ದಾವಣಗೆರೆ: ಹೆಬ್ಬುಲಿ ಚಿತ್ರಕ್ಕೆ ದಾವಣಗೆರೆಯ ಸಿನಿಪ್ರಿಯರು ತೋರಿದ ಅಭಿಮಾನಕ್ಕೆ ಆ ಚಿತ್ರದ ನಾಯಕ ನಟ ಸುದೀಪ್ ಕೃತಜ್ಞತೆ ಸಲ್ಲಿಸಿದ್ದಾರೆ. ಸೋಮವಾರ ನಗರಕ್ಕೆ ಭೇಟಿ ನೀಡಿದ ಸುದೀಪ್, ಅಶೋಕ ಚಿತ್ರಮಂದಿರದ ಬಳಿಯ ಮಂಡಿಪೇಟೆ ರಸ್ತೆಯಲ್ಲಿತೆರೆದ ವಾಹನದಲ್ಲಿ ಅಭಿಮಾನಿಗಳನ್ನು ಉದ್ದೇಶಿಸಿ, ಮಾತನಾಡಿ, ನಾನು ನಿಮ್ಮ ಅಭಿಮಾನಕ್ಕೆ ಋಣಿಯಾಗಿದ್ದೇನೆ.
ಇಷ್ಟು ದೊಡ್ಡ ಮಟ್ಟದ ಯಶಸ್ಸಿಗೆ ಕಾರಣವಾದ ನಿಮಗೆ ಧನ್ಯವಾದ. ನಾನು ಮತ್ತೂಮ್ಮೆ ನಿಮ್ಮನ್ನು ನೋಡಲು ಬರುತ್ತೇನೆ. ಚಿತ್ರ 50 ದಿನ ಪೂರೈಸಿದ ನಂತರ ನಿಮ್ಮೊಂದಿಗೆ ಮತ್ತೂಮ್ಮೆ ಮಾತನಾಡುತ್ತೇನೆ. ಆಗ ಬೆಣ್ಣೆ ದೋಸೆ ಸವಿದೇ ಹೋಗುತ್ತೇನೆ ಎಂದು ಹೇಳಿದರು.
ಹೆಬ್ಬುಲಿ ಚಿತ್ರಕ್ಕೆ ಈ ಮಟ್ಟದ ಪ್ರತಿಕ್ರಿಯೆ ನೀಡಿರುವುದು ನನಗೆ ಅಪಾರ ಸಂತಸ ತಂದಿದೆ. ಎಲ್ಲಾ ಊರುಗಳಲ್ಲೂ ಜನ ಸೇರುತ್ತಿದ್ದಾರೆ. ದಾವಣಗೆರೆಯಲ್ಲಿ ವಿಶೇಷವಾಗಿ ಹೆಚ್ಚಿನ ಅಭಿಮಾನಿಗಳು ಸೇರುತ್ತಾರೆ. ನನಗೆ ಈ ಅಭಿಮಾನಿಗಳೇ ಆಸ್ತಿ. ನಾನು ಚಿತ್ರರಂಗಕ್ಕೆ ಬಂದಾಗಿನಿಂದಲೂ ನನ್ನ ಮೇಲೆ ನೀವು ತೋರಿದ ಪ್ರೀತಿ ಅಪಾರ.
ಅದನ್ನು ಅಳೆಯುವುದು ಅಸಾಧ್ಯ. ನಾನು ನನಗೇ ಎಂದು ಯಾವುದೇ ಆಸ್ತಿ ಮಾಡಿಕೊಂಡಿಲ್ಲ. ನನ್ನ ಆಸ್ತಿ ಏನಿದ್ದರೂ ನೀವೇ ಎಂದು ನೆರೆದಿದ್ದ ಅಭಿಮಾನಿಗಳತ್ತ ಕೈ ತೋರಿ ಹೇಳಿದ ಅವರು, ಇದೇ ಪ್ರೀತಿ ಸದಾ ನನ್ನ ಮೇಲಿರಲಿ. ಕನ್ನಡ ಚಿತ್ರರಂಗದಲ್ಲಿ ಇನ್ನಷ್ಟು ಒಳ್ಳೆಯ ಚಿತ್ರಗಳು ಬರಲಿ ಎಂದು ಹೇಳಿದರು. ಚಿತ್ರದ ನಿರ್ದೇಶಕ ಎಸ್. ಕೃಷ್ಣ ಮಾತನಾಡಿ, ಇದು ನನ್ನ ಮೊದಲ ಚಿತ್ರ.
ಈ ಮಟ್ಟದ ಯಶಸ್ಸು ಸಿಕ್ಕಿರುವುದು ನನಗೆ ಇನ್ನೂ ಉತ್ತಮ ಚಿತ್ರ ಮಾಡಲು ಪ್ರೇರಣೆ ದೊರೆತಿದೆ. ನಿಮ್ಮ ಪ್ರೀತಿಗೆ ನಾನು ಆಭಾರಿ ಎಂದರು. ನಿರ್ಮಾಪಕರಾದ ರಘುನಾಥ, ಉಮಾಪತಿ, ಸುದೀಪ್ ಅಭಿಮಾನಿ ಬಳಗದ ಕುಂದುವಾಡ ಗಣೇಶ್, ಪಣಿಯಾಪುರ ಲಿಂಗರಾಜ್, ಗೋಶಾಲೆ ಬಸವರಾಜ ಇತರರು ಜೊತೆಗಿದ್ದರು.