Advertisement

ಅಂಡರ್‌-19 ವಿಶ್ವಕಪ್‌: ಇಂಗ್ಲೆಂಡ್‌ ನಾಕೌಟ್‌ಗೆ ಲಗ್ಗೆ

12:01 PM Jan 19, 2018 | Team Udayavani |

ಕ್ವೀನ್ಸ್‌ಟೌನ್‌: ಬಾಂಗ್ಲಾದೇಶವನ್ನು 7 ವಿಕೆಟ್‌ಗಳಿಂದ ಮಣಿಸಿದ ಇಂಗ್ಲೆಂಡ್‌ ತಂಡ “ಸಿ’ ವಿಭಾಗದಿಂದ ಅಂಡರ್‌-19 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದೆ.

Advertisement

ಗುರುವಾರದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಬಾಂಗ್ಲಾದೇಶ 49.2 ಓವರ್‌ಗಳಲ್ಲಿ 175 ರನ್ನುಗಳಿಗೆ ಆಲೌಟಾದರೆ, ಇಂಗ್ಲೆಂಡ್‌ 29.3 ಓವರ್‌ಗಳಲ್ಲಿ 3 ವಿಕೆಟಿಗೆ 177 ರನ್‌ ಬಾರಿಸಿ ಸತತ 2ನೇ ಗೆಲುವನ್ನು ಒಲಿಸಿಕೊಂಡಿತು. ನಾಯಕ ಹ್ಯಾರಿ ಬ್ರೂಕ್‌ ಅವರ ಅಜೇಯ ಶತಕ ಇಂಗ್ಲೆಂಡ್‌ ಸರದಿಯ ವಿಶೇಷವಾಗಿತ್ತು. ಆರಂಭಿಕರಿಬ್ಬರು 19 ರನ್‌ ಆಗುವಷ್ಟರಲ್ಲಿ ಪೆವಿಲಿಯನ್‌ ಸೇರಿದ ಬಳಿಕ ಇನ್ನಿಂಗ್ಸ್‌ ಕಟ್ಟತೊಡಗಿದ ಬ್ರೂಕ್‌, 84 ಎಸೆತ ಎದುರಿಸಿ 102 ರನ್‌ ಬಾರಿಸಿದರು. ಈ ಅವಧಿಯಲ್ಲಿ ಸಿಡಿಸಿದ್ದು 13 ಬೌಂಡರಿ ಹಾಗೂ 3 ಸಿಕ್ಸರ್‌. ಇವಾನ್‌ ವುಡ್‌ ಔಟಾಗದೆ 48 ರನ್‌ ಮಾಡಿದರು.

ಇದು 3 ಪಂದ್ಯಗಳಲ್ಲಿ ಬಾಂಗ್ಲಾಕ್ಕೆ ಎದುರಾದ ಮೊದಲ ಸೋಲು. ಸದ್ಯ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಇಂಗ್ಲೆಂಡಿಗೆ ಮೊದಲ ಸ್ಥಾನ. ಎರಡೂ ತಂಡಗಳು ತಲಾ 4 ಅಂಕಗಳನ್ನು ಹೊಂದಿವೆ. ಜ. 20ರಂದು ಇಂಗ್ಲೆಂಡ್‌-ಕೆನಾಡಾ ಪಂದ್ಯ ನಡೆಯಲಿದೆ. 

ಕೆನಡಾಕ್ಕೆ ಮೊದಲ ಗೆಲುವು
ಲಿಂಕನ್‌: “ಸಿ’ ವಿಭಾಗದ ಮತ್ತೂಂದು ಪಂದ್ಯ ದಲ್ಲಿ ಕೆನಡಾ ತಂಡ ನಮೀಬಿಯಾವನ್ನು 4 ವಿಕೆಟ್‌ಗಳಿಂದ ಸೋಲಿಸಿತು. ಇದು ಕೆನಡಾಕ್ಕೆ ಒಲಿದ ಮೊದಲ ಜಯ. ನಮೀಬಿಯಾ 46 ಓವರ್‌ಗಳಲ್ಲಿ 193 ರನ್ನಿಗೆ ಆಲೌಟಾದರೆ, ಕೆನಡಾ 42 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 197 ರನ್‌ ಬಾರಿಸಿ ವಿಜಯಿಯಾಯಿತು. ಕೆನಡಾ ತನ್ನ ಕೊನೆಯ ಲೀಗ್‌ ಪಂದ್ಯವನ್ನು ಇಂಗ್ಲೆಂಡ್‌ ವಿರುದ್ಧ ಆಡಲಿದ್ದು, ಇದನ್ನು ಭಾರೀ ಅಂತರದಿಂದ ಗೆದ್ದರಷ್ಟೇ ನಾಕೌಟ್‌ ಪ್ರವೇಶಿಸೀತು. ಕಾರಣ, ಕೆನಡಾದ ರನ್‌ರೇಟ್‌ “ಮೈನಸ್‌’ನಲ್ಲಿದೆ (-0.277). ಬಾಂಗ್ಲಾದೇಶ 4 ಅಂಕಗಳೊಂದಿಗೆ 0.438 ರನ್‌ರೇಟ್‌ ಹೊಂದಿದ್ದು, ದ್ವಿತೀಯ ಸ್ಥಾನದಲ್ಲಿದೆ. ಹೀಗಾಗಿ ಮೂರೂ ಲೀಗ್‌ ಸ್ಪರ್ಧೆ ಮುಗಿಸಿರುವ ಬಾಂಗ್ಲಾದೇಶಕ್ಕೆ ನಾಕೌಟ್‌ ಟಿಕೆಟ್‌ ಸಾಧ್ಯತೆ ಹೆಚ್ಚು.

Advertisement

Udayavani is now on Telegram. Click here to join our channel and stay updated with the latest news.

Next