Advertisement

ನಿಷೇಧಿತ ಉಗ್ರ ಪಟ್ಟಿಯಿಂದ ಮುಕ್ತಿ: ಸಯೀದ್‌ ಮನವಿಗೆ UN ತಿರಸ್ಕಾರ

12:23 PM Mar 07, 2019 | Team Udayavani |

ಹೊಸದಿಲ್ಲಿ : ಅತ್ಯಂತ ಮಹತ್ವದ ವಿದ್ಯಮಾನವೊಂದರಲ್ಲಿ, 2008ರ ಮುಂಬಯಿ ಉಗ್ರ ದಾಳಿಯ ಮಾಸ್ಟರ್‌ ಮೈಂಡ್‌, ಜಮಾತ್‌ ಉದ್‌ ದಾವಾ (JuD) ಉಗ್ರ ಸಂಘಟನೆಯ ಮುಖ್ಯಸ್ಥ  ಹಾಫೀಜ್‌ ಸಯೀದ್‌ ತನ್ನ ಹೆಸರನ್ನು  ನಿಷೇಧಿತ ಉಗ್ರ ಪಟ್ಟಿಯಿಂದ ತೆಗೆದುಹಾಕಬೇಕೆಂದು ಮಾಡಿಕೊಂಡಿರುವ ಮನವಿಯನ್ನು ವಿಶ್ವಸಂಸ್ಥೆ ತಿರಸ್ಕರಿಸಿದೆ. ಭಾರತ ಸರಕಾರದ ಮೂಲಗಳು ಈ ವಿದ್ಯಮಾನವನ್ನು ಇಂದು ಗುರುವಾರ ದೃಢೀಕರಿಸಿವೆ.

Advertisement

ಜಮ್ಮು ಕಾಶ್ಮೀರದ ಪುಲ್ವಾಮಾದ ಆವಂತಿಪೋರಾದಲ್ಲಿ  40 ಸಿಆರ್‌ಪಿಎಫ್ ಯೋಧರನ್ನು ಬಲಿಪಡೆದ ಉಗ್ರ ದಾಳಿಯನ್ನು ನಡೆಸಿದ್ದ ಪಾಕ್‌ ಮೂಲದ ಜೈಶ್‌ ಎ ಮೊಹಮ್ಮದ್‌ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್‌ ಅಜರ್‌ ನನ್ನು ಜಾಗತಿಕ ಉಗ್ರನೆಂದು ಘೋಷಿಸಿ ನಿಷೇಧಿಸಬೇಕೆಂಬ ಹೊಸ ಕೋರಿಕೆಯನ್ನು ವಿಶ್ವಸಂಸ್ಥೆಯ 1267 ನಿಷೇಧ ಸಮಿತಿಯು ಸ್ವೀಕರಿಸಿರುವ ಸಂದರ್ಭದಲ್ಲೇ, ನಿಷೇಧಿತ ಉಗ್ರ ಪಟ್ಟಿಯಿಂದ ತನ್ನ ಹೆಸರನ್ನುತೆಗೆದು ಹಾಕಬೇಕೆಂಬ ಹಾಫೀಜ್‌ ಸಯೀದ್‌ ನ ಕೋರಿಕೆಯನ್ನು  ವಿಶ್ವಸಂಸ್ಥೆ ತಿರಸ್ಕರಿಸಿರುವುದು ಗಮನಾರ್ಹವಾಗಿದೆ. 

ಪುಲ್ವಾಮಾ ದಾಳಿ ತನ್ನದೇ ಕೃತ್ಯವೆಂದು ಹೇಳಿಕೊಂಡಿರುವ ಜೈಶ್‌ ಎ ಮೊಹಮ್ಮದ್‌ ಉಗ್ರ ಸಂಘಟನೆ ಅದರ ಹೊಣೆ ಹೊತ್ತಿರುವುದನ್ನು ವಿಶ್ವಸಂಸ್ಥೆ ಗಮನಿಸಿದೆ.

ಜೆಯುಡಿ ಮುಖ್ಯಸ್ಥ ಹಾಫೀಜ್‌ ಸಯೀದ್‌, ಪಾಕ್‌ ಮೂಲದ ಲಷ್ಕರ್‌ ಎ ತಯ್ಯಬ ಉಗ್ರ ಸಂಘಟನೆ ಸಹ ಸ್ಥಾಪಕನೂ ಆಗಿದ್ದಾನೆ. ಈತ ಭಾರತದ ವಿರುದ್ಧದ ಹಲವಾರು ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿಯಾಗಿರುವುದಕ್ಕೆ ಭಾರತ ಬಲವಾದ ಸಾಕ್ಷ್ಯ, ವಿವರ, ಮಾಹಿತಿಗಳನ್ನು ವಿಶ್ವಸಂಸ್ಥೆಗೆ ಕೊಟ್ಟಿದೆ ಎಂದು ಪಿಟಿಐ ಮೂಲಗಳು ತಿಳಿಸಿವೆ. 

2008ರ ಡಿ.10ರಂದು ವಿಶ್ವಸಂಸ್ಥೆಯು ಜಮಾತ್‌ ಉದ್‌ ದಾವಾ (ಜೆಯುಡಿ) ಸಂಘಟನೆಯ ಮುಖ್ಯಸ್ಥ ಹಾಫೀಜ್‌ ಸಯೀದ್‌ ನನ್ನು ಜಾಗತಿಕ ಉಗ್ರನೆಂದು ಘೋಷಿಸಿ ನಿಷೇಧಿಸಿದೆ. ಈತ ಮಾಸ್ಟರ್‌ ಮೈಂಡ್‌ ಆಗಿದ್ದು ಕೊಂಡು ನಡೆಸಿದ್ದ ಮುಂಬಯಿ ಉಗ್ರ ದಾಳಿಗೆ 166 ಮಂದಿ ಅಮಾಯಕರು ಬಲಿಯಾಗಿದ್ದರು. 

Advertisement

ಪ್ರಕೃತ ಪಾಕಿಸ್ಥಾನದಲ್ಲಿ ಗೃಹ ಬಂಧನದಲ್ಲಿರುವ ಹಾಫೀಜ್‌ ಸಯೀದ್‌, ತನ್ನ ಹೆಸರನ್ನು ಉಗ್ರ ಪಟ್ಟಿಯಿಂದ ತೆಗೆದುಹಾಕುವಂತೆ ವಿಶ್ವಸಂಸ್ಥೆಯನ್ನು ಕೋರಿ, ಲಾಹೋರ್‌ ಮೂಲದ ಮಿರ್ಜಾ ಆ್ಯಂಡ್‌ ಮಿರ್ಜಾ ಕಾನೂನು ಸೇವಾ ಸಂಸ್ಥೆಯ ಮೂಲಕ 2017ರಲ್ಲೇ ಮನವಿ ಸಲ್ಲಿಸಿದ್ದ. 

Advertisement

Udayavani is now on Telegram. Click here to join our channel and stay updated with the latest news.

Next