ಸಿಂಧನೂರು: ಅಪರಾಧಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ನಗರದ 74 ಕಡೆ ಮುಖ್ಯ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ ಸೇರಿದಂತೆ ರಸ್ತೆ, ಚರಂಡಿ, ಕುಡಿವ ನೀರಿನ ಪೈಪ್ ಅಳವಡಿಕೆ ಕಾಮಗಾರಿ ಕೈಗೊಳ್ಳಲು ನಗರಸಭೆ ಸಾಮಾನ್ಯ ಸಭೆಯಲ್ಲಿ ಗುರುವಾರ ಒಪ್ಪಿಗೆ ಸೂಚಿಸಲಾಯಿತು.
ಇಲ್ಲಿನ ನಗರಸಭಾ ಸಭಾಭವನದಲ್ಲಿ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸರ್ವಾನುಮತದಿಂದ ಕ್ರಿಯಾ ಯೋಜನೆಗಳಿಗೆ ಅನುಮೋದನೆ ನೀಡಲಾಯಿತು. ವಿವಿಧ ಯೋಜನೆಗಳಡಿ ಹಂಚಿಕೆಯಾದ ಅನುದಾನಗಳ ಕ್ರಿಯಾ ಯೋಜನೆ ಆಡಳಿತಾತ್ಮಕ ಮಂಜೂರಾತಿ, ಅಗತ್ಯವಿರುವ ವಾರ್ಡ್‌ಗಳಲ್ಲಿ ನಗರಸಭೆ ನಿ ಧಿಯಲ್ಲಿ ಅಭಿವೃದ್ಧಿ ಕೆಲಸ, ಪರಿಷ್ಕೃತ ಕ್ರಿಯಾ ಯೋಜನೆ, ಎಸ್‌ಸಿಪಿ, ಟಿಎಸ್‌ಪಿ ಅನುದಾನದಲ್ಲಿ ಅಗತ್ಯ ಕೆಲಸ ಕೈಗೊಳ್ಳಲು ಪ್ರಸ್ತಾಪ ಮಾಡಲಾಯಿತು. ಇದಕ್ಕೆ ಆಕ್ಷೇಪವಿಲ್ಲದೇ ಸದಸ್ಯರು ಒಪ್ಪಿಗೆ ನೀಡಿದರು.
ನಲ್ಮ್ ಯೋಜನೆಯಡಿ 2021-22ನೇ ಸಾಲಿನ ಎಸ್‌ಎಫ್‌ಸಿ ಶೇ.22 ಅನುದಾನದಲ್ಲಿ ಪರಿಶಿಷ್ಟ ಸಣ್ಣ ಉದ್ದಿಮೆದಾರರಿಗೆ ಸಹಾಯಧನ ನೀಡಲು 2.09 ಲಕ್ಷ ರೂ.ಗಳಿದ್ದು, ಕೇವಲ ಒಂದು ಅರ್ಜಿ ಬಂದಿದ್ದು, ಜೊತೆಗೆ ಪರಿಶಿಷ್ಟರ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಕಂಪ್ಯೂಟರ್, ಲ್ಯಾಪ್‌ಟಾಪ್ ಖರೀದಿಗೆ 50 ಸಾವಿರ ಸಹಾಯಧನ ನೀಡಲು ಅವಕಾಶವಿದ್ದು, 3 ಲಕ್ಷ ರೂ. ಗಳ ಕಾಯ್ದಿರಿಸಿದ ಅನುದಾನವಿದೆ. ಇಲ್ಲಿ ಕೂಡ ಕೇವಲ ಒಂದು ಅರ್ಜಿ ಬಂದಿದ್ದರಿಂದ ಇನ್ನಷ್ಟು ಅರ್ಜಿಗಳನ್ನು ಸಲ್ಲಿಸಲು ಸಭೆಯಲ್ಲಿ ಕಾಲಾವಕಾಶ ನೀಡಲು ಸಮ್ಮತಿಸಲಾಯಿತು. ಪರಿಶಿಷ್ಟರ ವೈಯಕ್ತಿಕ ಯೋಜನೆಗಳಲ್ಲಿ 3 ಬಾರಿ ಅರ್ಜಿ ಆಹ್ವಾನಿಸಿದರೂ ಬೇಡಿಕೆ ಸಲ್ಲಿಕೆಯಾಗದ್ದರ ಬಗ್ಗೆ ಚರ್ಚಿಸಲಾಯಿತು. ಅನುದಾನವನ್ನು ಪರಿಶಿಷ್ಟರ ಸಾಮುದಾಯಿಕ ಕಾರ್ಯಕ್ರಮಗಳಿಗೆ ಬಳಸಿಕೊಳ್ಳಲು ಸಭೆ ತೀರ್ಮಾನಿಸಿತು.
ತಹಶೀಲ್ದಾರ್ ಮಂಜುನಾಥ ಭೋಗಾವತಿ ಮತ್ತು ಸಿಪಿಐ ಉಮೇಶ ಕಾಂಬಳೆ ಅವರು ಸಲ್ಲಿಸಿರುವ ಬೇಡಿಕೆ ಆಧರಿಸಿ, ನಗರದ 24 ಕಡೆಗಳಲ್ಲಿ ಸಿಸಿ ಕ್ಯಾಮೆರಾ ಹಾಕಿಸುವಂತೆ ಸದಸ್ಯ ಚಂದ್ರಶೇಖರ ಮೈಲಾರ ಸಭೆಯ ಗಮನ ಸೆಳೆದರು. ಇದಕ್ಕೆ ಎಲ್ಲ ಸದಸ್ಯರು ಒಪ್ಪಿಗೆ ಸೂಚಿಸಿದರು. ಸಿಸಿ ಕ್ಯಾಮೆರಾ ಅಳವಡಿಕೆ ಕುರಿತಂತೆ ಪೊಲೀಸ್ ಇಲಾಖೆಯೊಂದಿಗೆ ವರದಿ ತರಿಸಿಕೊಂಡು ಅಳವಡಿಸಲು ಕ್ರಮ ವಹಿಸಲಾಗುವುದು ಎಂದು ಪೌರಾಯುಕ್ತ ಆರ್ ವಿರುಪಾಕ್ಷ ಮೂರ್ತಿ ತಿಳಿಸಿದರು. ನಗರಸಭೆ ಉಪಾಧ್ಯಕ್ಷ ಮುರ್ತುಜಾ ಹುಸೇನ್ ಸೇರಿದಂತೆ ಇತರರು ಇದ್ದರು.