ವಾಡಿ: ಕಳೆದ 60 ವರ್ಷಗಳಿಂದ ನಮಗೆ ಮೀಸಲಾತಿಯ ಅಂಬೇಡ್ಕರ್, ಸಂವಿಧಾನದ ಅಂಬೇಡ್ಕರ್, ಏಪ್ರಿಲ್ 14ರ ಹಾಗೂ ಡಿಸೆಂಬರ್ 6ರ ಅಂಬೇಡ್ಕರ್ ಬಗ್ಗೆ ಮಾತ್ರ ತಿಳಿಸಿಕೊಡಲಾಗಿದೆ. ಅದರಾಚೆಗಿನ ಅಂಬೇಡ್ಕರ್ ನಮಗೆ ಅರ್ಥವೇ ಆಗಿಲ್ಲ ಎಂದು ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ| ಅಪ್ಪುಗೆರೆ ಸೋಮಶೇಖರ ವಿಷಾದ ವ್ಯಕ್ತಪಡಿಸಿದರು.
ಬೌದ್ಧ ಸಮಾಜದ ವತಿಯಿಂದ ಪಟ್ಟಣದಲ್ಲಿ ಏರ್ಪಡಿಸಲಾಗಿದ್ದ ಡಾ| ಬಿ.ಆರ್. ಅಂಬೇಡ್ಕರ್ ಅವರ 126ನೇ ಜಯಂತಿ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು. ಅಂಬೇಡ್ಕರ್ ಅವರಿಗೆ ಬಾಡಿಗೆ ಮನೆ ಕೊಡದ ಮನುಧರ್ಮಶಾಸ್ತ್ರ ಚಾಲ್ತಿಯಲ್ಲಿದ್ದ ಭಾರತ ಮತ್ತು ಎಲ್ಲರಿಗೂ ಹಕ್ಕುಗಳನ್ನು ಕೊಟ್ಟ ಸಂವಿಧಾನ ಜಾರಿಯಾದ ನಂತರದ ಭಾರತ ನಮಗೆ ಗೊತ್ತಿದೆ.
ಮೀಸಲಾತಿ ಕೇವಲ ದಲಿತರಿಗೆ ಮಾತ್ರ ಎಂಬ ಬಹುದೊಡ್ಡ ತಪ್ಪು ಕಲ್ಪನೆ ದಲಿತೇತರ ವಿದ್ಯಾವಂತರಲ್ಲಿದೆ. ಗುಡಿ, ಚರ್ಚ್, ಮಸೀದಿ, ದೇವರು ರಕ್ಷಣೆಯಾಗುತ್ತಿರುವುದು ಸಂವಿಧಾನದ ಆಶಯದಂತೆ. ಯಾರಿಗೂ ಅನ್ಯಾಯ ಮಾಡದ ಶ್ರೇಷ್ಠ ಸಂವಿಧಾನ ನಮ್ಮದಾಗಿದೆ. ಆದರೂ ಅಂಬೇಡ್ಕರ್ ಜಯಂತಿ ದಲಿತಕೇರಿಗೆ ಮಾತ್ರ ಸೀಮಿತವಾಗಿವೆ.
ದಲಿತೇತರ ಕೇರಿಗಳಲ್ಲಿ ಅಂಬೇಡ್ಕರ್ ಜಯಂತಿ ಆಚರಣೆಗೆ ಬಂದಾಗ ಮಾತ್ರ ಈ ದೇಶದ ಜನರಿಗೆ ಅಂಬೇಡ್ಕರ್ ಅರ್ಥವಾದಂತೆ ಎಂದು ವಿವರಿಸಿದರು. ಉಪನ್ಯಾಸಕಿ ಡಾ| ಜಯದೇವಿ ಗಾಯಕವಾಡ ಮಾತನಾಡಿದರು. ಸಚಿವ ಪ್ರಿಯಾಂಕ್ ಖರ್ಗೆ ಅಂಬೇಡ್ಕರ್ ಮತ್ತು ರಮಾಬಾಯಿ ಅವರ ಭಾವಚಿತ್ರಕ್ಕೆ ಪುಷ್ಪಮಾಲೆ ಅರ್ಪಿಸಿದರು.
ಬೌದ್ಧ ಭಿಕ್ಷು ಸಂಘಾನಂದ, ಧಮ್ಮಾನಂದ ಭಂತೇಜಿ ಸಾನ್ನಿಧ್ಯ ಮತ್ತು ಬೌದ್ಧ ಸಮಾಜದ ಅಧ್ಯಕ್ಷ ಟೋಪಣ್ಣ ಕೋಮಟೆ ಅಧ್ಯಕ್ಷತೆ ವಹಿಸಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯ್ಯದ್ ಮಹೆಮೂದ್ ಸಾಹೇಬ, ಎಪಿಎಂಸಿ ಮಾಜಿ ಅಧ್ಯಕ್ಷ ಶಂಕ್ರಯ್ಯಸ್ವಾಮಿ ಮದರಿ, ದೇವಿಂದ್ರ ನಿಂಬರ್ಗಾ, ಎಸಿಸಿ ಮುಖ್ಯಸ್ಥ ಡಾ| ಎಸ್.ಬಿ. ಸಿಂಗ್,
ಮುಖಂಡರಾದ ಚಂದ್ರಸೇನ ಮೇನಗಾರ, ಇಂದ್ರಜೀತ ಸಿಂಗೆ, ಜಾಫರ್ ಪಟೇಲ್, ಭೀಮರಾವ ದೊರೆ, ಶ್ರವಣಕುಮಾರ ಮೌಸಲಗಿ, ವಿಜಯಕುಮಾರ ಸಿಂಗೆ, ರಾಹುಲ ಮೇನಗಾರ ಸೇರಿದಂತೆ ಪುರಸಭೆ ಸದಸ್ಯರು ಪಾಲ್ಗೊಂಡಿದ್ದರು. ಶರಣಬಸು ಸಿರೂರಕರ ಸ್ವಾಗತಿಸಿದರು. ವಿಕ್ರಮ ನಿಂಬರ್ಗಾ ನಿರೂಪಿಸಿದರು.