Advertisement

ನಿದಹಾಸ್‌ ಟಿ20 ಕ್ರಿಕೆಟ್‌ಸರಣಿ: ಭಾರತದ ಮೇಲೆ ಬಾಂಗ್ಲಾ ಭಾರ

06:00 AM Mar 08, 2018 | |

ಕೊಲಂಬೊ: ಆತಿಥೇಯ ಶ್ರೀಲಂಕಾ ವಿರುದ್ಧ ಆರಂಭಿಕ ಪಂದ್ಯವನ್ನು ಸೋತ ಒತ್ತಡದಲ್ಲಿರುವ ಭಾರತ ತಂಡ ಗುರುವಾರ ಟಿ20 ತ್ರಿಕೋನ ಸರಣಿಯ ತನ್ನ ದ್ವಿತೀಯ ಪಂದ್ಯವನ್ನು ಅಚ್ಚರಿಯ ಫ‌ಲಿತಾಂಶಕ್ಕೆ ಹೆಸರುವಾಸಿಯಾದ ಬಾಂಗ್ಲಾದೇಶ ವಿರುದ್ಧ ಆಡಲಿದೆ. ಈ ಪಂದ್ಯವನ್ನು ಗೆದ್ದರಷ್ಟೇ ರೋಹಿತ್‌ ಪಡೆಯ ದ್ವಿತೀಯ ಸುತ್ತಿನ ಹೋರಾಟಕ್ಕೆ ಹೊಸ ಚೈತನ್ಯ ಲಭಿಸಲಿದೆ. ಸೋತರೆ ಫೈನಲ್‌ ಪ್ರವೇಶದ ಹಾದಿ ದುರ್ಗಮಗೊಳ್ಳಲಿದೆ!

Advertisement

ಕಳೆದ ಶ್ರೀಲಂಕಾ ಪ್ರವಾಸದ ವೇಳೆ ಭಾರತ 3 ಟಿ20 ಸಹಿತ ಎಲ್ಲ 9 ಅಂತಾರಾಷ್ಟ್ರೀಯ ಪಂದ್ಯಗಳನ್ನು ಗೆದ್ದ ಅಮೋಘ ಸಾಧನೆಗೈದಿತ್ತು. ಹೀಗಾಗಿ ಈ ಸಲವೂ ಗೆಲುವಿನ ಲಯವನ್ನು ಮುಂದುವರಿಸೀತೆಂಬ ದೂರದ ನಿರೀಕ್ಷೆ ಇತ್ತು. ಆದರೆ ಮಂಗಳವಾರ ರಾತ್ರಿ ಈ ನಿರೀಕ್ಷೆ ಹುಸಿಯಾಗಿದೆ. ಭಾರತ 175 ರನ್‌ ಪೇರಿಸಿಯೂ ಸೋಲನುಭವಿಸುವಂತಾಯಿತು.

ಶ್ರೀಲಂಕಾದ ಈ ಗೆಲುವನ್ನು ಅಚ್ಚರಿಯ ದೃಷ್ಟಿಯಲ್ಲಿ ನೋಡಲಾಗುತ್ತಿದೆ. ಆದರೆ ಆತಿಥೇಯ ಪಡೆ ಭಾರತಕ್ಕಿಂತ ಹೆಚ್ಚು ಬಲಿಷ್ಠವಾಗಿತ್ತು ಎಂಬುದನ್ನು ಮರೆಯುವಂತಿಲ್ಲ. ಕಾರಣ, ಈ ಕಿರು ಸರಣಿಗಾಗಿ ಭಾರತದ ಸ್ಟಾರ್‌ ಆಟಗಾರರಿಗೆಲ್ಲ ವಿಶ್ರಾಂತಿ ನೀಡಲಾಗಿತ್ತು. ಮುಖ್ಯವಾಗಿ ಟೀಮ್‌ ಇಂಡಿಯಾ ಬೌಲಿಂಗ್‌ ವಿಭಾಗ ಬಹಳ ದುರ್ಬಲವಾಗಿದೆ. ಹೀಗಾಗಿ ತಂಡದ ಸಾಮರ್ಥ್ಯವನ್ನು “ಕೊಹ್ಲಿ ಪಡೆ’ಯೊಂದಿಗೆ ಹೋಲಿಸುವಂತಿರಲಿಲ್ಲ. ಇದು ಮೊದಲ ಪಂದ್ಯದಲ್ಲಿ ನಿಜವಾಗಿದೆ.

ಪವರ್‌ ಪ್ಲೇ ವೈಫ‌ಲ್ಯ
ನಾಯಕ ರೋಹಿತ್‌ ಶರ್ಮ, ಟಿ20ಯಲ್ಲಿ ಜೀವನಶ್ರೇಷ್ಠ 90 ರನ್‌ ಬಾರಿಸಿದ ಶಿಖರ್‌ ಧವನ್‌ ಹೇಳುವಂತೆ, ಭಾರತ “ಪವರ್‌ ಪ್ಲೇ’ ಅವಧಿಯಲ್ಲಿ ನಿರೀಕ್ಷಿತ ರನ್‌ ಗಳಿಸದಿದ್ದುದು ಸೋಲಿಗೊಂದು ಕಾರಣ. ರೋಹಿತ್‌ ಶರ್ಮ (0) ಮತ್ತು ಸುರೇಶ್‌ ರೈನಾ (1) ಅವರನ್ನು 2 ಓವರ್‌ ಆಗುವಷ್ಟರಲ್ಲಿ ಕಳೆದುಕೊಂಡ ಭಾರತ ಸಹಜವಾಗಿಯೇ ಪವರ್‌ ಪ್ಲೇ ವೇಳೆ ಕುಂಟತೊಡಗಿತು. ಈ ಅವಧಿಯಲ್ಲಿ 40 ರನ್ನಷ್ಟೇ ಬಂತು. ಶ್ರೀಲಂಕಾ ಇದೇ ವೇಳೆ 75 ರನ್‌ ಪೇರಿಸಿ ಒತ್ತಡವಿಲ್ಲದೆ ಆಡಿತು. ವನ್‌ಡೌನ್‌ ಬ್ಯಾಟ್ಸ್‌ಮನ್‌ ಕುಸಲ್‌ ಪೆರೆರ ಭಾರತದ ಸಾಮಾನ್ಯ ಮಟ್ಟದ ದಾಳಿಯನ್ನು ಪುಡಿಗುಟ್ಟಿ 37 ಎಸೆತಗಳಿಂದ 66 ರನ್‌ (6 ಬೌಂಡರಿ, 4 ಸಿಕ್ಸರ್‌) ಬಾರಿಸಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. ವಾಷಿಂಗ್ಟನ್‌ ಸುಂದರ್‌ ಹೊರತುಪಡಿಸಿ ಉಳಿದವರ್ಯಾರೂ ಬೌಲಿಂಗಿನಲ್ಲಿ ಮಿಂಚಲಿಲ್ಲ. ಬುಮ್ರಾ, ಭುವನೇಶ್ವರ್‌, ಕುಲದೀಪ್‌ ಗೈರು ಎದ್ದು ಕಂಡಿತು.

ಟಿ20 ಕ್ರಿಕೆಟಿಗೆ ಹೇಳಿ ಮಾಡಿಸಿದಂಥ ಬ್ಯಾಟಿಂಗ್‌ ಸರದಿಯನ್ನು ಹೊಂದಿರುವ ಬಾಂಗ್ಲಾದೇಶ ವಿರುದ್ಧವೂ ಭಾರತದ ಬೌಲಿಂಗ್‌ ಕ್ಲಿಕ್‌ ಆಗದೇ ಹೋದರೆ… ಎಂಬ ಆತಂಕ ಸಹಜ.

Advertisement

“ನಮ್ಮ ಬೌಲರ್‌ಗಳು ಗರಿಷ್ಠ ಪ್ರಯತ್ನ ಮಾಡಿದ್ದಾರೆ. ಆದರೆ ಕೆಲವು ಸಲ ಯೋಜನೆಗಳು ಯಶಸ್ವಿಯಾಗುವುದಿಲ್ಲ. ಈ ಬೌಲರ್‌ಗಳು ಈ ಸರಣಿಗೆ ಹೊಸಬರಾದರೂ ಇವರೆಲ್ಲ ಟಿ20ಯಲ್ಲಿ ಸಾಕಷ್ಟು ಅನುಭವಿಗಳೇ ಆಗಿದ್ದಾರೆ. ಇವರ ಮೇಲೆ ನನಗೆ ಅಪಾರ ವಿಶ್ವಾಸವಿದೆ’ ಎಂದು ರೋಹಿತ್‌ ಶರ್ಮ ಹೇಳಿದ್ದಾರೆ.

ಮೊದಲು ಬ್ಯಾಟಿಂಗ್‌ ನಡೆಸಿದ ಭಾರತ 5 ವಿಕೆಟಿಗೆ 174 ರನ್‌ ಗಳಿಸಿದರೆ, ಶ್ರೀಲಂಕಾ 18.3 ಓವರ್‌ಗಳಲ್ಲಿ 5ಕ್ಕೆ 175 ರನ್‌ ಬಾರಿಸಿ ಗೆದ್ದುಬಂದಿತ್ತು. ಕುಸಲ್‌ ಪೆರೆರ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ಕಾಡೀತು ಶಕಿಬ್‌ ಗೈರು
ಇತ್ತೀಚೆಗೆ ತನ್ನದೇ ನೆಲದಲ್ಲಿ ಶ್ರೀಲಂಕಾ ವಿರುದ್ಧ ಆಡಿದ ಎಲ್ಲ 3 ಮಾದರಿಯ ಕ್ರಿಕೆಟ್‌ನಲ್ಲೂ ಸರಣಿ ಸೋತ ಬಾಂಗ್ಲಾದೇಶ ಕೂಡ ಒತ್ತಡದಲ್ಲಿದೆ. ನಾಯಕ, ಮ್ಯಾಚ್‌ ವಿನ್ನಿಂಗ್‌ ಆಲ್‌ರೌಂಡರ್‌ ಶಕಿಬ್‌ ಅಲ್‌ ಹಸನ್‌ ಅನುಪಸ್ಥಿತಿ ತಂಡಕ್ಕೆ ಎದುರಾಗಿರುವ ದೊಡ್ಡ ಆಘಾತ. ಶಕಿಬ್‌ ಗೈರಲ್ಲಿ ಮಹಮದುಲ್ಲ ತಂಡವನ್ನು ಮುನ್ನಡೆಸುತ್ತಿದ್ದಾರೆ.

“ತಂಡವೀಗ ಗೆಲುವಿನ ಲಯದಲ್ಲಿ ಇಲ್ಲದ ಕಾರಣ ನಮ್ಮ ಪಾಲಿಗೆ ಇದೊಂದು ವಿಭಿನ್ನ ಸವಾಲಾಗಿ ಪರಿಣಮಿಸಿದೆ. ಆದರೆ ಸಾವಲಿಗೆ ಸಜ್ಜಾಗಿದ್ದೇವೆ…’ ಎಂಬುದು ಬಾಂಗ್ಲಾ ಆರಂಭಕಾರ ತಮಿಮ್‌ ಇಕ್ಬಾಲ್‌ ಹೇಳಿಕೆ.

Advertisement

Udayavani is now on Telegram. Click here to join our channel and stay updated with the latest news.

Next