Advertisement

ಉಳ್ಳಾಲ ಕ್ಷೇತ್ರಕ್ಕೆ ಮಂಗಳೂರು ಎಂಬ ನಾಮಕರಣ ! 

02:12 PM Apr 12, 2018 | Team Udayavani |

ಪುರಾಣ ಇತಿಹಾಸಗಳಿಂದ ಪ್ರಸಿದ್ಧವಾಗಿರುವ ಮಂಗಳೂರು (ಈ ಹಿಂದೆ ಉಳ್ಳಾಲ) ವಿಧಾನಸಭಾ ಕ್ಷೇತ್ರ ರಾಜಕೀಯ ರಂಗದಲ್ಲೂ ಸಾಕಷ್ಟು ಕುತೂಹಲ ಕೆರಳಿಸುತ್ತಿರುವ ಕ್ಷೇತ್ರ. ಈ ಬಾರಿ ಇಲ್ಲಿಂದ ಹಾಲಿ ಶಾಸಕ- ಸಚಿವ ಯು.ಟಿ. ಖಾದರ್‌ ಅವರು ಕಾಂಗ್ರೆಸ್‌ ನಿಂದ ಸ್ಪರ್ಧಿಸಲಿದ್ದಾರೆ. ಬಿಜೆಪಿ ಅಭ್ಯರ್ಥಿ ಬಗ್ಗೆ ಯಾವುದೇ ಸುಳಿವಿಲ್ಲ. ಜೆಡಿಎಸ್‌ ಸ್ಪರ್ಧಿಸಬಹುದು. ಎಸ್‌ಡಿಪಿಐ ನಡೆಯ ಬಗ್ಗೆ ಕುತೂಹಲವಿದೆ.

Advertisement

ಅಂತಾರಾಷ್ಟ್ರೀಯ ಭೂಪಟದಲ್ಲಿ ಗುರುತಿಸಿಕೊಂಡಿರುವ ನಗರ ಉಳ್ಳಾಲ. 15ನೇ ಶತಮಾನದಲ್ಲಿ ಪೋರ್ಚುಗೀಸರ ಅಧೀನದಲ್ಲಿ ಈ ನಗರವಿತ್ತು. ಆದರೆ ಅವರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ ಉಳ್ಳಾಲ ರಾಣಿ ಅಬ್ಬಕ್ಕ ಸ್ವಾಭಿಮಾನ, ದೇಶ ಪ್ರೇಮದ ಮೂಲಕ ಅಜರಾಮರರಾದರು.

ದಕ್ಷಿಣ ಭಾರತ ಮತ್ತು ಉತ್ತರ ಭಾರತಕ್ಕೆ ಧಾರ್ಮಿಕ ಬೆಸುಗೆಯಾಗಿದ್ದ ಶ್ರೀ ಸೋಮನಾಥೇಶ್ವರ ದೇವಸ್ಥಾನ, ವಿಶಿಷ್ಟ ಪರಂಪರೆಯ ಹಜ್ರತ್‌ ಸಯ್ಯದ್‌ ಮೊಹಮ್ಮದ್‌ ಶರೀಫಲ್‌ ಮದನಿ ದರ್ಗಾ, ಚರ್ಚ್‌ಗಳು, ಅಬ್ಬಕ್ಕ ದೇವಿ ಆರಾಧಿಸುತ್ತಿದ್ದ ಬಸದಿ ಮುಂತಾದ ಧಾರ್ಮಿಕ ಕೇಂದ್ರಗಳು ಇಲ್ಲಿವೆ. ಮೋಹಕ ಕಡಲ ಕಿನಾರೆ ಇದೆ. ಜಾಗತಿಕ ಮಟ್ಟದ ಪ್ರವಾಸಿ ಕೇಂದ್ರವಾಗುವ ಅಪಾರ ಅವಕಾಶಗಳು ಇಲ್ಲಿವೆ. ಅಂತೆಯೇ ಕಡಲ್ಕೊರೆತ, ಅಳಿವೆ ಬಾಗಿಲಿನಲ್ಲಿ ತುಂಬುವ ಹೂಳು ಮುಂತಾದ ಸಮಸ್ಯೆಗಳೂ ಇವೆ.

ಈ ಹಿಂದಿನ 13 ಚುನಾವಣೆಗಳಲ್ಲಿ ಇಲ್ಲಿ ಕಾಂಗ್ರೆಸ್‌ ಪಕ್ಷ 10 ಬಾರಿ; ಸಿಪಿಐ (1962), ಸಿಪಿಎಂ (1983), ಬಿಜೆಪಿ (1994) ತಲಾ ಒಂದು ಬಾರಿ ಜಯಿಸಿವೆ. ಎರಡೂ ಎಡಪಕ್ಷಗಳಿಗೆ ಕರಾವಳಿಯ ಈ ಪ್ರದೇಶದಿಂದ ಪ್ರಾತಿನಿಧ್ಯ ನೀಡಿದ ದಾಖಲೆ ಇದು. ಉಳಿದಂತೆ ಬಿಜೆಪಿಯೂ ಒಮ್ಮೆ ಜಯಿಸಿದೆ. ಇತರ ಗೆಲುವುಗಳು ಕಾಂಗ್ರೆಸ್‌ಗೆ ಲಭಿಸಿತು. 2009ರಲ್ಲಿ ರಾಜ್ಯದ ವಿಧಾನಸಭಾ ಕ್ಷೇತ್ರಗಳ ಪುನರ್ವಿಂಗಡನೆಯಾಯಿತು. ಕೆಲವು ಕ್ಷೇತ್ರಗಳು ವಿಸ್ತಾರಗೊಂಡರೆ ಇನ್ನು ಕೆಲವು ಭೌಗೋಳಿಕ ಗಾತ್ರದಲ್ಲಿ ಕುಗ್ಗಿದವು. ಮತದಾರರ ಸಂಖ್ಯೆಯ ಸಮೀಕರಣದ ಉದ್ದೇಶದಿಂದ ಈ ಪರಿವರ್ತನೆಯಾಯಿತು. ಕೆಲವು ಕ್ಷೇತ್ರಗಳಿಗೆ ಹೊಸದಾಗಿ ನಾಮಕರಣವೂ ಆಯಿತು! ಉಳ್ಳಾಲ ಕ್ಷೇತ್ರ ಮಂಗಳೂರು ಎಂಬುದಾಗಿಯೂ; ಮಂಗಳೂರು ಕ್ಷೇತ್ರ ಮಂಗಳೂರು ದಕ್ಷಿಣ ಎಂಬುದಾಗಿಯೂ ನಾಮಕರಣಗೊಂಡವು. ಈ ಸಂದರ್ಭದಲ್ಲಿ ವಿಟ್ಲ ವಿಧಾನಸಭಾ ಕ್ಷೇತ್ರವನ್ನು ಕೈ ಬಿಡಲಾಯಿತು. ಅಕ್ಕಪಕ್ಕದ ಕ್ಷೇತ್ರಗಳಿಗೆ ಈ ಕ್ಷೇತ್ರದ ಭೂಭಾಗ ಹಂಚಿ ಹೋಯಿತು.

ಅಂದ ಹಾಗೆ …
ಉಳ್ಳಾಲ (ಈಗ ಮಂಗಳೂರು) ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿ ತಂದೆ-ಮಗನ ವಿಶೇಷ ಪರಂಪರೆ ಇದೆ. ಇಲ್ಲಿ ಯು.ಟಿ. ಫರೀದ್‌ ಅವರು 1972, 1978, 1999 ಮತ್ತು 2004ರಲ್ಲಿ (ಒಟ್ಟು 4 ಬಾರಿ) ಗೆದ್ದವರು. ಅವರ ನಿಧನಾನಂತರ ನಡೆದ ಉಪ ಚುನಾವಣೆಯಲ್ಲಿ ಅವರ ಪುತ್ರ ಯು.ಟಿ. ಖಾದರ್‌ (2007) ಗೆದ್ದರು. ಆ ಬಳಿಕದ ಎರಡೂ ಚುನಾವಣೆಗಳಲ್ಲಿ- 2008 ಮತ್ತು 2013 (ಒಟ್ಟು 3 ಬಾರಿ) ಜಯಿಸಿದರು. ಪ್ರಸ್ತುತ ನಾಗರಿಕ ಪೂರೈಕೆ, ಆಹಾರ ಇಲಾಖೆಯ ಸಚಿವರಾಗಿದ್ದಾರೆ. ವಿಶೇಷವೆಂದರೆ, ಅವರಿಬ್ಬರೂ ಕಾನೂನು ಪದವೀಧರರು. ಯುವ ಕಾಂಗ್ರೆಸ್‌ನ ನಾಯಕರಾಗಿದ್ದವರು.

Advertisement

ಮನೋಹರ ಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next