ ಮಾಡಲು ಹೊರಗಿನ ಶತ್ರುಗಳು ಬೇಕಾಗಿಲ್ಲ.

ದುಡಿಯುವ ಕೈಗಳಿಗೆ ಪುಕ್ಕಟ್ಟೆ ಸೌಲಭ್ಯಗಳನ್ನು ನೀಡಿದರೆ ಸಾಕು ದೇಶವೇ ಅವನತಿಯತ್ತ ಸಾಗಲಿದೆ ಎಂದು ಹೇಳಿದರು. ವರ್ಷಕ್ಕೆ ಸರಿಸುಮಾರು 12ಲಕ್ಷ ಜನರು ಐಎಎಸ್‌ ಪರೀಕ್ಷೆಗೆ ಮುಂದಾಗುತ್ತಾರೆ. ಇದರಲ್ಲಿ 6 ಲಕ್ಷದಷ್ಟು  ಅಭ್ಯರ್ಥಿಗಳು ಮಾತ್ರ ಪರೀಕ್ಷೆ ಬರೆಯತ್ತಾರೆ. ಅದರಲ್ಲಿ 15-20 ಸಾವಿರ ಜನ ಪೂರ್ವಭಾವಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೆ.

ಇದರಲ್ಲಿ 900 ಜನ ಮಾತ್ರ ಅಂತಿಮ ಪರೀಕ್ಷೆಯಲ್ಲಿ  ಉತ್ತೀರ್ಣರಾಗಿ ಆಯ್ಕೆಯಾಗುತ್ತಾರೆ. ಇದರಲ್ಲಿ 1ರಿಂದ 200 ರ್‍ಯಾಂಕ್‌ ಪಡೆದವರು ಮಾತ್ರ ಐಎಎಸ್‌ ಅಧಿಕಾರಿ ಆಗುತ್ತಿದ್ದು, ಉಳಿದವರು ಐಪಿಎಸ್‌, ಐಎಫ್ಎಸ್‌ ಸೇವೆಗೆ ಹೋಗುತ್ತಾರೆ. ಇವರ್ಯಾರಿಗೂ ತೃಪ್ತಿ ಎಂಬುದು ಇರುವುದಿಲ್ಲ. ಇದು ಸಿಗಬೇಕಾಗಿತ್ತು, ಸಿಗಲಿಲ್ಲ ಎಂಬ ಅಸಂತೋಷ ಇದ್ದೇ ಇರುತ್ತದೆ ಎಂದರು. 

Advertisement

ನೈತಿಕ ಮೌಲ್ಯಗಳನ್ನು ಬೆಳೆಸುವ ಶಿಕ್ಷಣ ಇಲ್ಲವಾಗಿದೆ. ಕೇವಲ ಗುಲಾಮರಾಗುವ ಮನೋಸ್ಥಿತಿ ಸೃಷ್ಟಿಸುವ ಶಿಕ್ಷಣ ಬಹುತೇಕರ ಬದುಕಲ್ಲಿ ಬೆಳಕಿನ ಬದಲು ಕತ್ತಲು ಮೂಡಿಸುತ್ತಿದೆ. ನೌಕರಿ ಬದಲು ಸಣ್ಣ ಸಣ್ಣ ಉದ್ಯಮದಾರರಾಗಬೇಕಾಗಿದೆ. ಮುಖ್ಯವಾಗಿ ಸ್ಥಳೀಯ ಉತ್ಪನ್ನಗಳಿಗೆ ಉತ್ತೇಜನ, ಖರೀದಿ ಮೂಲಕ ಪ್ರೋತ್ಸಾಹಿಸುವ ಕೆಲಸ ಮಾಡಿದಾಗ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ. 

ಲೆಕ್ಕಪರಿಶೋಧಕರು ಸಣ್ಣ ಸಣ್ಣ ಉದ್ಯಮಿಗಳನ್ನು ಹುಟ್ಟುಹಾಕುವ ಸಾಮಾಜಿಕ ಸೇವೆಗೆ ಮುಂದಾಗಬೇಕಾಗಿದೆ ಎಂದು ಹೇಳಿದರು. ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆಯ ದಕ್ಷಿಣ ಭಾರತ ಪ್ರಾಂತೀಯ ಪರಿಷತ್‌ ಅಧ್ಯಕ್ಷ ಸಿ.ಎಸ್‌.ಶ್ರೀನಿವಾಸ ಮಾತನಾಡಿ, ಲೆಕ್ಕಪರಿಶೋಧಕರು ದೇಶದ ಬೊಕ್ಕಸಕ್ಕೆ ಸುಮಾರು 10ಲಕ್ಷ ಕೋಟಿ ರೂ. ತೆರಿಗೆ ರೂಪದ ಆದಾಯ ತಂದುಕೊಡುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 

ಜಿಎಸ್‌ಟಿಯಿಂದ ಸುಮಾರು 20-22ಲಕ್ಷ ಕೋಟಿ ರೂ. ಆದಾಯ ನಿರೀಕ್ಷಿಸಲಾಗುತ್ತಿದೆ. ಇತರೆಡೆ ಇರುವಂತೆ ನಮ್ಮಲ್ಲಿಯೂ ಕಳಂಕಿತ ವ್ಯಕ್ತಿಗಳು ಕೆಲವರಿರುತ್ತಾರೆ. ಆದರೆ, ಇಡೀ ವೃತ್ತಿಯನ್ನೇ ಅನುಮಾನದಿಂದ ನೋಡುವಂತಾಗುತ್ತದೆ ಎಂದರು. ಪ್ರಾದೇಶಿಕ ಪರಿಷತ್‌ನ ಸದಸ್ಯ ಬಾಬು ಅಬ್ರಾಹಿಂ, ಪನ್ನುರಾಜ ಮಾತನಾಡಿದರು. ಸಮ್ಮೇಳನ ಕಮಿಟಿ ಚೇರನ್‌ ಸಿ.ಆರ್‌. ಢವಳಗಿ, ಕೆ.ವಿ. ದೇಶಪಾಂಡೆ, ಆರ್‌.ಆರ್‌. ಜೋಶಿ, ಎಫ್.ಎನ್‌. ಹೊನ್ನಬಿಂಗಡಗಿ ಇದ್ದರು. ಹುಬ್ಬಳ್ಳಿ ಘಟಕದ ಅಧ್ಯಕ್ಷ ನಂದರಾಜ್‌ ಖಟಾವ್ಕರ್‌ ಸ್ವಾಗತಿಸಿದರು. ಎಂ.ಸಿ. ಪಿಸೆ ವಂದಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next