Advertisement

Ullal: ಕುಸಿಯುವ ಭೀತಿಯಲ್ಲಿದೆ ಗ್ರಾಮ ಪಂಚಾಯತ್ ಸದಸ್ಯೆ ಮನೆ!

05:28 PM Oct 20, 2024 | Team Udayavani |

ಉಳ್ಳಾಲ: ಉಳ್ಳಾಲ ತಾಲೂಕಿನ ಬೆಳ್ಮ ಗ್ರಾಮದ ಕಾನಕೆರೆಯಲ್ಲಿ ಪಂಚಾಯತ್‌ ಸದಸ್ಯೆಯೊಬ್ಬರ ಮನೆಯೇ ಕುಸಿದು ಬೀಳುವ ಅಪಾಯಕ್ಕೆ ಸಿಲುಕಿದೆ. ರಸ್ತೆ ಪಕ್ಕ ಸ್ವಲ್ಪ ಎತ್ತರದ ಜಾಗದಲ್ಲಿರುವ ಮನೆಯ ಅಂಗಳ ಸ್ವಲ್ಪ ಸ್ವಲ್ಪವೇ ಕುಸಿಯುತ್ತಿದ್ದು, ಅಡಿಪಾಯವೇ ಅಪಾಯಕ್ಕೆ ಸಿಲುಕುವಂತಿದೆ. ಮನೆಯ ಎದುರಿನ ಕುಸಿದ ಭಾಗಕ್ಕೆ ಪ್ಲಾಸ್ಟಿಕ್‌ ಶೀಟ್‌ ಮತ್ತು ಹಗ್ಗವನ್ನು ಕಟ್ಟಿ ಜೀವ ಕೈಯಲ್ಲಿಟ್ಟುಕೊಂಡು ಬದುಕುವ ಸ್ಥಿತಿ ನಿರ್ಮಾಣವಾಗಿದೆ.

Advertisement

ಬೆಳ್ಮ ಗ್ರಾಮ ಪಂಚಾಯತ್‌ ಸದಸ್ಯೆ ಪುಷ್ಪಲತಾ ರೈ ಅವರ ಮನೆಯೇ ಈ ಸ್ಥಿತಿಯಲ್ಲಿರುವುದು. ಮಳೆಗಾಲ ಆರಂಭದಲ್ಲಿ ಮನೆಯ ಎದುರಿನ ಧರೆ ಕುಸಿಯಲು ಆರಂಭಿಸಿತ್ತು. ನಾಲ್ಕು ತಿಂಗಳುಗಳಿಂದ ಪಂಚಾಯತ್‌, ಕಂದಾಯ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆಗೆ ಮನವಿ ಮಾಡಿದರೂ ಈ ಮನೆಯ ರಕ್ಷಣೆಗೆ ಕ್ರಮ ಕೈಗೊಂಡಿಲ್ಲ. ಬಡ ಕುಟುಂಬವಾಗಿದ್ದರಿಂದ ಬದಲಿ ವ್ಯವಸ್ಥೆಗೆ ಅಸಾಧ್ಯವಾಗಿದೆ.

ಈ ಬಾರಿ ಮಳೆಗಾಲದಲ್ಲಿ ಹಲವು ಕಡೆ ಭೂಕುಸಿತಗಳು ಸಂಭವಿಸಿವೆ. ಅದರಲ್ಲೂ ಮುನ್ನೂರು ಗ್ರಾಮದ ಮದನಿ ನಗರದಲ್ಲಿ ಧರೆ ಕುಸಿದು ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದರು. ಈ ವೇಳೆ ಆಗಮಿಸಿದಕಂದಾಯ ಸಚಿವರು ಜಿಲ್ಲೆಯಲ್ಲಿ ಇಂತಹ ಅಪಾಯಕಾರಿ ಸ್ಥಳಗಳನ್ನು ಗುರುತಿಸಿ ರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದರು. ಸ್ಥಳೀಯವಾಗಿ ಸರ್ವೇ ನಡೆಸಲು ಎಲ್ಲ ಗ್ರಾಮ ಪಂಚಾಯತ್‌ಗಳಿಗೆ ಆದೇಶ ನೀಡಿದ್ದರು. ಆದರೆ ಸಚಿವರ ಆದೇಶ ಕೇವಲ ಹೇಳಿಕೆಗೆ ಸೀಮಿತವಾಗಿದೆ.

ಗ್ರಾ.ಪಂ. ಸದಸ್ಯೆಯಾಗಿರುವ ಇವರೇ ಮನೆಯ ಸಮಸ್ಯೆಗಾಗಿ ನಾಲ್ಕು ತಿಂಗಳುಗಳಿಂದ ಓಡಾಡುತ್ತಿದ್ದರೂ ಫ‌ಲ ಸಿಕ್ಕಿಲ್ಲ. ಇನ್ನು ಜನಸಾಮಾನ್ಯರ ಸಮಸ್ಯೆ ಬಗೆಹರಿಯುವುದು ಹೇಗೆ ಎನ್ನುತ್ತಾರೆ ಸ್ಥಳೀಯರು. ಎಂಜಿನಿಯರ್‌ಗಳ ನಿರ್ಲಕ್ಷ್ಯದಿಂದ ಈ ಮನೆ ಕುಸಿಯುವ ಭೀತಿಯಲ್ಲಿದೆ. ಜಿಲ್ಲಾಡಳಿತ ತತ್‌ಕ್ಷಣ ಸ್ಪಂದಿಸಿ ಪ್ರಾಕೃತಿಕ ವಿಕೋಪದಡಿ ಅನುದಾನ ಬಿಡುಗಡೆ ಮಾಡಿ ತಡೆಗೋಡೆ ಕಟ್ಟಿ ಮನೆ ಉಳಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಪುಷ್ಪರಾಜ್‌ ಆಗ್ರಹಿಸಿದ್ದಾರೆ.

ಏನಾದರೂ ಆದರೆ ಜಿಲ್ಲಾಡಳಿತವೇ ಹೊಣೆ
ಲೋಕೋಪಯೋಗಿ ಇಲಾಖೆಯ ಚರಂಡಿ ನಿರ್ಮಾಣದ ಕಾರಣ ಮಣ್ಣು ಕುಸಿದಿದೆ. ಇಲಾಖೆಯನ್ನು ವಿಚಾರಿಸಿದರೆ ಕಡತವನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗಿದೆ ಎನ್ನುತ್ತಾರೆ. ಪ್ರತೀ ಬಾರಿ ಮಳೆ ಬರುವಾಗ ದೇವರ ಮೇಲೆ ಭಾರ ಇಟ್ಟು ಮನೆಯಲ್ಲೇ ವಾಸ ಮಾಡುತ್ತಿದ್ದೇನೆ. ಬಾಡಿಗೆ ಮನೆಯಲ್ಲಿ ನಿಲ್ಲುವಷ್ಟು ಆರ್ಥಿಕ ಸ್ಥಿತಿವಂತರಲ್ಲ. ನನ್ನ ಮನೆಯನ್ನು ಉಳಿಸಲು ಜಿಲ್ಲಾಡಳಿತ ಮುಂದಾಗಬೇಕು. ಏನಾದರೂ ಅವಘಡ ಆದರೆ ಇದಕ್ಕೆ ಜಿಲ್ಲಾಡಳಿತ ಮತ್ತು ಸಂಬಂಧಪಟ್ಟ ಇಲಾಖೆಯೇ ಹೊಣೆಯಾಗಲಿದೆ.
– ಪುಷ್ಪಲತಾ ರೈ, ಬೆಳ್ಮ ಗ್ರಾಮ ಪಂಚಾಯತ್‌ ಸದಸ್ಯೆ

Advertisement

ತಡೆಗೋಡೆ ಆಶ್ವಾಸನೆ ಕಡತದಲ್ಲೇ ಬಾಕಿ
ಲೋಕೋಪಯೋಗಿ ಇಲಾಖೆಯ ಪ್ರಮಾದದಿಂದ ಈ ಮನೆ ಕುಸಿಯುವ ಹಂತಕ್ಕೆ ತಲುಪಿದೆ. ಪ್ರಾಕೃತಿಕ ವಿಕೋಪ ಯೋಜನೆಯಡಿ ತಡೆಗೋಡೆ ನಿರ್ಮಿಸಲು ಸರ್ವೇ ನಡೆಸಿ ಅಧಿಕಾರಿಗಳು ಯೋಜನೆ ರೂಪಿಸಿದರೂ ಈವರೆಗೆ ಕಾರ್ಯಗತವಾಗಿಲ್ಲ. ಘಟನ ಸ್ಥಳಕ್ಕೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು, ತಹಶೀಲ್ದಾರ್‌, ಗ್ರಾ.ಪಂ. ಅಧಿಕಾರಿಗಳು, ಭೂವಿಜ್ಞಾನ ಅಧಿಕಾರಿಗಳು, ಎಂಜಿನಿಯರ್‌ಗಳು ಭೇಟಿ ನೀಡಿ ತಡೆಗೋಡೆ ನಿರ್ಮಾಣಕ್ಕೆ ಬೇಕಾದ ಅಂದಾಜು ವೆಚ್ಚವನ್ನು ಅಂದಾಜಿಸಿ ಕಡತವನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ್ದರು. ಯೋಜನೆ ಕಡತದಲ್ಲೇ ಇದ್ದು ಆದೇಶ ಇನ್ನೂ ಸಿಕ್ಕಿಲ್ಲ.

ಚರಂಡಿ ಅಗೆತವೇ ಕುಸಿತಕ್ಕೆ ಕಾರಣ
ಬೆಳ್ಮ ಗ್ರಾಮದ ದೇರಳಕಟ್ಟೆಯಿಂದ ಕಾನಕೆರೆಯನ್ನು ಸಂಪರ್ಕಿಸುವ ರಸ್ತೆ ಇಳಿಜಾರು ಪ್ರದೇಶದಲ್ಲಿದ್ದು, ಮಳೆಗಾಲ ಆರಂಭದಲ್ಲಿ ಮಳೆ ನೀರು ಹರಿದು ಹೋಗಲು ಲೋಕೋಪಯೋಗಿ ಇಲಾಖೆ ಚರಂಡಿ ನಿರ್ಮಿಸಿತ್ತು. ಈ ಚರಂಡಿ ನಿರ್ಮಾಣದ ಸಂದರ್ಭದಲ್ಲಿ ಮಣ್ಣು ಅಗೆತದಿಂದ ಈ ಕುಸಿತ ಆರಂಭಗೊಂಡಿದ್ದು, ಪ್ರತೀ ಬಾರಿ ಮಳೆ ಬಂದಾಗಲೂ ಹಂತ ಹಂತವಾಗಿ ಮಣ್ಣು ಕುಸಿದು ಇದೀಗ ಮನೆ ಕುಸಿಯುವ ಭೀತಿಯಲ್ಲಿದೆ.

-ವಸಂತ ಎನ್‌. ಕೊಣಾಜೆ

Advertisement

Udayavani is now on Telegram. Click here to join our channel and stay updated with the latest news.

Next