Advertisement

ಬರ, ನೆರೆಯಿಂದಾಗಿ ಈಗ ನಿರುದ್ಯೋಗ “ಖಾತರಿ’

11:30 PM Aug 13, 2019 | Lakshmi GovindaRaj |

ಬೆಂಗಳೂರು: ಇತ್ತ ಬದುಕಿಗೆ ಭದ್ರತೆ ಇಲ್ಲ, ಅತ್ತ ಉದ್ಯೋಗ ಖಾತರಿಯೂ ಇಲ್ಲ, ಬವಣೆ ಕೇಳ್ಳೋರಿಲ್ಲ. ಇದು ಪ್ರವಾಹ ಪೀಡಿತ ಜಿಲ್ಲೆಗಳ ಗ್ರಾಮೀಣ ಭಾಗದ “ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ನರೇಗಾ) ಯೋಜನೆ’ಯ ಫ‌ಲಾನುಭವಿಗಳ ಸದ್ಯದ ಸ್ಥಿತಿ. ಗ್ರಾಮೀಣ ಭಾಗದ ಕೃಷಿ ಕೂಲಿಕಾರರು ಹಾಗೂ ಬಡ ಮಧ್ಯಮ ವರ್ಗದ ಬದುಕಿನ ಆಸರೆಯಾಗಿರುವ ಉದ್ಯೋಗ ಖಾತರಿ ಯೋಜನೆ ಸದ್ಯ ಇದ್ದೂ ಇಲ್ಲದಂತಾಗಿದೆ. ಬರಗಾಲದ ಹಿನ್ನೆಲೆಯಲ್ಲಿ ಕಳೆದ ಐದಾರು ತಿಂಗಳಿಂದ ಕೆಲಸ ಸಿಕ್ಕಿದ್ದು ಅಷ್ಟಕ್ಕಷ್ಟೇ.

Advertisement

ಈಗ ನೆರೆ ಕೆಲಸ ಕಸಿದುಕೊಂಡಿದೆ. ಕೆಲಸಕ್ಕಾಗಿ ಬೇಡಿಕೆ ಸಲ್ಲಿಸಿದರೂ ನೀಡಲಾಗದ ಅಸಹಾಯಕ ಸ್ಥಿತಿಯಲ್ಲಿ ಇಲಾಖೆ ಇದೆ. ಬರದಿಂದ ಕೃಷಿ ಚಟುವಟಿಕೆಗಳು ನಿಂತು ಹೋಗಿತ್ತು. ಚುನಾವಣಾ ನೀತಿ ಸಂಹಿತೆ ಕಾರಣಕ್ಕೆ ಹೊಸ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಕಳೆದೊಂದು ವರ್ಷದಿಂದ ಬೇಡಿಕೆಗೆ ತಕ್ಕಂತೆ ಕೆಲಸ ಸಿಗುತ್ತಿರಲಿಲ್ಲ. ಈಗ ನೆರೆ ಕಾರಣದಿಂದ ಯಾವ ಕೆಲಸಗಳೂ ನಡೆಯುತ್ತಿಲ್ಲ.

ರಾಜ್ಯದಲ್ಲಿ ಹಿಂಗಾರು ಹಂಗಾಮಿನಲ್ಲಿ 30 ಜಿಲ್ಲೆಗಳ 156 ತಾಲೂಕುಗಳು ಬರಪೀಡಿತ ಪ್ರದೇಶಗಳೆಂದು 2018ರ ಡಿಸೆಂಬರ್‌ನಲ್ಲಿ ಘೋಷಣೆ ಮಾಡಲಾಗಿತ್ತು. ಅದಾದ ಬಳಿಕ 56 ತಾಲೂಕುಗಳನ್ನು ತೀವ್ರ ಮಳೆ ಕೊರತೆ ಎದುರಿಸುತ್ತಿರುವ ತಾಲೂಕುಗಳೆಂದು ಸರ್ಕಾರ ಗುರುತಿಸಿದೆ. ಉದ್ಯೋಗ ಖಾತರಿ ಯೋಜನೆಯಡಿ ಬರ ಪರಿಹಾರ ಕಾಮಗಾರಿಗಳು ಕೈಗೆತ್ತಿಕೊಳ್ಳಲು ಅವಕಾಶವಿದ್ದರೂ ಕೇಂದ್ರ ಸರ್ಕಾರದಿಂದ ಬಾಕಿ ಹಣ ಬರದೇ ಇರುವುದರಿಂದ ಹಾಗೂ ಲೋಕಸಭಾ ಚುನಾವಣೆ ನೀತಿ ಸಂಹಿತೆಯ ಕಾರಣದಿಂದಾಗಿ ನರೇಗಾ ಫ‌ಲಾನುಭವಿಗಳಿಗೆ ಕೆಲಸಗಳು ಅಷ್ಟೊಂದು ಸಿಕ್ಕಿರಲಿಲ್ಲ.

“ನಿರುದ್ಯೋಗ ಖಾತರಿ’: ಈಗ ಉತ್ತರ ಕರ್ನಾಟಕ, ಕರಾವಳಿ ಹಾಗೂ ಮಲೆನಾಡು ಸೇರಿ ರಾಜ್ಯದ 17 ಜಿಲ್ಲೆಗಳ 80 ತಾಲೂಕುಗಳನ್ನು ಪ್ರವಾಹಪೀಡಿತ ಎಂದು ಘೋಷಿಸಲಾಗಿದೆ. ಈ ಭಾಗಗಳಲ್ಲಿ ಕಳೆದೊಂದು ತಿಂಗಳಿಂ ದೀಚೆಗೆ ಉದ್ಯೋಗ ಖಾತರಿ ಯೋಜನೆಯಡಿ ಯಾವ ಕೆಲಸಗಳೂ ಕೈಗೆತ್ತಿಕೊಳ್ಳಲು ಆಗುತ್ತಿಲ್ಲ. ಉದ್ಯೋಗಕ್ಕಾಗಿ ಸಾಕಷ್ಟು ಬೇಡಿಕೆಗಳು ಸಲ್ಲಿಕೆಯಾಗುತ್ತಿದ್ದರೂ, ಕೆಲಸ ಕೊಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಹಿಂದೆ ಬರ, ಈಗ ನೆರೆ ಪರಿಣಾಮವಾಗಿ ಉದ್ಯೋಗ ಖಾತರಿ ಫ‌ಲಾನು ಭವಿಗಳಿಗೆ ಸದ್ಯ “ನಿರುದ್ಯೋಗ ಖಾತರಿ’ ಎಂಬಂತಾಗಿದೆ.

ಸಮಸ್ಯೆಗೆ ಕೇಂದ್ರದ ಬಾಕಿ ಕಾರಣ: ಉದ್ಯೋಗ ಖಾತರಿ ಯೋಜನೆಯಡಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾದ ಒಟ್ಟು ಬಾಕಿಯಲ್ಲಿ ವೇತನ ಬಾಬಿ¤ನಲ್ಲಿ 300 ಕೋಟಿಗೂ ಹೆಚ್ಚು ಹಾಗೂ ಸಾಮಗ್ರಿ ಬಾಬಿ¤ನಲ್ಲಿ 500 ಕೋಟಿಗೂ ಹೆಚ್ಚು ಹಣ ಬರಬೇಕಿದೆ. ಹೀಗಾಗಿ, ಒಂದಿಷ್ಟು ಸಮಸ್ಯೆಯಾಗಿದೆ. ಅದಾಗ್ಯೂ ರಾಜ್ಯ ಸರ್ಕಾರದಿಂದ ಹಣ ಬಿಡುಗಡೆಗೆ ಮಾಡಿ ಫ‌ಲಾನುಭವಿಗಳ ಕೂಲಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳಲಾಗುತ್ತಿದೆ. ನರೇಗಾ ಸಂಪೂರ್ಣ ಕೇಂದ್ರ ಸರ್ಕಾರದ ಯೋಜನೆಯಾಗಿರುವುದರಿಂದ ಕೂಲಿ (ವೇತನ) ಹಣ ಕೇಂದ್ರ ಸರ್ಕಾರವೇ ಬಿಡುಗಡೆ ಮಾಡಬೇಕು. ಕೇಂದ್ರದಿಂದ ಹಣ ಬರುವುದು ವಿಳಂಬವಾದರೆ, ಕೂಲಿ ಪಾವತಿ ಸಾಧ್ಯವಾಗುವುದಿಲ್ಲ. ಇದು ಸಮಸ್ಯೆಗೆ ಕಾರಣ ಎಂದು ಗ್ರಾಮೀಣಾಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿ ಹೇಳುತ್ತಾರೆ.

Advertisement

ನೆರೆಯ ಕಾರಣ ಪ್ರವಾಹಪೀಡಿತ ಪ್ರದೇಶಗಳಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ಕೊಡಲು ಆಗುತ್ತಿಲ್ಲ. ಪರಿಸ್ಥಿತಿ ಹತೋಟಿಗೆ ಬರುವವರೆಗೆ ಏನೂ ಮಾಡಲು ಸಾಧ್ಯವಿಲ್ಲ. ಪ್ರವಾಹ ತಗ್ಗಿದ ಮೇಲೆ ರಸ್ತೆ ದುರಸ್ತಿ, ಕೆರೆಗಳ ಹೂಳು ತೆಗೆಯುವುದು ಸೇರಿ ವಿವಿಧ ಪುನರ್‌ನಿರ್ಮಾಣ ಕಾಮಗಾರಿಗಳ ಆರಂಭವಾಗುತ್ತವೆ. ಆಗ ನರೇಗಾ ಫ‌ಲಾನುಭವಿಗಳಿಗೆ ಬೇಡಿಕೆಗೆ ತಕ್ಕಂತೆ ಕೆಲಸ ಸಿಗುತ್ತದೆ.
-ಎಲ್‌.ಕೆ. ಅತೀಕ್‌, ಪ್ರಧಾನ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಇಲಾಖೆ

ಬರ ಹಾಗೂ ನೆರೆ ಪರಿಣಾಮ ಉದ್ಯೋಗ ಖಾತರಿಯಡಿ ಕೆಲಸಗಳು ಸಿಗುತ್ತಿಲ್ಲ. ಈ ವರ್ಷದ ಜೂನ್‌ನಿಂದ ಕೇಂದ್ರ ಸರ್ಕಾರದಿಂದ ಹಣ ಬಂದಿಲ್ಲ. ಹಾಗಾಗಿ ಮಾಡಿದ ಕೆಲಸಕ್ಕೆ ಕೂಲಿ ಕೊಡಲು ಆಗುತ್ತಿಲ್ಲ. ಇಡೀ ಆಡಳಿತ ಯಂತ್ರ ಪ್ರವಾಹ ನಿರ್ವಹಣೆಯತ್ತ ಗಮನ ಹರಿಸಿರುವುದರಿಂದ ನರೇಗಾ ಫ‌ಲಾನುಭವಿಗಳ ಬವಣೆ ಕೇಳ್ಳೋರಿಲ್ಲ.
-ಮಾರುತಿ ಮಾನ್ಪಡೆ, ಕರ್ನಾಟಕ ಪ್ರಾಂತ ರೈತ ಸಂಘದ ಉಪಾಧ್ಯಕ್ಷ

* ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next