Advertisement

ಅಭಿವೃದ್ಧಿಗಾಗಿ ರಾಜ್ಯ ಇಬ್ಬಾಗವಾಗಲಿ; ಮತ್ತೆ ಪ್ರತ್ಯೇಕ ರಾಜ್ಯದ ಪರ ಕತ್ತಿ ಬ್ಯಾಟಿಂಗ್

11:42 AM Jun 30, 2022 | Team Udayavani |

ಮೈಸೂರು: ಇತ್ತೀಚೆಗಷ್ಟೇ ಪ್ರತ್ಯೇಕ ರಾಜ್ಯದ ಬಗ್ಗೆ ಉಲ್ಲೇಖ ಮಾಡಿದ್ದ ಸಚಿವ ಉಮೇಶ್ ಕತ್ತಿ ಇದೀಗ ಮತ್ತೆ ಇದೇ ಧಾಟಿಯಲ್ಲಿ ಮಾತನಾಡಿದ್ದಾರೆ. ತನ್ನ ಹೇಳಿಕೆಯನ್ನು ಸಮರ್ಥಿನೆ ಮಾಡಿಕೊಂಡಿರುವ ಸಚಿವ ಕತ್ತಿ, ‘ಅಭಿವೃದ್ಧಿ ದೃಷ್ಟಿಯಿಂದ ನಾನು ಪ್ರತ್ಯೇಕ ರಾಜ್ಯ ಕೇಳುತ್ತಿದ್ದೇನೆ ಹೊರತು ಬೇರೆ ಉದ್ದೇಶವಿಲ್ಲ” ಎಂದಿದ್ದಾರೆ.

Advertisement

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸಿಎಂ ಆಗಬೇಕಾದರೆ ಅಖಂಡ ಕರ್ನಾಟಕದ ಸಿಎಂ ಆಗುತ್ತೇನೆ. ನನ್ನ ಹಣೆಬರಹದಲ್ಲಿ ಬರೆದಿದ್ದರೆ ನಾನು ಸಿಎಂ ಆಗುತ್ತೇನೆ. ಇರುವ 224 ಶಾಸಕರಲ್ಲಿ ನಾನೇ ಹಿರಿಯ ಶಾಸಕ. ನನಗೆ ಸಿಎಂ ಆಗುವ ಎಲ್ಲಾ ಅರ್ಹತೆಯಿದೆ. ಸಿಎಂ ಸ್ಥಾನಕ್ಕಾಗಿ ನಾನು ಪ್ರತ್ಯೇಕ ರಾಜ್ಯ ಕೇಳುತ್ತಿಲ್ಲ. ಪ್ರತ್ಯೇಕ ರಾಜ್ಯವಾದರೂ ಕೂಡಾ ನಾವು ಕನ್ನಡಿಗರೇ. ಆಂಧ್ರ ತೆಲಂಗಾಣ ರೀತಿಯಲ್ಲೇ ನಮ್ಮದು ಪ್ರತ್ಯೇಕವಾಗಲಿ ಎಂದು ಬಯಸಿದ್ದೇನೆ. ನಮ್ಮ ಜನರ ದೃಷ್ಟಿಯಿಂದ ನಾನೇ ಹಿರಿಯನಾಗಿ ಧ್ವನಿ ಎತ್ತಿದ್ದೇನೆ ಎಂದರು.

ಹೈಕಮಾಂಡ್ ಮಟ್ಟದಲ್ಲೂ ಹೊಸ ರಾಜ್ಯಗಳ ರಚನೆ ಬಗ್ಗೆ ಚಿಂತನೆ ನಡೆದಿದೆ ಎಂಬುದು ನನ್ನ ಅನಿಸಿಕೆ‌. ನಾನು‌ ಮಾತನಾಡಿದರೆ ಆ ವಿಚಾರ ಕೇಂದ್ರದ ಮಟ್ಟಕ್ಕೂ ಹೋಗುತ್ತದೆ. ಹೀಗಾಗಿ ಮಾತನಾಡುತ್ತಿದ್ದೇನೆ‌ ಎಂದು ಕತ್ತಿ ಹೇಳಿದರು.

ತಮ್ಮ ಸರ್ಕಾರದ ಆಡಳಿತವನ್ನೇ ಪ್ರಶ್ನಿಸಿದ ಸಚಿವ ಉಮೇಶ್ ಕತ್ತಿ, ‘ಬೆಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಎಲ್ಲಿದೆ? ದೊಡ್ಡ ರಾಜ್ಯಗಳಾದಾಗ ಇಂತಹ ಸಮಸ್ಯೆಗಳು ಇದ್ದೇ ಇರುತ್ತವೆ‌. ಇದೇ ಕಾರಣಕ್ಕೆ ನಾವು ರಾಜ್ಯ ಇಬ್ಬಾಗ ಆಗಬೇಕೆಂದು ಕೇಳುತ್ತಿದ್ದೇನೆ‌ ಎಂದರು.

ಇದನ್ನೂ ಓದಿ:ಸರ್ಕಾರ ರಚನೆಗೆ ಸಿದ್ಧತೆ: ಫಡ್ನವೀಸ್ ಮಹಾರಾಷ್ಟ್ರ ಮುಖ್ಯಮಂತ್ರಿ, ಶಿಂಧೆ ಉಪಮುಖ್ಯಮಂತ್ರಿ?

Advertisement

ಜಲಾಶಯಗಳ ನೀರಿನ ಬಳಕೆ ಗಡಿ ಸಮಸ್ಯೆಗಳ ನಿವಾರಣೆ ಇದರ ದೃಷ್ಟಿಯಿಂದ ಚಿಕ್ಕ ರಾಜ್ಯಗಳು ಆಗಬೇಕು. ಅತಿ ಹೆಚ್ಚು ಜನಸಂಖ್ಯೆ ಇದ್ದಾಗ ಇಂತಹ ಯಾವ ಸಮಸ್ಯೆಗಳು ಬಗೆಹರಿಯುವುದಿಲ್ಲ ಎಂದು ತಮ್ಮ ಹೇಳಿಕೆಯನ್ನು ಮತ್ತಷ್ಟು ಸಮರ್ಥನೆ ಮಾಡಿದರು.

ಬೆಳಗಾವಿ ಕನ್ನಡಿಗರದ್ದು: ಮಹಾರಾಷ್ಟ್ರದ ಬಿಜೆಪಿಯೇ ಬೇರೆ, ಕರ್ನಾಟಕದ ಬಿಜೆಪಿಯೇ ಬೇರೆ. ಮಹಾರಾಷ್ಟ್ರದಲ್ಲಿ ಯಾರೇ ಅಧಿಕಾರಕ್ಕೆ ಬಂದರೂ ಬೆಳಗಾವಿ ಕನ್ನಡಿಗರದು. ಇದರಲ್ಲಿ ಯಾವ ಅನುಮಾನಗಳು ಬೇಡ. ಯಾವುದೇ ರಾಜ್ಯದಲ್ಲಿ ಯಾವುದೇ ಸರ್ಕಾರ ಇದ್ದರೂ ಗಡಿಭಾಗಗಳಲ್ಲಿ ಗಲಾಟೆ ಮಾಡಲು ಕೆಲವು ಪುಂಡರು ಇದ್ದೇ ಇರುತ್ತಾರೆ. ಅವರಿಗೆ ಕಾನೂನಾತ್ಮಕ ಶಿಕ್ಷೆಯಾಗಬೇಕು. ಗಡಿ ಖ್ಯಾತೆ ಬಗೆಹರಿದು ಬಹಳ ವರ್ಷವಾಗಿದೆ. ಆಗಾಗ ಪುಂಡರು ಗಲಾಟೆ ಮಾಡುತ್ತಲೇ ಇರುತ್ತಾರೆ. ಅದಕ್ಕೆ ಮಹತ್ವ ಕೊಡಬೇಡಿ ಎಂದು ಉಮೇಶ್ ಕತ್ತಿ ಹೇಳಿದರು.

ಪ್ರತಿ ಜಿಲ್ಲೆಯಲ್ಲೂ ಝೂ: ಪ್ರತಿ ಜಿಲ್ಲೆಯಲ್ಲೂ ಮೃಗಾಲಯಗಳ ಸ್ಥಾಪಿಸುವ ಚಿಂತನೆ ನಡೆಸಿದ್ದೇವೆ. ಇದಕ್ಕಾಗಿ ಎಲ್ಲಾ ಜಿಲ್ಲೆಗಳಲ್ಲೂ ಜಾಗಗಳ ಗುರುತು ಮಾಡುತ್ತಿದ್ದೇವೆ. ರಾಜ್ಯದ ಈ ಪ್ರಸ್ತಾಪವನ್ನು ಕೇಂದ್ರಕ್ಕೆ ಕಳುಹಿಸುತ್ತೇವೆ. ಕೇಂದ್ರದ ಅನುಮತಿ ಬಂದ ಮೇಲೆ ಈ ಕಾರ್ಯ ಶುರುವಾಗಲಿದೆ ಎಂದು ಸಚಿವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next