ಉಳ್ಳಾಲ: ಮರಕಡ ಶ್ರೀ ಗುರುಪರಾಶಕ್ತಿ ಮಠದ ಸಂಸ್ಥಾಪಕರಾದ ಶ್ರೀ ನರೇಂದ್ರನಾಥ ಯೋಗೇಶ್ವರೇಶ್ವರ ಸ್ವಾಮೀಜಿ ಅವರ ಮಹಾ ಆರಾಧನೆಯು ಮಡ್ಯಾರು ಪರಾಶಕ್ತಿ ಕ್ಷೇತ್ರದಲ್ಲಿ ಅವರ ದಿವ್ಯ ಸಾನ್ನಿಧ್ಯ ನೆಲೆಗೊಂಡ ತಾಣದಲ್ಲಿ ರವಿವಾರ ನಡೆಯಿತು.
ನರೇಂದ್ರನಾಥ ಸ್ವಾಮಿಗಳ ಪತ್ನಿ ಪೂಜ್ಯ ಮಾತೆ ಶಕುಂತಲಾ ಅಮ್ಮ ದೀಪಪ್ರಜ್ವಲನಗೈದು, ಪುಷ್ಪನಮನದೊಂದಿಗೆ ನುಡಿನಮನ ಸಲ್ಲಿಸಿ, ಭಾವತರಂಗಗಳು ನಮ್ಮ ಮನಃಪಟಲವನ್ನು ಮೀಟುವ ಕ್ರಿಯೆ ಇಂದಿನ ಮಹಾ ಆರಾಧನೆ. ಪೂಜ್ಯ ಮಹಾಸ್ವಾಮಿಯವರು ಭಕ್ತರ ಹೃದಯದಲ್ಲಿ ನಿತ್ಯ ಆರಾಧನೆ ಪಡೆದುಕೊಳ್ಳುತ್ತಿದ್ದಾರೆ. ಎಲ್ಲರಿಗೂ ಒಳ್ಳೆಯದಾಗಲಿ ಎಂಬ ಭಾವ ನಮ್ಮೊಳಗೆ ತುಂಬಿಕೊಂಡಾಗ ಮನಸ್ಸು ಶುದ್ಧಿಗೊಳ್ಳುವುದು ಎಂದು ಹೇಳಿದರು.
ಮಹಾ ಆರಾಧನೆ ನೆರವೇರಿಸಿದ ಶ್ರೀ ಗುರುಪರಾಶಕ್ತಿ ಮಠದ ಶ್ರೀ ನಿತಿನ್ ನರೇಂದ್ರನಾಥ ಯೋಗೇಶ್ವರೇಶ್ವರ ಸ್ವಾಮಿಗಳು ಮಾತನಾಡಿ, ದೇವ ತಣ್ತೀವನ್ನು ಮನುಷ್ಯ ಚೈತನ್ಯದೊಳಗೆ ತಂದು ಕರ್ಮ ದುರಿತಗಳನ್ನು ಪರಿಹರಿಸುವ ಅವರ ಮಹಾನ್ ಕ್ರಿಯೆಯೆಲ್ಲವನ್ನು ಕಂಡವರು ನಾವು. ಸನಾತನತೆಯ ವಿರಾಟ ಪುರುಷನನ್ನು ನೆಲೆ ನಿಲ್ಲಿಸುವ ಪೂಜ್ಯರ ಆಶಯ ಸಾಕಾರಗೊಳ್ಳುವ ಹಂತ ಬಂದಿದೆ. ಆತ್ಮ ಶುದ್ಧಿಯತ್ತ ಹೋಗುವ ಪಯಣಕ್ಕೆ ಮಹಾ ಆರಾಧನೆ ನಾಂದಿಯಾಗಲಿದೆ ಎಂದು ಹೇಳಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖರಾದ ಡಾ| ಪ್ರಭಾಕರ ಭಟ್ ಮಾತನಾಡಿ, ಸನಾತನ ಪರಂಪರೆಯ ಪುನರುದ್ಧರಣದ ಮಹತ್ತರ ಕಾರ್ಯ ಮಾಡಿದವರು ಶ್ರೀ ನರೇಂದ್ರನಾಥ ಯೋಗೇಶ್ವರೇಶ್ವರ ಸ್ವಾಮಿಯವರು ಎಂದರು.
ರಾಮ ಕ್ಷತ್ರೀಯ ಸಮಾಜದ ಕುಲಪುರೋಹಿತರಾದ ವಿದ್ವಾನ್ ಸತ್ಯಕೃಷ್ಣ ಭಟ್, ಮಾಜಿ ಸಚಿವ ಜೆ. ಕೃಷ್ಣ ಪಾಲೆಮಾರ್, ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ದ.ಕ. ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಹಿರಿಯ ಲೆಕ್ಕ ಪರಿಶೋಧಕ ಶರಣ್ ಶೆಟ್ಟಿ, ದೇವರ ಅರಮನೆ ಕುಟುಂಬದ ಹಿರಿಯರಾದ ಶ್ರೀಧರ್ ಕೋಟೆಕಾರ್, ಸ್ವಾಮಿಯವರ ಪುತ್ರಿಯರಾದ ಶೀತಲ್ ಕೋಟೆಕಾರ್, ಕಾವ್ಯಾ ಕೋಟೆಕಾರ್, ಅಳಿಯಂದಿರಾದ ವಿಶಾಲ್ ರಾವ್, ಸನತ್ ಕೋಟೆ, ಮೊಮ್ಮಕ್ಕಳಾದ ಪ್ರಣವ್ ಕೋಟೆಕಾರ್, ಪ್ರಕೃತಿ ಕೋಟೆಕಾರ್, ಗಗನ್ ದೀಪ್ ಚಿತ್ತಾರಿ, ಕಡೆಕಾರು ಕುಟುಂಬದ ಹಿರಿಯರಾದ ರಾಧಾಕೃಷ್ಣ ಜೆಪ್ಪು, ಕಡೆಕಾರು ಗುರುವನ ಶ್ರೀ ದುರ್ಗಾ ಕ್ಷೇತ್ರದ ಅಧ್ಯಕ್ಷ ಯೋಗೇಶ್ ಕುಮಾರ್ ಜೆಪ್ಪು, ವೆಂಕಟೇಶ್ ಜೆಪ್ಪು, ಚಂದನ್ ಕೋಟೆಕಾರ್, ಜೆ. ಕೃಷ್ಣಾನಂದ ರಾವ್, ಮನಮೋಹನ್ ರಾವ್, ಸಮಾಜ ಕಲ್ಯಾಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಪಿ.ಎ. ಗಣಪತಿ, ಶಾಂತರಾಮ ಶೆಟ್ಟಿ ಅಡ್ಯಾರ್, ಲಕ್ಷ್ಮೀಪತಿ ಮಾಡೂರು, ದುರ್ಗಾದಾಸ್ ಶೆಟ್ಟಿ, ಪ್ರಥಮ್ ಹೆಗ್ಡೆ ಉಪಸ್ಥಿತರಿದ್ದರು.
ದೇವರಮನೆ ಕುಟುಂಬದ ಸದಸ್ಯರು, ಭಕ್ತರು ಪುಷ್ಪನಮನ ಸಲ್ಲಿಸಿದರು. ಕಲ್ಪನಾ ವೆಂಕಟೇಶ್ ಜೆಪ್ಪು ಕಾರ್ಯಕ್ರಮ ನಿರ್ವಹಿಸಿದರು.