Advertisement
ಬಹುವರ್ಷದ ಬೇಡಿಕೆಯಾಗಿದ್ದ ಎಪಿಎಂಸಿ ರೈಲ್ವೇ ಮಾರ್ಗದ ಅಂಡರ್‌ಪಾಸ್ ಕಾಮಗಾರಿ ಉದ್ಘಾಟನೆಗೊಂಡು ತಿಂಗಳು ಕಳೆದಿದೆ. ಆದರೆ ಸಂಚಾರಕ್ಕೆ ಇನ್ನೂ ಮುಕ್ತವಾಗಿಲ್ಲ. ಇದರಿಂದ ವಾಹನ ಸವಾರರು ಹಳೆಯ ರೈಲ್ವೇ ಗೇಟಿನ ಮಾರ್ಗದಲ್ಲೇ ಸಂಚಾರ ಮುಂದುವರಿಸಿದ್ದಾರೆ.
ನಗರದ ಅರುಣಾ ಚಿತ್ರ ಮಂದಿರದ ಬಳಿಯಿಂದ ಸಾಲ್ಮರ ಎಪಿಎಂಸಿ ಮೂಲಕ ಕೇಪುಳು ಸಂಪರ್ಕ ರಸ್ತೆಯಲ್ಲಿ ರೈಲ್ವೇ ಮಾರ್ಗ ಇದ್ದು ಅಲ್ಲಿ ರೈಲು ಹಾದು ಹೋಗುವ ವೇಳೆ ಗೇಟು ಅಳವಡಿಕೆಯಿಂದ ನೂರಾರು ವಾಹನಗಳು ರಸ್ತೆಯ ಇಕ್ಕೆಲಗಳಲ್ಲಿ ಕಾಯಬೇಕಾದ ಸ್ಥಿತಿ ಇತ್ತು. ಹಲವು ದಶಕಗಳ ಬೇಡಿಕೆಗೆ ಸಂಸದ ನಳಿನ್ ಕುಮಾರ್ ಕಟೀಲು, ಮಾಜಿ ಶಾಸಕ ಸಂಜೀವ ಮಠಂದೂರು, ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು ಅವರ ಪ್ರಯತ್ನದ ಫಲವಾಗಿ ರಾಜ್ಯ ಸರಕಾರ ಹಾಗೂ ರೈಲ್ವೇ ಇಲಾಖೆಯ ಸಹಭಾಗಿತ್ವದಲ್ಲಿ 13 ಕೋ.ರೂ. ವೆಚ್ಚದ ಅಂಡರ್‌ಪಾಸ್ ನಿರ್ಮಾಣಕ್ಕೆ 2022ರ ಮೇ 21ರಂದು ಶಿಲಾನ್ಯಾಸ ನೆರವೇರಿಸಲಾಗಿತ್ತು. ಅಪೂರ್ಣ ಕಾಮಗಾರಿಯ ಉದ್ಘಾಟನೆ
ರೈಲ್ವೇ ರಸ್ತೆಯ ಅಂಡರ್‌ಪಾಸ್ ಕಾಮಗಾರಿಗೆ 10 ತಿಂಗಳು ಕಾಲಾವಕಾಶ ನೀಡಲಾಗಿತ್ತು. ವಿಧಾನಸಭಾ ಚುನಾವಣೆ ಘೋಷಣೆಯಾಗುವ ಹಿನ್ನೆಲೆಯಲ್ಲಿ ರಸ್ತೆ ಕಾಮಗಾರಿ ಪೂರ್ಣಗೊಳ್ಳುವ ಮೊದಲೇ (ಮಾ. 26) ಉದ್ಘಾಟನೆ ನಡೆಸಲಾಗಿತ್ತು. ಸುಮಾರು 600 ಮೀಟರ್ ಉದ್ದದ ಈ ರಸ್ತೆಯನ್ನು ಚತುಷ್ಪಥವಾಗಿ ಅಭಿವೃದ್ಧಿ ಪಡಿಸಲಾಗಿತ್ತಾದರೂ, ಉದ್ಘಾಟನೆಯ ಸಮಯದಲ್ಲಿ ದ್ವಿಪಥ ರಸ್ತೆಗೆ ಜಲ್ಲಿ ಹಾಕಿಬಿಡಲಾಗಿತ್ತು. ಪ್ರಸ್ತುತ ಕಾಮಗಾರಿ ನಡೆಯುತ್ತಿದೆ. ಚತುಷ್ಪಥದ ರಸ್ತೆಯಲ್ಲಿ ದ್ವಿಪಥ ಮಾರ್ಗ ತೆರೆದುಕೊಂಡಿದ್ದು ವಾಹನ ಸಂಚಾರಕ್ಕೆ ಅವಕಾಶ ಇದೆಯೋ ಅನ್ನುವುದನ್ನು ರೈಲ್ವೇ ಇಲಾಖೆ ಇನ್ನೂ ಸ್ಪಷ್ಟಪಡಿಸದ ಕಾರಣ ವಾಹನ ಸವಾರರು ಹಳೆ ಮಾರ್ಗದಲ್ಲೇ ಸಂಚಾರ ಮುಂದುವರಿಸಿದ್ದಾರೆ.
Related Articles
ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಅಂಡರ್ ಪಾಸ್ ಸಮೀಪ ಖಾಸಗಿ ಜಾಗ ಸ್ವಾಧೀನ ಪ್ರಕ್ರಿಯೆ ನಡೆ ಯಬೇಕಾಗಿದೆ. ಜಾಗದ ಮಾಲಕರು ತಕ್ಕ ಮೊತ್ತಕ್ಕೆ ಬೇಡಿಕೆ ಸಲ್ಲಿಸಿದ್ದು ಇದು ಸರಕಾರದ ಹಂತದಲ್ಲಿ ತೀರ್ಮಾನವಾಗಬೇಕಿದ್ದು , ಕಾಮಗಾರಿ ನಡೆಯದೆ ಉಳಿದುಕೊಂಡಿದೆ. ಇದರಿಂದ ಸದ್ಯ ಕಾಮಗಾರಿ ಪೂರ್ಣಗೊಳ್ಳುವುದು ಅನುಮಾನವಾಗಿದೆ.
Advertisement
ಅನುದಾನ ಬಾಕಿರೈಲ್ವೇ ಇಲಾಖೆ ಹಾಗೂ ಕರ್ನಾಟಕ ಸರಕಾರ ಶೇ. 50ರ ಒಪ್ಪಂದದಲ್ಲಿ ಕಾಮಗಾರಿಯನ್ನು ಮುಂದುವರಿಸುವ ಒಪ್ಪಂದ ಮಾಡಿಕೊಂಡಿದ್ದು, ಕಾಮಗಾರಿ ಪೂರ್ಣವಾಗಿದ್ದರೂ, 2023ರ ಫೆ. 1ರ ವರೆಗೆ ಕರ್ನಾಟಕ ಸರಕಾರದಿಂದ ಬರಬೇಕಾಗಿದ್ದ ಶೇ.50 ಅನುದಾನ ಬಾಕಿ ಉಳಿದಿದೆ ಎಂದು ಮಾಹಿತಿ ಹಕ್ಕಿನಲ್ಲಿ ಕೇಳಿದ ಮಾಹಿತಿಗೆ ರೈಲ್ವೇ ಇಲಾಖೆ ಮಾಹಿತಿ ನೀಡಿತ್ತು. ಪೂರ್ಣಗೊಂಡ ಬಳಿಕವೇ ಉದ್ಘಾಟನೆಯಾಗಲಿ
ಕಾಮಗಾರಿ ಪೂರ್ಣವಾಗದೆ ಅಂಡರ್ ಪಾಸ್ ಉದ್ಘಾಟನೆ ಮಾಡಿದ್ದರಿಂದ ಎಲ್ಲರಿಗೂ ರಸ್ತೆ ತೆರೆದುಕೊಂಡಿದೆ ಎಂಬ ಸಂದೇಶ ಹೋಗಿದೆ. ಯಾವುದೇ ಕೆಲಸ ಪೂರ್ಣಗೊಂಡ ಬಳಿಕವಷ್ಟೇ ಉದ್ಘಾಟನೆ ಆಗಬೇಕು.
-ದಿನೇಶ್ ಪೂಜಾರಿ,
ವಾಹನ ಸವಾರ