ಚಿಂಚೋಳಿ: ತಾಲೂಕಿನಲ್ಲಿ ಸರಕಾರಿ ಸೇವೆ ಸಲ್ಲಿಸುತ್ತಿರುವರಿಗಾಗಿ ನಿರ್ಮಿಸಿರುವ ವಸತಿ ಗೃಹಗಳು ದುಸ್ಥಿತಿಯಲ್ಲಿದ್ದು, ಮೂಲ ಸೌಕರ್ಯಗಳು ಇಲ್ಲದೆ ನೌಕರರು ಪರದಾಡುವಂತೆ ಆಗಿದೆ. ಪಟ್ಟಣದ ಚಂದಾಪುರ ನಗರದಲ್ಲಿ ಸಣ್ಣ ನೀರಾವರಿ, ಲೋಕೋಪಯೋಗಿ ಇಲಾಖೆ, ತಾಪಂ ಮತ್ತು ಜಿಪಂ ಇಲಾಖೆಗಳಲ್ಲಿ ಕೆಲಸ ನಿರ್ವಹಿಸುವ ಸರಕಾರಿ ನೌಕರದಾರರಿಗೆ ಕುಟುಂಬ ಸಮೇತ ವಾಸಿಸುವುದಕ್ಕಾಗಿ 1966-67ನೇ ಸಾಲಿನಲ್ಲಿ 20ಕ್ಕೂ ಹೆಚ್ಚು ವಸತಿ ಗೃಹಗಳನ್ನು ನಿರ್ಮಿಸಲಾಗಿತ್ತು. ಅವುಗಳ ಪರಿಸ್ಥಿತಿ ಈಗ ಹೇಳ ತೀರದಾಗಿದೆ.
ತಾಪಂ ಇಲಾಖೆಗೆ ಒಳಪಟ್ಟಂತಹ ಕ್ವಾಟರ್ಸ್ಗಳ ಬಾಗಿಲು, ಕಿಟಕಿಗಳು ಮುರಿದಿವೆ. ಶೌಚಾಲಯಗಳ ಕೋಣೆಗಳು ಹದಗೆಟ್ಟಿವೆ. ಕುಡಿಯುವ ನೀರು ಸರಬರಾಜು ಇಲ್ಲ. ಕೆಲವೆಡೆ ನೀರಿನ ಪೈಪುಗಳು ಒಡೆದಿವೆ. ಇದರಿಂದ ಇಲ್ಲಿ ವಾಸಿಸುವವರು ಕುಡಿಯುವ ನೀರಿಗೂ ಪರದಾಡುವಂತೆ ಆಗಿದೆ.
ಕ್ವಾಟರ್ಸ್‌ಗಳಿಗೆ ಪ್ರತ್ಯೇಕ ಬೋರವೆಲ್, ಕೊಳವೆ ಬಾವಿಯ ವ್ಯವಸ್ಥೆಯೂ ಇಲ್ಲ. ದಿನನಿತ್ಯ ಕುಡಿಯುವ ನೀರಿಗಾಗಿ ಪಿಲ್ಟರ್ ನೀರೇ ಗತಿಯಾಗಿದೆ. ಮಳೆಗಾಲದಲ್ಲಿ ಸೋರಿಕೆ ಆಗುತ್ತಿರುವುದರಿಂದ ಮಲಗಲು ತೊಂದರೆ ಪಡಬೇಕಾಗಿದೆ ಎಂದು ಇಲ್ಲಿನ ನೌಕರರ ಅಳಲು ತೋಡಿಕೊಳ್ಳುತ್ತಾರೆ.
ವಸತಿ ಗೃಹದ ವಿದ್ಯುತ್ ಸಂಪರ್ಕದ ವೈರ್ ಗಳು ಕಿತ್ತು ಹೋಗಿವೆ. ಮನೆಯಲ್ಲಿ ಹಾಸಿದ ಕಲ್ಲು ಪರಸಿಗಳು ಒಡೆದಿವೆ. ಹೀಗಾಗಿ ಕ್ವಾಟರ್ಸ್‌ಗಳು ಹೀನಾಯ ಸ್ಥಿತಿಯಲ್ಲಿವೆ. ಕೆಲವು ಸಿಬ್ಬಂದಿಗಳು ಮಾತ್ರ ಈ ಕ್ವಾರ್ಟಸ್‌ನಲ್ಲಿ ವಾಸವಾಗಿದ್ದು, ಹಿರಿಯ ಅಧಿಕಾರಿಗಳ್ಯಾರೂ ಇಲ್ಲಿಲ್ಲ. ವಸತಿ ಗೃಹಗಳ ಸುತ್ತ ಕಾಂಪೌಂಡ್ ಗೋಡೆ ಇಲ್ಲದ ಕಾರಣ ಸಂಜೆ ವೇಳೆ ಹುಳ ಹುಪ್ಪಡಿಗಳ ಭಯ ಕಾಡುತ್ತಿದೆ. ಸುತ್ತ ಗಿಡಗಂಟಿಗಳು ಬೆಳೆದಿದ್ದರಿಂದ ಚಿಕ್ಕ ಮಕ್ಕಳು ಆಟ ಆಡಲು ಭಯಪಡುವಂತೆ ಆಗಿದೆ.
ಇಲ್ಲಿನ ವಿದ್ಯುತ್ ಕಂಬಗಳಲ್ಲಿ ದೀಪಗಳೇ ಇಲ್ಲ. ಉತ್ತಮ ರಸ್ತೆಯಿಲ್ಲ. ಕೆಸರಿನಲ್ಲಿಯೇ ತಿರುಗಾಡಬೇಕಾಗಿದೆ. ಕೆಲವು ಕ್ವಾಟರ್ಸ್‌ಗಳು ಹಿರಿಯ ಅಧಿಕಾರಿಗಳ ಹೆಸರಿನಲ್ಲಿವೆ. ಆದರೆ ಅವುಗಳಲ್ಲಿ ಯಾರೂ ವಾಸಿಸದೇ ಅವು ಬಿಕೋ ಎನ್ನುತ್ತಿವೆ. ತಾಪಂ, ಲೋಕೋಪಯೋಗಿ, ಸಣ್ಣ ನೀರಾವರಿ ಇಲಾಖೆ, ಜಿಪಂ ಇಲಾಖೆಗೆ ಸೇರಿದ ವಸತಿ ಗೃಹಗಳ ದುರಸ್ತಿಗೋಸ್ಕರ ಲಕ್ಷಾಂತರ ರೂ.ಗಳನ್ನು ಪ್ರತಿವರ್ಷ ಖರ್ಚು ಮಾಡುತ್ತಿದ್ದರೂ ಇಲ್ಲಿನ ಸರಕಾರಿ ನೌಕರದಾರರಿಗೆ ಸರಕಾರದ ಸೌಲಭ್ಯಗಳು ಮರೀಚಿಕೆಯಾಗಿವೆ.
ಶಾಮರಾವ ಚಿಂಚೋಳಿ