Advertisement

Ullal: ನೋಟಿನ ಹಾರ ತಯಾರಿಸುವುದು ಈಗ ಹಲವರಿಗೆ ವೃತ್ತಿ; ಹೊರ ಜಿಲ್ಲೆಗಳಿಂದಲೂ ಬೇಡಿಕೆ

12:26 PM Aug 27, 2024 | Team Udayavani |

ಉಳ್ಳಾಲ: ಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ, ನವರಾತ್ರಿ ಸಂದರ್ಭದಲ್ಲಿ ಕರಾವಳಿಯಲ್ಲಿ ಅಬ್ಬರಿಸುವ ಹುಲಿ ವೇಷಗಳಿಗೆ ನೋಟಿನ ಹಾರ ಹಾಕುವುದು ಒಂದು ಪ್ರತಿಷ್ಠೆಯ ಸಂಕೇತ. ಕೆಲವು ವರ್ಷಗಳಿಂದ ಹೆಚ್ಚು ಆಕರ್ಷಣೆ ಹೊಂದಿರುವ ಈ ನೋಟಿನ ಮಾಲೆಯಲ್ಲಿ ಈಗ ರೂಪಾಯಿ ಮಾತ್ರವಲ್ಲ ಡಾಲರ್‌ ಕೂಡ ಪ್ರವೇಶ ಮಾಡಿದೆ! ಹೌದು, ವಿಭಿನ್ನತೆ, ವಿಶೇಷತೆಗಾಗಿ ಕೆಲವು ಸಂಘಟನೆಗಳು ವಿದೇಶಿ ಕರೆನ್ಸಿ ಬಳಸಿ ಹಾರ ಮಾಡಿಸಲು ಮುಂದಾಗುತ್ತಿವೆ.

Advertisement

ಅಂದ ಹಾಗೆ, ಈ ರೀತಿ ನೋಟಿನ ಹಾರ ತಯಾರಿ ಒಂದು ವೃತ್ತಿಯಾಗಿ ಬೆಳೆದಿದೆ. ನಾಲ್ಕು ವರ್ಷಗಳ ಹಿಂದೆ ಸಣ್ಣದಾಗಿ ನೋಟಿನ ಹಾರ ತಯಾರಿಸಲು ಶುರು ಮಾಡಿದ್ದ ಉಳ್ಳಾಲದ ಯುವಕ ರಕ್ಷಿತ್‌ ಉಳ್ಳಾಲ ಅವರಿಗೆ ಈಗ ಹುಲಿ ವೇಷದ ಕಾಲದಲ್ಲಿ ಬಿಡುವಿಲ್ಲದ ಕೆಲಸ. ಮಂಗಳಾದೇವಿಯ ತಂಡವೊಂದು ಈ ಹಿಂದೆ 30 ಸಾವಿರ ರೂ. ಮೌಲ್ಯದ ಡಾಲರ್‌ ನೀಡಿ ಮಾಲೆಯನ್ನು ತಯಾರಿಸಿತ್ತು. ಈ ಬಾರಿ ಬೇರೆ ದೇಶದ ಸುಮಾರು 20 ಸಾವಿರ ರೂ. ಮೌಲ್ಯದ ಕರೆನ್ಸಿಗೆ ಬೇಡಿಕೆ ಬಂದಿದೆಯಂತೆ.

ಉಳ್ಳಾಲ ಅರಸುಹಿತ್ಲು ನಿವಾಸಿ ಗಣೇಶ್‌ ಮತ್ತು ಜಯಂತಿ ಅವರ ಪುತ್ರ ರಕ್ಷಿತ್‌ ಉಳ್ಳಾಲ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದಾರೆ. ಆದರೆ, ಅವರಿಗೆ ಅಷ್ಟಮಿಯಿಂದ ದಸರಾವರೆಗೆ ನೋಟಿನ ಮಾಲೆಗೆ ಭಾರಿ ಬೇಡಿಕೆ ಬರುತ್ತದೆ. 500 ರೂ. ನೋಟಿನ ಮಾಲೆಯಿಂದ ಹಿಡಿದು 10 ಸಾವಿರದವರೆಗೆ ನೋಟಿನ ಮಾಲೆಯನ್ನು ತಯಾರಿಸಿ ಇಡುವ ಇವರು, ಪಿಲಿ ತಂಡದ ಆಸಕ್ತಿಗೆ ಅನುಗುಣವಾಗಿ ಸಣ್ಣ ಮಾಲೆಯಿಂದ ದೊಡ್ಡ ಮಾಲೆಯವರೆಗೂ ತಯಾರಿಸಿ ನೀಡುತ್ತಾರೆ

ಆರಂಭದಲ್ಲಿ ಮಂಗಳೂರಿನಲ್ಲೇ ಹೆಚ್ಚು ಬೇಡಿಕೆ ಇದ್ದರೆ ಕಳೆದೆರಡು ವರ್ಷಗಳಿಂದ ಉಡುಪಿ, ಕಾಸರಗೋಡು, ಉತ್ತರ ಕನ್ನಡದಿಂದಲೂ ನೋಟಿನ ಮಾಲೆಗೆ ಬೇಡಿಕೆಗಳು ಬರುತ್ತಿದೆ. ನೋಟಿನ ಮಾಲೆ ಬೇಕಾದವರು ಹಣ ತಂದು ಕೊಟ್ಟ ಒಂದು ಗಂಟೆಯಿಂದ ಎರಡು ಗಂಟೆಯೊಳಗೆ ನೋಟಿನ ಮಾಲೆ ತಯಾರಿಸಿಕೊಡುವ ರಕ್ಷಿತ್‌ ಮಾಲೆ ತಯಾರಿಕೆಗೆ ಬಳಸಿದ ಸಾಮಗ್ರಿಯ ಖರ್ಚು ಮತ್ತು ಒಂದು ಸಣ್ಣ ಮಟ್ಟದ ತಯಾರಿಕೆಯ ಮೊತ್ತವನ್ನು ಪಡೆಯುತ್ತಾರೆ.

ಹವ್ಯಾಸವೇ ಉದ್ಯೋಗವಾಯಿತು 2019ರಲ್ಲಿ ಉಳ್ಳಾಲ ಶಾರದಾ ಮಹೋತ್ಸವಕ್ಕೆ ಹುಲಿ ವೇಷ ಹಾಕಿದ ಸ್ನೇಹಿತರು ಮನೆಗೆ ಬಂದಾಗ ರಕ್ಷಿತ್‌ ಅವರು ತಾವೇ ತಯಾರಿಸಿದ ತಲಾ 500 ರೂ. ಮೌಲ್ಯದ ಮೂರು ಮಾಲೆ ಹಾಕಿ ಗೌರವಿಸಿದ್ದರು, ಈ ಮಾಲೆ ನೋಡಿದ ವೇಷಧಾರಿಗಳ ಮನೆಯವರು ಬೇಡಿಕೆ ಇಟ್ಟಾಗ ಏಳು ಮಾಲೆ ತಯಾರಿಸಿ ಕೊಟ್ಟಿದ್ದರು. ಮುಂದೆ ಹೊರಗಡೆಯಿಂದಲೂ ಬೇಡಿಕೆ ಶುರುವಾಯಿತು. ಹವ್ಯಾಸವಾಗಿ ಹುಟ್ಟಿದ ಈ ಕಲೆ  ಸ್ವೋದ್ಯೋಗವಾಗಿ ಬೆಳೆಯಿತು. ರಕ್ಷಿತ್‌ ಅವರ ಹೆತ್ತವರು, ನೆರೆ ಮನೆಯ ಮಕ್ಕಳು ಬಿಡುವಿನ ಸಂದರ್ಭದಲ್ಲಿ ನೆರವಾಗುತ್ತಿದ್ದಾರೆ. ಕೆಲವು ಸ್ನೇಹಿತರಿಗೂ ರಕ್ಷಿತ್‌ ಉದ್ಯೋಗ ನೀಡಿದ್ದಾರೆ.

Advertisement

-ವಸಂತ ಕೊಣಾಜೆ

Advertisement

Udayavani is now on Telegram. Click here to join our channel and stay updated with the latest news.

Next