ಚೆನ್ನೈ:ಕೋವಿಡ್ 19 ವೈರಸ್ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ದೇಶದಲ್ಲಿ ಲಾಕ್ ಡೌನ್ ಜಾರಿಯಾಗಿ ಎರಡು ವಾರ ಕಳೆದಿದೆ.
ಏತನ್ಮಧ್ಯೆ ಮದ್ಯ ದೊರೆಯದ ಹಿನ್ನೆಲೆಯಲ್ಲಿ ಮದ್ಯ ವ್ಯಸನಿಗಳು ಪೇಯಿಂಟ್ ಮತ್ತು ವಾರ್ನಿಶ್ ಸೇವಿಸಿದ ಪರಿಣಾಮ ಮೂವರು
ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ಚೆಂಗಲ್ ಪಟ್ಟುವಿನಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ.
ಮದ್ಯದ ಚಟದಿಂದಾಗಿ ಪೇಯಿಂಟ್, ವಾರ್ನಿಶ್ ಕುಡಿದ ಶಿವಶಂಕರ್, ಪ್ರದೀಪ್ ಹಾಗೂ ಶಿವರಾಮನ್ ಮೂವರು ವಾಂತಿ ಮಾಡಲು
ಆರಂಭಿಸಿದ್ದು, ಕೂಡಲೇ ಅವರನ್ನು ಚೆಂಗಲ್ ಪಟ್ಟು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ವಾರ್ನಿಶ್ ಮಿಶ್ರಣದ ಪೇಯಿಂಟ್
ಕುಡಿದ ಪರಿಣಾಮ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, ಮೂವರು ಕುಡಿತದ ಚಟಕ್ಕೆ ದಾಸರಾಗಿದ್ದರು. ಲಾಕ್ ಡೌನ್ ನಿಂದಾಗಿ ಎಲ್ಲಿಯೂ ಮದ್ಯ ಸಿಗದ ಹಿನ್ನೆಲೆಯಲ್ಲಿ ವಾರ್ನಿಶ್ ಮಿಶ್ರಣದ ಪೇಯಿಂಟ್ ಕುಡಿದಿರುವುದಾಗಿ ವಿವರಿಸಿದ್ದಾರೆ.
ಕೋವಿಡ್ 19 ಸೋಂಕು ಹರಡದಂತೆ ತಡೆಗಟ್ಟಲು ದೇಶಾದ್ಯಂತ ಮಾರ್ಚ್ 25ರಿಂದ ಪ್ರಧಾನಿ ಮೋದಿ ಲಾಕ್ ಡೌನ್ ಘೋಷಿಸಿದ್ದರು. ತುರ್ತು ಸೇವೆಗಳನ್ನು ಹೊರತುಪಡಿಸಿ ಇತರ ಎಲ್ಲಾ ಸೇವೆ ಸ್ಥಗಿತಗೊಳಿಸಲಾಗಿತ್ತು. ಅತೀ ಹೆಚ್ಚು ಜನಸಂದಣಿ ಆಗುವ ಹಿನ್ನೆಲೆಯಲ್ಲಿ ವೈನ್ ಶಾಪ್, ಮದ್ಯದ ಅಂಗಡಿಗಳನ್ನು ಮುಚ್ಚಲಾಗಿತ್ತು. ಈ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರ ಕಳೆದ ವಾರ ಎಲ್ಲಾ ಮದ್ಯದ ಅಂಗಡಿಗಳನ್ನು ಏಪ್ರಿಲ್ 14ರವರೆಗೆ ಬಂದ್ ಮಾಡುವಂತೆ ಆದೇಶ ಹೊರಡಿಸಿತ್ತು.