ಉಡುಪಿ: ಎಸೆಸೆಲ್ಸಿ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಪಿಯುಸಿ ಪ್ರವೇಶ ಪ್ರಕ್ರಿಯೆ ಆರಂಭವಾಗಲಿದೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮತ್ತವರ ಹೆತ್ತವರು ಅನಧಿಕೃತ ಪಿಯು ಕಾಲೇಜುಗಳ ಬಗ್ಗೆ ಎಚ್ಚರವಹಿಸಬೇಕು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಸೂಚಿಸಿದೆ.
ಮಾನ್ಯತೆ ಪಡೆದುಕೊಳ್ಳದ ಅಥವಾ ನವೀಕರಿಸಿಕೊಳ್ಳದ ಕಾಲೇಜುಗಳಲ್ಲಿ ಪ್ರವೇಶ ಪಡೆದು ಪಿಯುಸಿ ಪೂರ್ಣ ಗೊಳಿಸಿ ಪದವಿ ಗೆ ಸೇರುವ ಸಂದರ್ಭದಲ್ಲಿ ಹಲವು ರೀತಿಯ ಸಮಸ್ಯೆ ಎದುರಾಗುತ್ತದೆ. ಹೀಗಾಗಿ ಕಾಲೇಜು ಗಳ ಬಗ್ಗೆ ಸರಿಯಾದ ಮಾಹಿತಿ ಪಡೆದು, ಅನಂತರವೇ ದಾಖಲಾಗಬೇಕು ಎಂದು ಸಲಹೆ ನೀಡಿದೆ.
ಜಿಲ್ಲಾ ಉಪನಿರ್ದೇಶಕರಿಗೆ ಇಲಾಖೆಯಿಂದ ಸೂಚನೆ ಖಾಸಗಿ ಪ.ಪೂ. ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಪ್ರವೇಶ ವಿಚಾರವಾಗಿ ಇತ್ತೀಚೆಗೆ ಧಾರವಾಡದಲ್ಲಿರುವ ರಾಜ್ಯ ಹೈಕೋರ್ಟ್‌ನ ಪೀಠವು ನೀಡಿರುವ ತೀರ್ಪಿನಂತೆ, ಖಾಸಗಿ ಪಿಯು ಕಾಲೇಜುಗಳು ಅಸ್ತಿತ್ವದಲ್ಲಿ ರುವ ಮತ್ತು ಮಾನ್ಯತೆ ಪಡೆರುವ ಮಾಹಿತಿ ಯನ್ನು ಸ್ಪಷ್ಟವಾಗಿ ತಿಳಿಸಬೇಕು. ಈ ನಿಟ್ಟಿನಲ್ಲಿ ಜಿಲ್ಲಾ ಉಪನಿರ್ದೇಶಕರು ಸ್ಥಳೀಯವಾಗಿ ಸೂಕ್ತ ಕ್ರಮ ತೆಗೆದುಕೊಳ್ಳಲು ಇಲಾಖೆ ಸೂಚಿಸಿದೆ.
ನಮ್ಮಲ್ಲಿ ಅನಧಿಕೃತ ಪಿಯು ಕಾಲೇಜುಗಳಿಲ್ಲ. ಆದರೂ ವಿದ್ಯಾರ್ಥಿ ಗಳು ಪ್ರವೇಶ ಪಡೆಯುವ ಸಂದರ್ಭ ದಲ್ಲಿ ತಾವು ತೆಗೆದುಕೊಳ್ಳುವ ಕೋರ್ಸ್, ಕಾಂಬಿನೇಷನ್‌ಗಳಿಗೆ ಇಲಾಖೆಯಿಂದ ಮಾನ್ಯತೆ ಪಡೆಯಲಾಗಿದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಬೇಕು.
ಹೊಸ ಕಾಂಬಿನೇಷನ್‌ಗಳಿಗೆ ಸೇರುವ ಸಂದರ್ಭದಲ್ಲೂ ಈ ಎಚ್ಚರಿಕೆ ವಹಿಸಬೇಕು. ಇಲಾಖೆಯ ನಿಯಮ ಪಾಲನೆ ಸಂಬಂಧ ಪಿಯು ಕಾಲೇಜುಗಳಿಗೂ ಸೂಚನೆ ನೀಡಲಿದ್ದೇವೆ ಎಂದು ಉಡುಪಿ ಜಿಲ್ಲಾ ಡಿಡಿಪಿಯು ಮಾರುತಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಡಿಡಿಪಿಯು ಜಯಣ್ಣ ತಿಳಿಸಿದ್ದಾರೆ.