ಬೆಂಗಳೂರು: ನಿರುದ್ಯೋಗ ಸಮಸ್ಯೆಯ ಮೇಲೆ ಚರ್ಚೆಗೆ ಅವಕಾಶ ಕಲ್ಪಿಸುವಂತೆ ಆಗ್ರಹಿಸಿ ಕಾಂಗ್ರೆಸ್ ಸದಸ್ಯರು ಸದನದ ಬಾವಿಗೆ ಇಳಿದು ಧರಣಿ ನಡೆಸಿ ಕೆಲಕಾಲ ಕಲಾಪಕ್ಕೆ ಅಡ್ಡಿಪಸಿದ ಪ್ರಸಂಗ ಮಂಗಳವಾರ ನಡೆಯಿತು.
ಮಧ್ಯಾಹ್ನ ಕಲಾಪ ಆರಂಭವಾಗುತ್ತಿದ್ದಂತೆ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್, ರಾಜ್ಯದಲ್ಲಿ ನಿರುದ್ಯೋಗ ತಾಂಡವಾಡುತ್ತಿದ್ದು, ಯುವ ಸಮೂಹ ಫ್ರೀಡಂ ಪಾರ್ಕ್‌ನಲ್ಲಿ ಧರಣಿ ನಡೆಸುತ್ತಿದೆ. ಆ ಹಿನ್ನೆಲೆಯಲ್ಲಿ ನಿಯಮ 59ರ ಅಡಿಯಲ್ಲಿ ಚರ್ಚೆಗೆ ಅವಕಾಶ ಕಲ್ಪಿಸಬೇಕು ಎಂದು ಸಭಾಧ್ಯಕ್ಷರಲ್ಲಿ ಮನವಿ ಮಾಡಿದರು.
ಆದರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಆಡಳಿತ ಪಕ್ಷದ ಸದಸ್ಯರು, ಈ ವಿಷಯವನ್ನು ನಿಯಮ 59ರ ಅಡಿ ಚರ್ಚಿಸಲು ಬರುವುದಿಲ್ಲ. ನಿರುದ್ಯೋಗ ಸಮಸ್ಯೆ ಜತೆಗೆ ಕೆಪಿಎಸ್‌ಸಿ ನೇಮಕಾತಿ ಹಗರಣ, ಪೊಲೀಸ್ ನೇಮಕಾತಿ ಹಗರಣ ಸೇರಿ ಹಲವು ವಿಷಯಗಳನ್ನು ಸೇರಿಸಲಾಗಿದೆ ಎಂದು ದೂರಿದರು.
ರಾಜ್ಯದಲ್ಲಿ 7.5ಲಕ್ಷ ಹುದ್ದೆಗಳಿಗೆ ನೇಮಕಾತಿಯಾಗಬೇಕಾಗಿದ್ದು, ಇದರಲ್ಲಿ ಕೇವಲ 2.5 ಲಕ್ಷ ಹುದ್ದೆಗಳಿಗೆ ಮಾತ್ರ ಸರಕಾರ ನೇಮಕ ಮಾಡಿದೆ. ಖಾಲಿಯಿರುವ ಹುದ್ದೆ ನೇಮಕಾತಿಗೆ ಒತ್ತಾಯಿಸಿ ಯುವ ಜನರು ಧರಣಿ ಕುಳಿತಿದ್ದಾರೆ. ಆ ಹಿನ್ನೆಲೆಯಲ್ಲಿ ತುರ್ತಾಗಿ ಈ ವಿಷಯ ಚರ್ಚಿಸಲು ಅವಕಾಶ ಕಲ್ಪಿಸಬೇಕು ಎಂದು ಕಾಂಗ್ರೆಸ್‌ನ ಬಿ.ಕೆ. ಹರಿಪ್ರಸಾದ್, ಪ್ರಕಾಶ್ ರಾಥೋಡ್, ಪಿ.ಆರ್. ರಮೇಶ್ ಪಟ್ಟು ಹಿಡಿದರು.
ಸಭಾಪತಿ ರಘುನಾಥ್ ರಾವ್ ಮಲ್ಕಾಪುರೆ, ನಿಯಮ 58ರ ಅಡಿಯಲ್ಲಿ ಚರ್ಚೆಗೆ ಅವಕಾಶವಿಲ್ಲ ಎಂದು ಸಮಜಾಯಿಷಿ ನೀಡಿದರು. ಹೀಗಾಗಿ, ಆಡಳಿತ ಮತ್ತು ವಿಪಕ್ಷಗಳ ನಡುವೆ ವಾಗ್ವಾದ ನಡೆಯಿತು. ಕಾಂಗ್ರೆಸ್ ಸದಸ್ಯರ ಹೋರಾಟಕ್ಕೆ ಕೈ ಜೋಡಿಸಿದ ಜೆಡಿಎಸ್‌ನ ಮರಿತಿಬ್ಬೇಗೌಡ, ಭೋಜೇಗೌಡ ನಿಯಮ 68ರ ಅಡಿಯಲ್ಲಿ ಚರ್ಚೆಗೆ ಅವಕಾಶ ನೀಡಿ ಎಂದು ಸಭಾಪತಿಗಳಲ್ಲಿ ಮನವಿ ಮಾಡಿದರು.
ಈ ವೇಳೆ ಸಭಾಧ್ಯಕ್ಷರು ನಿಯಮ 330ರ ಅಡಿಯಲ್ಲಿ ಚರ್ಚಿಸಲು ಅವಕಾಶ ಕಲ್ಪಿಸುವುದಾಗಿ ಹೇಳಿದರು. ಆದರೆ ಇದರಿಂದ ತೃಪ್ತರಾಗದ ಕಾಂಗ್ರೆಸ್ ಸದಸ್ಯರು ಸದನದ ಬಾವಿಗೆ ಇಳಿದು ಧರಣಿ ನಡೆಸಿದರು. ಈ ಸಂದರ್ಭದಲ್ಲಿ ಗದ್ದಲ ಉಂಟಾಗಿ ಸಭಾಪತಿಗಳು ಹತ್ತು ನಿಮಿಷಗಳ ಕಾಲ ಸದನವನ್ನು ಮುಂದೂಡಿದರು. ಬಳಿಕ ಮತ್ತೆ ಸದನ ಆರಂಭವಾದಾಗ ಕಾಂಗ್ರೆಸ್ ಮುಖಂಡರು ಸದನದ ಬಾವಿಯಿಂದ ಕದಲಲಿಲ್ಲ. ಈ ವೇಳೆ ಸಭಾಪತಿಗಳ ಪೀಠಕ್ಕೆ ಗೌರವ ನೀಡುವಂತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ವಿಪಕ್ಷಗಳ ಸದಸ್ಯರಲ್ಲಿ ಮನವಿ ಮಾಡಿದರು. ಕಾಲಾವಕಾಶ ವಿಸ್ತರಣೆಗೆ ಸಭಾಪತಿಗಳು ಒಪ್ಪಿಗೆ ನೀಡಿ ಗುರುವಾರ ಅವಕಾಶ ಕಲ್ಪಿಸುವುದಾಗಿ ಭರಸೆ ನೀಡಿದರು. ಬಳಿಕ ಸುಗಮವಾಗಿ ಕಲಾಪ ನಡೆಯಿತು.