ಬೆಂಗಳೂರು: ಹವ್ಯಾಸಿ ರಂಗಭೂಮಿಗೆ ಶಿಸ್ತು ತಂದುಕೊಟ್ಟ ವ್ಯಕ್ತಿ ಅಂಕಲ್ ಶ್ಯಾಲ್ ಎಂದು ಚಿತ್ರ ನಿರ್ದೇಶಕ ಟಿ.ಎಸ್.ನಾಗಾಭರಣ ಬಣ್ಣಿಸಿದ್ದಾರೆ.
ಜಯನಗರ ಎಚ್.ಎನ್.ಕಲಾ ಕ್ಷೇತ್ರದಲ್ಲಿ ಗುರುವಾರ ಅಂಕಲ್ ಶ್ಯಾಮ್ ಅಭಿನಂದನಾ ಬಳಗ ಹಮ್ಮಿಕೊಂಡಿದ್ದ “ಅಂಕಲ್ ಶ್ಯಾಮ್ 75 ಅಭಿನಂದನಾ ಸಂಭ್ರಮ’ ಉದ್ಘಾಟಿಸಿ ಮಾತನಾಡಿದ ಅವರು, ಬೆಂಗಳೂರಿನ ಹವ್ಯಾಸಿ ರಂಗಭೂಮಿ 70ರ ದಶಕದಲ್ಲಿ ಶಿಸ್ತು ಹೊಂದಿರಲಿಲ್ಲ.ಅಂಕಲ್ ಶ್ಯಾಮ್ ರಂಗ ಸಂಘಟನೆಗೆ ಮುಂದಾದ ನಂತರ ಹವ್ಯಾಸಿ ರಂಗ ಭೂಮಿಗೆ ಒಂದು ಶಿಸ್ತು ಬಂತು ಎಂದು ಹೇಳಿದರು.
ಸರ್ಕಾರದ ಅನುದಾನಕ್ಕಾಗಿ ಕೇವಲ ಪೋಸ್ಟರ್ ಸಂಘ – ಸಂಸ್ಥೆಗಳು ಹುಟ್ಟಿಕೊಂಡಿರುವ ವೇಳೆ ಶ್ಯಾಮ್ ಅವರ ಅಂತರಂಗ ತಂಡ, ನಾಟಕ ಪ್ರಯೋಗವನ್ನೇ ತನ್ನ ಜೀವಾಳ ಮಾಡಿಕೊಂಡಿತ್ತು. 70ರ ದಶಕದಲ್ಲಿ ಪ್ರೇಕ್ಷಕರಾಗಿದ್ದ ಶ್ಯಾಮ್ ಅವರು 80ರ ದಶಕದಲ್ಲಿ ರಂಗ ಸಂಘಟಕರಾಗಿ ಹೆಸರು ಪಡೆದರು.ರಂಗಭೂಮಿ ಕ್ಷೇತ್ರಕ್ಕೆ ಅವರ ಕೊಡುಗೆ ಅನನ್ಯ ಎಂದು ಶ್ಲಾ ಸಿದರು.
ಕವಿ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಮಾತನಾಡಿ,ಅಂಕಲ್ ಶ್ಯಾಮ್ ರಂಗ ತಂಡ ಕಟ್ಟಿ ತೆರೆಯ ಹಿಂದೆ ಪಾತ್ರಗಳಿಗೆ ಬೇಕಾದ ಜೀವ ತುಂಬಿದರು.ಬಣ್ಣ ಹಚ್ಚದೇ ರಂಗದ ಹಿಂದೆ ನಿಂತು ಉತ್ತಮ ಕೆಲಸ ಮಾಡಿದರು ಎಂದು ಸ್ಮರಿಸಿದರು.
ಈ ಸಂದರ್ಭದಲ್ಲಿ ರಂಗ ಸಾಧಕರಾದ ರುದ್ರಯ್ಯ, ಚಂದ್ರಕೀರ್ತಿ, ಮ್ಯೂಸಿಕ್ ರಾಘು, ವರ್ಷಿಣಿ ವಿಜಯ್, ಬೆಳಕು ವಿನ್ಯಾಸಕ ಮಂಜುನಾರಾಯಣ್, ವಿನಯ್ ಶಾಸ್ತ್ರಿ ಹಾಗೂ ದೀಪಕ್ ಸುಬ್ರಮಣ್ಯ ಸೇರಿದಂತೆ ಹಲವರನ್ನು ಸನ್ಮಾನಿಸಲಾಯಿತು. ರಂಗ ವಿಮರ್ಶಕಿ ಲಕ್ಷ್ಮಿಚಂದ್ರಶೇಖರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.