Advertisement

Ullal: ಕಾಲೇಜು ಹುಡುಗನ ಹುಲಿ ತಲೆ ಕೀ ಚೈನ್‌ಗೆ ಬೇಡಿಕೆ!

01:15 PM Oct 01, 2024 | Team Udayavani |

ಉಳ್ಳಾಲ: ನವರಾತ್ರಿಗೆ ಭಾರಿ ಜನಾಕರ್ಷಣೆ ಪಡೆಯುವ ಹುಲಿ ವೇಷ, ಕುಣಿತ ಈಗ ಬೇರೆ ಬೇರೆ ರೂಪಗಳಲ್ಲಿ ವ್ಯಾಪಿಸುತ್ತಿದೆ. ಮನೆ ಮನೆಗೆ ಬರುವ ಹುಲಿಗಳು, ದೊಡ್ಡ ವೇದಿಕೆಗಳಲ್ಲಿ ನಡೆಯುವ ಹುಲಿ ವೇಷದ ಸ್ಪರ್ಧೆಗಳ ನಡುವೆ ಹುಲಿಗಳ ತಲೆಯ ಪ್ರತಿಕೃತಿ, ಕೀಚೈನ್‌ಗಳಿಗೂ ಭಾರಿ ಬೇಡಿಕೆ ಹುಟ್ಟಿಕೊಂಡಿದೆ. ಇದನ್ನು ಗಮನಿಸಿ ಕೋಟೆಕಾರಿನ ಬಾಲಕನೊಬ್ಬ ಆರಂಭಿಸಿರುವ ಹುಲಿ ವೇಷದ ಕೀ ಚೈನ್‌ ಮತ್ತು ಪ್ರತಿಕೃತಿ ನಿರ್ಮಾಣ ಕಾಯಕಕ್ಕೆ ಈಗ ಭಾರಿ ಬೆಲೆ ಬಂದಿದೆ. ಬೆಂಗಳೂರು, ಮುಂಬಯಿ ಸಹಿತ ವಿವಿಧೆಡೆಯಿಂದ ಬೇಡಿಕೆಗಳು ಬರುತ್ತಿವೆಯಂತೆ.

Advertisement

ಕೋಟೆಕಾರು ನಿವಾಸಿ ಪ್ರಸಿದ್ಧ ಕಲಾವಿದ ಜಯಪ್ರಸಾದ್‌ (ಜೆ.ಪಿ.) ಆಚಾರ್ಯ ಅವರ ಪುತ್ರನಾಗಿರುವ ಪ್ರಥಮ ಪಿಯುಸಿ ವಿದ್ಯಾರ್ಥಿ ಜ್ಯೇಷ್ಠ ಆಚಾರ್ಯ ಮೂರನೇ ವಯಸ್ಸಿನಿಂದಲೇ ಚಿತ್ರಕಲೆಯಲ್ಲಿ ತೊಡಗಿಕೊಂಡಿದ್ದ. ಅದರ ಜತೆಗೆ ತಂದೆಯ ಗರಡಿಯಲ್ಲಿ ಪಳಗಿದ್ದ. ಬಿಡುವಿನ ವೇಳೆಯಲ್ಲಿ ಹವ್ಯಾಸಕ್ಕಾಗಿ ಆರಂಭಿಸಿದ ಹುಲಿ ವೇಷದ ತಲೆಯ ಪ್ರತಿಕೃತಿ ರಚನೆ ಇದೀಗ ಬೇಡಿಕೆಯನ್ನು ಪಡೆದುಕೊಂಡಿದೆ.

ಕಲಾವಿದ ಜೆ.ಪಿ. ಆಚಾರ್ಯ ಅವರು ಹುಲಿ ವೇಷ ಸ್ಪರ್ಧೆಯ ವಿಜೇತರಿಗೆ ನೀಡುವ ಹುಲಿಯ ತಲೆಗಳ ಪ್ರತಿಕೃತಿಯನ್ನು ಹಲವು ವರ್ಷಗಳಿಂದ ನಿರ್ಮಿಸುತ್ತಿದ್ದಾರೆ. ಈ ನಡುವೆ ಜ್ಯೇಷ್ಠ ಒಂದು ಇಂಚು ಮತ್ತು ಎರಡು ಇಂಚಿನ ಹುಲಿಯ ತಲೆಯ ಪ್ರತಿಕೃತಿಯನ್ನು ನಿರ್ಮಿಸಿ ತನ್ನ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಪ್ರಕಟಿಸಿದ್ದಾರೆ. ಜಾಲತಾಣದಲ್ಲಿ ವೀಕ್ಷಿಸಿದ ಜನರು ತಮಗೂ ಅದೇ ಮಾದರಿಯಲ್ಲಿ ತಯಾರಿಸಿಕೊಡುವಂತೆ ದುಂಬಾಲು ಬಿದ್ದಿದ್ದಾರೆ. ಜ್ಯೇಷ್ಠ ಕಲಿಕೆಯ ಜತೆಗೇ ಈ ಪ್ರತಿಕೃತಿ ಮತ್ತು ಕೀಚೈನ್‌ ರಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಕಾಲೇಜಿನಿಂದ ಬರುವಾಗ ಸಂಜೆ ಐದು ಗಂಟೆ ಆಗುತ್ತದೆ. ಕಲಿಕೆಯೊಂದಿಗೆ ಈ ಒಂದು ಪ್ರತಿಕೃತಿಗೆ ಬಣ್ಣ ತುಂಬಲು ಒಂದು ದಿವಸ ಹಿಡಿಯುತ್ತದೆ. ಹವ್ಯಾಸಕ್ಕಾಗಿ ಆರಂಭಿಸಿರುವ ಈ ಕಲೆಯನ್ನು ಕಲಿಕೆಯೊಂದಿಗೆ ಮುಂದುವರಿಸುತ್ತೇನೆ. ಬೇಡಿಕೆಗೆ ಅನುಗುಣವಾಗಿ ತಯಾರಿಸಿಕೊಡುವ ಯೋಜನೆ ಇದೆ.
-ಜ್ಯೇಷ್ಠ ಆಚಾರ್ಯ,ಯುವ ಕಲಾವಿದ

Advertisement

ಜ್ಯೇಷ್ಠ ಮೂರನೇ ವರ್ಷದಿಂದಲೇ ಡ್ರಾಯಿಂಗ್‌ ರಚಿಸಲು ಆರಂಭಿಸಿದ್ದ. ಬಳಿಕ ನಾನು ಮಾಡುತ್ತಿದ್ದ ಪ್ರತಿಕೃತಿಗಳ ಬಗ್ಗೆ ಆಸಕ್ತಿ ಮೂಡಿ ಹುಲಿಯ ತಲೆಯ ಸಣ್ಣ ಪ್ರತಿಕೃತಿ ರಚಿಸಿದ್ದ. ಭಾರ ಕಡಿಮೆ ಮಾಡುವುದಕ್ಕಾಗಿ ಈಗ ಫೈಬರ್‌ ಮೋಲ್ಡ್‌ನಲ್ಲಿ ಪ್ರತಿಕೃತಿ ತಯಾರಿಸಿ ಬಣ್ಣ ತುಂಬುವ ಕೆಲಸ ಮಾಡುತ್ತಿದ್ದಾನೆ.
-ಜೆ.ಪಿ. ಆಚಾರ್ಯ ಕೋಟೆಕಾರು, ಕಲಾವಿದರು

ಹುಲಿ ತಲೆ ಪ್ರತಿಕೃತಿ ನಿರ್ಮಾಣ ಹೇಗೆ?
ಮೊದಲು ಮಣ್ಣಿನಲ್ಲಿ ಹುಲಿಯ ತಲೆಯ ಪ್ರತಿಕೃತಿಯನ್ನು ತಯಾರಿಸಿ ಬಳಿಕ ಅದರ ಸಿಲಿಕಾನ್‌ ಮೌಲ್ಡ್‌ ತೆಗೆಯುತ್ತೇನೆ. ಫೈಬರ್‌ನಲ್ಲಿ ಗಟ್ಟಿ ಮಾಡುತ್ತೇನೆ. ಹೀಗೆ ಮಾಡಿದ ಒಂದು ಪ್ರತಿಕೃತಿಯನ್ನು ಇನ್‌ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದೆ. ಕೆಲವರು ಇದರ ಬೆಲೆ ಕೇಳಲು ಆರಂಭಿಸಿದರು. ಬಳಿಕ ಬೇಡಿಕೆ ಮೇರೆಗೆ ನಿರ್ಮಾಣಕ್ಕೆ ತೊಡಗಿಕೊಂಡೆ ಎನ್ನುತ್ತಾರೆ ಜ್ಯೇಷ್ಠ.

-ವಸಂತ ಎನ್‌. ಕೊಣಾಜೆ

Advertisement

Udayavani is now on Telegram. Click here to join our channel and stay updated with the latest news.

Next