Advertisement

Karnataka Govt: ಅರ್ಧ ವಾರ್ಷಿಕ ಪಬ್ಲಿಕ್‌ ಪರೀಕ್ಷೆಗೆ ಸುಪ್ರೀಂ ತಡೆ

09:57 PM Oct 21, 2024 | Team Udayavani |

ನವದೆಹಲಿ: ವಿವಿಧ ತರಗತಿಗಳಿಗೆ ಕರ್ನಾಟಕದಲ್ಲಿ ಅರ್ಧವಾರ್ಷಿಕ ಪಬ್ಲಿಕ್‌ ಪರೀಕ್ಷೆ ನಡೆಸುವುದಕ್ಕೆ ಸುಪ್ರೀಂಕೋರ್ಟ್‌ ಸೋಮವಾರ ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೇ 8, 9 ಮತ್ತು 10ನೇ ತರಗತಿಗಳ ಅರ್ಧವಾರ್ಷಿಕ ಬೋರ್ಡ್‌ ಪರೀಕ್ಷೆಗಳ ಫ‌ಲಿತಾಂಶಕ್ಕೆ ತಡೆ ನೀಡಿದೆ.

Advertisement

ಅನುದಾನ ರಹಿತ ಖಾಸಗಿ ಶಾಲೆಗಳ ನಿರ್ವಹಣಾ ಸಂಘ, ರಾಜ್ಯ ಸರ್ಕಾರದ ವಿರುದ್ಧ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ| ಬೇಲಾ ಎಂ. ತ್ರಿವೇದಿ ಮತ್ತು ನ್ಯಾಯಮೂರ್ತಿ ಸತೀಶ್‌ ಚಂದ್ರ ಅವರಿದ್ದ ಪೀಠವು, ಬೋರ್ಡ್‌ ಪರೀಕ್ಷೆಗಳನ್ನು ನಡೆಸುವ ಮೂಲಕ ವಿದ್ಯಾರ್ಥಿಗಳಿಗೆ ಕರ್ನಾಟಕ ಸರ್ಕಾರ ಕಿರುಕುಳ ನೀಡುತ್ತಿದೆ ಎಂದು ತರಾಟೆಗೆ ತೆಗೆದುಕೊಂಡಿದೆ.

ದೇಶದ ಬೇರೆ ಯಾವುದೇ ರಾಜ್ಯಗಳಲ್ಲಿ ಈ ರೀತಿಯ ವ್ಯವಸ್ಥೆ ಇಲ್ಲ. ಕರ್ನಾಟಕದಲ್ಲಿ ಮಾತ್ರ ಯಾಕೆ ಈ ವಿಧಾನವನ್ನು ಅನುಸರಿಸಲಾಗುತ್ತಿದೆ. ಈ ರೀತಿ ಪರೀಕ್ಷೆ ನಡೆಸುವ ಮೂಲಕ ವಿದ್ಯಾರ್ಥಿಗಳಿಗೆ ಕಿರುಕುಳ ನೀಡುತ್ತಿದ್ದೀರಿ. ಸರ್ಕಾರವಾಗಿರುವ ನೀವು ಈ ರೀತಿ ವರ್ತಿಸಬಾರದು. ಬೋರ್ಡ್‌ ಪರೀಕ್ಷೆ ನಡೆಸುವುದನ್ನು ಪ್ರತಿಷ್ಠೆಯ ವಿಷಯವನ್ನಾಗಿ ಮಾಡಬೇಡಿ. ನಿಮಗೆ ನಿಜವಾಗಲೂ ವಿದ್ಯಾರ್ಥಿಗಳ ಬಗ್ಗೆ ಕಾಳಜಿ ಇದ್ದರೆ ದಯವಿಟ್ಟು ಅತ್ಯುತ್ತಮ ಶಾಲೆಗಳನ್ನು ತೆರೆಯಿರಿ. ಅವರಿಗೆ ಉಸಿರುಗಟ್ಟಿಸುವ ವಾತಾವರಣ ಸೃಷ್ಟಿಸಬೇಡಿ ಎಂದು ಕರ್ನಾಟಕದ ಪರವಾಗಿ ಹಾಜರಾಗಿದ್ದ ಹಿರಿಯ ನ್ಯಾಯವಾದಿ ದೇವದತ್ತ ಕಾಮತ್‌ ಅವರಿಗೆ ತಿಳಿಸಿತು.

ಈಗ ಕರ್ನಾಟಕ ಅನುಸರಿಸುತ್ತಿರುವ ಈ ಪರೀಕ್ಷಾ ಮಾದರಿಯನ್ನು ಬೇರೆ ಯಾವ ರಾಜ್ಯವೂ ಅನುಸರಿಸುತ್ತಿಲ್ಲ ಎಂದೂ ಇದೇ ವೇಳೆ ಪೀಠವು ಅಭಿಪ್ರಾಯಪಟ್ಟಿತು. ಈ ವೇಳೆ, 5, 8, 9 ಮತ್ತು 10ನೇ ತರಗತಿಗಳಿಗೆ 7 ಗ್ರಾಮಾಂತರ ಜಿಲ್ಲೆಗಳಲ್ಲಿ ಪರೀಕ್ಷೆ ನಡೆಸುವ ಸೂಚನೆಯನ್ನು ಕರ್ನಾಟಕ ಸರ್ಕಾರ ವಾಪಸ್‌ ಪಡೆದುಕೊಂಡಿದೆ ಎಂದು ಮಾಹಿತಿಯನ್ನು ಕಾಮತ್‌ ಅವರು ಪೀಠದ ಗಮನಕ್ಕೆ ತಂದರು. ಆಗ ಪೀಠವು, ಮುಂದಿನ 4 ವಾರಗಳಲ್ಲಿ ಪರೀಕ್ಷೆಯ ಸೂಕ್ತ ವಿವರಗಳ ಅಫಿಡವಿಟ್‌ ಸಲ್ಲಿಸುವಂತೆ ಕರ್ನಾಟಕ ಸರ್ಕಾರಕ್ಕೆ ಸೂಚಿಸಿತು.

ಏನಿದು ವಿವಾದ?:
ವಿವಿಧ ತರಗತಿಗಳಿಗೆ ಬೋರ್ಡ್‌ ಪರೀಕ್ಷೆ ನಡೆಸುವ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಂಡಿದ್ದು, ಇದನ್ನು ಖಾಸಗಿ ಶಾಲೆಗಳ ಒಕ್ಕೂಟ ವಿರೋಧಿಸಿ ಹೈಕೋರ್ಟ್‌ ಮೆಟ್ಟಿಲೇರಿತ್ತು. ಹೈಕೋರ್ಟ್‌ನ ಏಕ ಸದಸ್ಯಪೀಠ ಇದಕ್ಕೆ ನಿರ್ಬಂಧ ವಿಧಿಸಿತ್ತು. ಬಳಿಕ ವಿಭಾಗೀಯ ಪೀಠ ಏಕಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಿ ಪರೀಕ್ಷೆ ನಡೆಸಲು ಅನುಮತಿ ನೀಡಿತ್ತು. ಇದನ್ನು ಪ್ರಶ್ನಿಸಿ ಖಾಸಗಿ ಶಾಲೆಗಳ ಒಕ್ಕೂಟ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದು, ಸುಪ್ರೀಂ ಮತ್ತೊಮ್ಮೆ ಫ‌ಲಿತಾಂಶ ಪ್ರಕಟಿಸುವುದಕ್ಕೆ ತಡೆ ನೀಡಿದೆ.

Advertisement

ಏನಿದು ವಿವಾದ?
– ಹೈಸ್ಕೂಲ್‌ನ ವಿವಿಧ ತರಗತಿಗಳಿಗೆ ಬೋರ್ಡ್‌ ಪರೀಕ್ಷೆಗೆ ರಾಜ್ಯ ಸರ್ಕಾರ ನಿರ್ಧಾರ
– ನಿರ್ಧಾರ ವಿರೋಧಿಸಿ ಖಾಸಗಿ ಶಾಲೆಗಳ ಒಕ್ಕೂಟದಿಂದ ಹೈಕೋರ್ಟ್‌ಗೆ ಮೊರೆ
– ವಿಚಾರಣೆ ಬಳಿಕ ತೀರ್ಮಾನಕ್ಕೆ ತಡೆ. ವಿಭಾಗೀಯ ಪೀಠದಿಂದ ಪರೀಕ್ಷೆಗೆ ಅನುಮತಿ
– ಖಾಸಗಿ ಶಾಲೆಗಳ ಒಕ್ಕೂಟದಿಂದ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ

ತಡೆ ನೀಡಿದ್ದೇಕೆ?
– ಬೇರೆ ಯಾವುದೇ ರಾಜ್ಯಗಳಲ್ಲಿ ಅರ್ಧ ವಾರ್ಷಿಕ ಪಬ್ಲಿಕ್‌ ಪರೀಕ್ಷೆ ವ್ಯವಸ್ಥೆ ಜಾರಿಯಲ್ಲಿಲ್ಲ
– ಈ ರೀತಿ ಪರೀಕ್ಷೆ ನಡೆಸುವುದರಿಂದ ವಿದ್ಯಾರ್ಥಿಗಳಿಗೆ ಕಿರುಕುಳ ನೀಡಿದಂತಾಗುತ್ತದೆ
– ಆಡಳಿತಗಾರರಾಗಿ ನೀವು ಈ ರೀತಿ ವರ್ತಿಸುವುದು ಸರಿಯಲ್ಲ
– ಬೋರ್ಡ್‌ ಪರೀಕ್ಷೆ ಸರ್ಕಾರದ ಪ್ರತಿಷ್ಠೆಯಾಗಬಾರದರು
– ಉತ್ತಮ ಶಾಲೆ ತೆರೆಯುವುದು ಸರ್ಕಾರದ ಉದ್ದೇಶವಾಗಬೇಕು

Advertisement

Udayavani is now on Telegram. Click here to join our channel and stay updated with the latest news.

Next