Advertisement
ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ಮಂಗಳವಾರ ನಡೆದ ವಾರ್ಷಿಕೋತ್ಸವ ಹಾಗೂ ಪ್ರತಿಭೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ದೇಶದ ಒಟ್ಟಾರೆ ಜನಸಂಖ್ಯೆಯಲ್ಲಿ ಶೇ 50ರಷ್ಟು ಯುವ ಜನಾಂಗದವರಿದ್ದು, ಅವರಲ್ಲಿ ಬಹುತೇಕರು ತಾವು ಪಡೆದ ವಿದ್ಯೆಗೆ ಸೂಕ್ತ ಉದ್ಯೋಗವಿಲ್ಲದೆ ನಿರುದ್ಯೋಗದಿಂದ ಬಳಲುತ್ತಿದ್ದಾರೆ. ನಮ್ಮ ನೆರೆಹೊರೆಯ ರಾಷ್ಟ್ರಗಳಲ್ಲಿ ಆಗುತ್ತಿರುವ ರಕ್ತಕ್ರಾಂತಿಯನ್ನು ಗಮನಿಸಿದರೆ, ಪ್ರಸ್ತುತ ಇರುವ ನಿರುದ್ಯೋಗ ಸಮಸ್ಯೆ ಹೀಗೆ ಮುಂದುವರೆದರೆ, ಭಾರತದಲ್ಲೂ ಕ್ರಾಂತಿಯಾಗುವ ಸಂಭವವಿದೆ ಎಂದು ಎಚ್ಚರಿಸಿದರು.
ಇಂದು ಶಿಕ್ಷಣದ ಗುಣಮಟ್ಟ ಗಮನಾರ್ಹವಾಗಿರದ ಕಾರಣ ಪದವೀಧರರಲ್ಲಿ ಜ್ಞಾನ, ಕೌಶಲ್ಯದ ಕೊರತೆ ಎದ್ದು ಕಾಣುತ್ತಿದ್ದು, ಪರಿಣಾಮವಾಗಿ ಅವರು ಸೂಕ್ತ ಉದ್ಯೋಗವನ್ನು ಸಮರ್ಪಕವಾಗಿ ನಿಭಾಯಿಸಲು ಅಸಕ್ತರಾಗಿದ್ದಾರೆ. ಇದು ನಿರುದ್ಯೋಗ ಸಮಸ್ಯೆಯಾಗಿ ಮಾರ್ಪಟ್ಟಿದೆ. ಈ ನಿಟ್ಟಿನಲ್ಲಿ, ಸರ್ಕಾರಿ ಕಾಲೇಜುಗಳು, ವಿಶ್ವವಿದ್ಯಾನಿಲಯಗಳ ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆ ತರುವ ಅಗತ್ಯವಿದ್ದು, ಅಗತ್ಯ ಕೊಠಡಿ ಸೌಕರ್ಯ, ಅಗತ್ಯ ಸಲಕರಣೆಗಳು, ನುರಿತ ಕ್ಷೇತ್ರ ತಜ್ಞರು, ಪರಿಣಿತರಿಂದ ಬೋಧನೆ, ಮುಂತಾದವನ್ನು ಪ್ರಮುಖ ಮಾನದಂಡವಾಗಿ ಪರಿಗಣಿಸಿ ಅವುಗಳನ್ನು ಒದಗಿಸುವ ಮೂಲಕ ಶಿಕ್ಷಣ ವ್ಯವಸ್ಥೆಯಲ್ಲಿ ಗುರುತರ ಬದಲಾವಣೆ ತರಬೇಕಿದೆ ಎಂದರು.
Related Articles
ರಾಜಕೀಯ ಪಕ್ಷಗಳು ಹಿತಾಸಕ್ತಿಗಾಗಿ ವಿದ್ಯಾರ್ಥಿ ಗಳನ್ನು ಪ್ರತಿಭಟನೆಗೆ ಬಳಸಿಕೊಂಡು ಅವರ ಭವಿಷ್ಯದಲ್ಲಿ ಚೆಲ್ಲಾಟವಾಡುತ್ತಿರುವ ಬೆಳವಣಿಗೆ ನಡೆಯುತ್ತಿದ್ದು, ಅದನ್ನು ವಿದ್ಯಾರ್ಥಿಗಳು ಸೂಕ್ಷ್ಮವಾಗಿ ಗಮನಿಸಿ ಎಚ್ಚೆತ್ತುಕೊಳ್ಳಬೇಕು ಎಂದು ನಾಣಯ್ಯ ಅವರು ಕಿವಿಮಾತು ಹೇಳಿದರು. ವಿದ್ಯಾರ್ಥಿಗಳಿಗೆ ಸ್ಥಳೀಯ, ರಾಜ್ಯ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ರಾಜಕೀಯ ಬೆಳವಣಿಗೆಯ ಬಗ್ಗೆ ಜ್ಞಾನ ಇರಬೇಕಷ್ಟೇ ಹೊರತು ಅದರಲ್ಲಿ ತೊಡಗಿಸಿಕೊಂಡು ತಮ್ಮ ಭವಿಷ್ಯವನ್ನು ಹಾಳುಮಾಡಿಕೊಳ್ಳಬಾರದು. ಅವರವರ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಅವರವರೇ ಶಿಲ್ಪಿಗಳು ಎಂಬ ವಾಸ್ತವವನ್ನು ಎಲ್ಲರೂ ಮನಗಾಣಬೇಕೆಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.
Advertisement
ಶಿಕ್ಷಣವೆಂಬುದು ತಮ್ಮ ತಮ್ಮಲ್ಲಿರುವ ಪ್ರತಿಭೆಯನ್ನು ಹೊರತೆಗೆಯುವ ಒಂದು ವ್ಯವಸ್ಥೆಯಷ್ಟೇ, ಇಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತಾವು ವಿವಿಧ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸದ ಹೊರತು ಪರಿಣಿತರಾಗುವುದು ಸಾಧ್ಯವಿಲ್ಲ ಎಂದು ನಾಣಯ್ಯ ತಿಳಿಸಿದರು.
ಮೊಬೈಲ್ ಬಳಸುವಾಗ ಎಚ್ಚರಸಾಮಾಜಿಕ ಜಾಲತಾಣಗಳಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಮಯವನ್ನು ವ್ಯಯಿಸುತ್ತಿರುವುದು ಹಾಗೂ ಅಪರಿಚಿತರೊಂದಿಗೆ ಅನಗತ್ಯ ವಿಚಾರಗಳಲ್ಲಿ ಸಂಭಾಷಣೆಯಲ್ಲಿ ತೊಡಗುವುದರಿಂದ ಕಲಿಕಾ ಸಮಯದಲ್ಲಿ ತಿಳಿದುಕೊಳ್ಳಲೇಬೇಕಿರುವ ವಿಚಾರಗಳಿಂದ ವಿದ್ಯಾರ್ಥಿಗಳು ವಂಚಿತರಾಗುತ್ತಿದ್ದು, ಈ ನಿಟ್ಟಿನಲ್ಲಿ ಸ್ಮಾರ್ಟ್‌ಫೋನ್ ಗಳನ್ನು ಎಷ್ಟು ಅಗತ್ಯವೋ ಅಷ್ಟಕ್ಕೇ ಸೀಮಿತಗೊಳಿಸಿದರೆ ಅದು ವಿದ್ಯಾರ್ಥಿ ಜೀವನಕ್ಕೂ ಅನುಕೂಲವಾಗುತ್ತದೆ ಎಂದು ನಾಣಯ್ಯ ಹೇಳಿದರು. ಮೊಬೈಲ್ ಫೋನಿನಿಂದ ಎಷ್ಟು ಒಳ್ಳೆಯದಿದೆಯೋ ಅಷ್ಟೇ ಕೆಡುಕೂ ಇದೆ. ಅತಿಯಾದ ಅವಲಂಬನೆ ವಿದ್ಯಾರ್ಥಿ ಜೀವನಕ್ಕೆ ಮಾರಕವಾಗಿ ಪರಿಣಮಿಸಬಹುದು ಎಂದು ಕಿವಿಮಾತು ಹೇಳಿದರು.
ಪ್ರಾಂಶುಪಾಲೆ ಡಾ. ಪಾರ್ವತಿ ಅಪ್ಪಯ್ಯ ಅವರು ಕಾಲೇಜಿನ ವಾರ್ಷಿಕ ವರದಿ ಮಂಡಿಸಿದರು. ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ| ಬಿ ಎಸ್ ನಾಗೇಂದ್ರ ಪ್ರಕಾಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಕಾಲೇಜಿನ ಸರ್ವತೋ ಮುಖ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡುವ ಭರವಸೆ ನೀಡಿದರು. ಈ ಸಂಬಂಧ ಎಲ್ಲರಿಂದಲೂ ಉತ್ತಮ ಸಹಕಾರ ಅಗತ್ಯವಿದೆ ಎಂದರು. ಹಿಂದಿ ವಿಭಾಗದ ಮುಖ್ಯಸ್ಥ ಡಾ| ಶ್ರೀಧರ ಹೆಗಡೆ, ವಿದ್ಯಾರ್ಥಿ ಮುಖಂಡರಾದ ಲೋಹಿತ್ ಎಂ. ಆರ್, ಅಧ್ಯಕ್ಷ, ಜನನಿ ಎಂ.ಡಿ, ಉಪಾಧ್ಯಕ್ಷೆ, ತೃಪ್ತಿ ಕೆ ಪಿ, ಜಂಟಿ ಕಾರ್ಯದರ್ಶಿ, ಸ್ವಪ್ನ ಎಸ್ ಆರ್, ಕ್ರೀಡಾ ಕಾರ್ಯದರ್ಶಿ, ಕಿರಣ್ ಬಿ ಐ, ಕ್ರೀಡಾ ಕಾರ್ಯದರ್ಶಿ, ಅರುಣ್ ಕುಮಾರ್ ಪಿ ಎಸ್, ಸಾಂಸ್ಕೃತಿಕ ಕಾರ್ಯದರ್ಶಿ, ನೀಲಮ್ಮ ಬಿ ಎಂ, ಸಾಂಸ್ಕೃತಿಕ ಕಾರ್ಯದರ್ಶಿ, ಅಹಲ್ಯ ಅಪ್ಪಚ್ಚು ಡಿ ಎ, ಕಾರ್ಯದರ್ಶಿ, ಸುಭಾಶ್ ಸಿ ಎಸ್, ಜಂಟಿ ಕಾರ್ಯದರ್ಶಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬೋಧಕ ಬೋಧಕೇತರ ಸಿಬಂದಿ, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.