Advertisement

ಸರಕಾರಗಳಿಗೆ ನಿರುದ್ಯೋಗ ಸವಾಲು

12:17 PM Nov 25, 2017 | Team Udayavani |

ಕಲಬುರಗಿ: ಇವತ್ತಿನ ಸರಕಾರಗಳಿಗೆ ನಿರುದ್ಯೋಗ ದೊಡ್ಡ ಸವಾಲಾಗಿದೆ. ಇದನ್ನು ಬೇಧಿಸಲಾಗದೆ ಮತ್ತು ಕೊಟ್ಟ ಮಾತನ್ನು ಉಳಿಸಿಕೊಳ್ಳಲಾಗದೆ ರಾಜಕೀಯ ಪಕ್ಷಗಳು ನಿರುದ್ಯೋಗದ ಸುಳಿಯಲ್ಲಿ ಸಿಲುಕುತ್ತಿವೆ. ಇದಕ್ಕೆ ಯುವಜನತೆ ದಾರಿಕಂಡುಕೊಳ್ಳಬೇಕು ಎಂದು ಉದ್ಯೋಗಕ್ಕಾಗಿ ಯವಜನರು ಸಂಘಟನೆಯ ರಾಜ್ಯ ಸಂಚಾಲಕಿ ಮಲ್ಲಿಗೆ ಹೇಳಿದರು.

Advertisement

ಇಲ್ಲಿನ ಕನ್ನಡ ಭವನದಲ್ಲಿ ಶುಕ್ರವಾರ ಉದ್ಯೋಗಕ್ಕಾಗಿ ಯುವಜನತೆ- ಕರ್ನಾಟಕ ಎನ್ನುವ ವಿಷಯದ ಮೇಲೆ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಚುನಾವಣೆಗಳು ಬಂದಾಗ ಈ ಪಕ್ಷಗಳು ಅಷ್ಟು ಲಕ್ಷಗಟ್ಟಲೇ ಉದ್ಯೋಗಗಳನ್ನು ಸೃಷ್ಟಿ ಮಾಡುತ್ತೇವೆ ಎಂದು ನಿರುದ್ಯೋಗಿಗಳಿಗೆ ಭರವಸೆ ನೀಡುತ್ತಾರೆ. ಮತಗಳನ್ನು ಪಡೆದು ಅಧಿಕಾರಕ್ಕೆ ಬಂದ ಮೇಲೆ ಆಲೋಚನೆಗಳೇ ಬರುವುದಿಲ್ಲ. ಹೆಚ್ಚು ಕೇಳಿದರೆ ಕೌಶಲ್ಯವಿಲ್ಲ ಎನ್ನುತ್ತಾರೆ. ಹಾಗಾದರೆ ಕೌಶಲ್ಯವಿಲ್ಲದೆ ಶಿಕ್ಷಣ, ವಿದ್ಯೆಯನ್ನು ಯಾಕೆ ನೀಡಲಾಗುತ್ತಿದೆ. ಪ್ರೌಢಶಾಲೆಯಿಂದ ಪದವಿ ಮುಗಿಯುವುದರೊಳಗೆ ಕೌಶಲ್ಯ ತರಬೇತಿ ಶಿಕ್ಷಣವನ್ನು ನೀಡಬೇಕಲ್ಲವೇ ಎಂದು ಪ್ರಶ್ನಿಸಿದರು.

ನಿರುದ್ಯೋಗ ನಿವಾರಿಸುವ ನಿಟ್ಟಿನಲ್ಲಿ ಸರಕಾರಗಳಿಗೆ ಪ್ರಶ್ನೆ ಮಾಡಬೇಕಿದೆ. ಇವತ್ತು ದೇಶದಲ್ಲಿ ಪ್ರತಿವರ್ಷ 18ರಿಂದ 39 ವಯೋಮಾನದ 1.1ಕೋಟಿ ಯುವಕರು ನಿರುದ್ಯೋಗ ಖಾತೆಗೆ ಸೇರುತ್ತಿದ್ದಾರೆ. ಒಟ್ಟಾರೆ ಶೇ. 28.5 ನಿರುದ್ಯೋಗಿಗಳು ಇದ್ದಾರೆ. ಅವರಿಗೆ ಕೆಲಸ ಕೊಡಿಸುವುದು ದೊಡ್ಡ ಸಮಸ್ಯೆ. ಆದ್ದರಿಂದ ಈ ನಿಟ್ಟಿನಲ್ಲಿ ಉದ್ಯೋಗಕ್ಕಾಗಿ
ಯುವಜನರು ಎನ್ನುವ ಸಂಘಟನೆ ಮೂಲಕ ಕಾಂಗ್ರೆಸ್‌, ಬಿಜೆಪಿ ಮತ್ತು ಜೆಡಿಎಸ್‌ ಸರಕಾರಗಳನ್ನು ಕೇಳ್ಳೋಣ ಎಂದರು. 

ಮುಖ್ಯ ಅತಿಥಿಯಾಗಿದ್ದ ಪತ್ರಕರ್ತ ಸೂರ್ಯಕಾಂತ ಎಂ.ಜಮಾದಾರ, ಇವತ್ತು ನಿರುದ್ಯೋಗ ಎನ್ನುವುದು ನಮ್ಮನ್ನು ಕಾಡುತ್ತಿರುವ ಸಮಸ್ಯೆಗಳಲ್ಲಿ ದೊಡ್ಡದು. ಇದನ್ನು ರಾಜಕಾರಣ ನಿಭಾಯಿಸುತ್ತಿರುವುದರಿಂದ ನಿರುದ್ಯೋಗಿಗಳು ಅವರ ಮತಗಳಾಗಿ ಮತ್ತು ತಂತ್ರವಾಗಿ ಬಳಕೆ ಆಗುತ್ತಿದ್ದಾರೆ. ಯುವಜನತೆ ತಮ್ಮ ಉದ್ಯೋಗ ಸೃಷ್ಟಿಸಿಕೊಳ್ಳುವ ಮತ್ತು ಮಾಡುವ ನಿಟ್ಟಿನಲ್ಲಿ ಸರಕಾರದ ಮುಂದೆ ಮಂಡಿಯೂರುವುದಕ್ಕಿಂತ ಸ್ವಯಂ ಉದ್ಯೋಗ, ಸಾಲ ಮತ್ತು ಘೋಷಿತ ಯೋಜನೆಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಮುನ್ನಡೆಯಬೇಕು. ಆಗ ಕೊಂಚ ಮಟ್ಟಿನ ಪರಿಹಾರ ಕಂಡುಕೊಳ್ಳಲು ಸಾಧ್ಯ. ಇವತ್ತು ಉದ್ಯೋಗಕ್ಕಾಗಿ ಯುವಜನತೆ ಎನ್ನುವ ಸಂಘಟನೆ ಹೊಸದೊಂದು ಕನಸು ಯುವಕರಿಗೆ ತೋರಿಸಿದೆ. ಅದರೆಡೆ ನಾವು ನಡೆಯಬೇಕಿದೆ ಎಂದರು.

Advertisement

ಮುಖ್ಯ ಅತಿಥಿಯಾಗಿದ್ದ ಸಂಘಟನೆ ಅಧ್ಯಕ್ಷ ಜಗಪ್ಪ ತಳವಾರ ಮಾತನಾಡಿ, ಸರಕಾರದ ದ್ವಂದ್ವ ನಿಲುವುಗಳು ಹಾಗೂ ಆಲೋಚನೆಗಳಿಂದಾಗಿ ನಿರುದ್ಯೋಗ ಸೃಷ್ಟಿಯಾಗುತ್ತಿದೆ. ಹಲವಾರು ಇಲಾಖೆಗಳಲ್ಲಿ ಖಾಲಿ ಹುದ್ದೆಗಳಿದ್ದರೂ ಅವುಗಳನ್ನು ಭರ್ತಿ ಮಾಡುತ್ತಿಲ್ಲ. ಅಲ್ಲದೆ, ಇದ್ದವರಿಗೆ ಉದ್ಯೋಗ ನೀಡುವ ಚಟುವಟಿಕೆಗಳು ಅಕ್ಷರವಂತರು,
ಅಧಿಕಾರಿಗಳು ಹಾಗೂ ರಾಜಕೀಯ ವ್ಯಕ್ತಿಗಳಿಂದ ನಡೆಯುತ್ತಿದೆ. ಇದರಿಂದ ಕೌಶಲ್ಯ ಮತ್ತು ಸಾಮರ್ಥ್ಯ ಇರುವವರಿಗೆ ಉದ್ಯೋಗ ಸಿಗುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಸಂಘಟನೆ ಜಿಲ್ಲಾ ಸಂಚಾಲಕ ರಾಜೇಂದ್ರ ರಾಜವಾಳ ಮಾತನಾಡಿದರು. ಸಂಘಟನೆಯ ಲಕ್ಷ್ಮಣ ಮಂಡಲಗೇರಿ ಹಾಗೂ ಇತರರು ಇದ್ದರು. ಸೈಯಬಣ್ಣಾ ಜಮಾದಾರ ನಿರೂಪಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next