Advertisement

ನಾವಿದ್ದ 2-3 ಕಿ.ಮೀ. ದೂರದಲ್ಲೇ ಬಾಂಬ್‌ ಸ್ಫೋಟ

01:32 AM Mar 06, 2022 | Team Udayavani |

ಕುಂದಾಪುರ: ಉಕ್ರೇನ್‌ನ ಎರಡನೇ ಅತೀ ದೊಡ್ಡ ನಗರವಾದ ಖಾರ್ಕಿವ್‌ನ ಹೊಲೆಸ್ಕಿವಿಕಾದಲ್ಲಿನ ವಿ.ಎನ್‌. ಕಾರ್ಜಿನ್‌ ನ್ಯಾಶನಲ್‌ ಮೆಡಿಕಲ್‌ ಕಾಲೇಜು ಸಮೀಪದ ಹಾಸ್ಟೆಲ್‌ನಲ್ಲಿ ನಾವಿದ್ದೆವು. ಫೆ. 23ರ ರಾತ್ರಿ 3 ಗಂಟೆಗೆ ಮೊದಲ ಬಾರಿಗೆ ಭಾರೀ ಬಾಂಬ್‌ ಸ್ಫೋಟ ಸಂಭವಿಸಿತ್ತು. ನಾವಿದ್ದಲ್ಲಿಂದ ಅಲ್ಲಿಗೆ ಕೇವಲ 2-3 ಕಿ.ಮೀ. ದೂರವಷ್ಟೇ…

Advertisement

ಹೀಗೆ ಯುದ್ಧ ಪೀಡಿತ ಉಕ್ರೇನ್‌ನಿಂದ ಗುರುವಾರ ಸಂಜೆ ಸ್ವದೇಶಕ್ಕೆ ವಾಪಸಾಗಿರುವ ನಾವುಂದ ಮಸ್ಕಿಯ ಅಂಕಿತಾ ಜಗದೀಶ್‌ ಪೂಜಾರಿ ತಾನು ಅಲ್ಲಿ ಎದುರಿಸಿದ ಕಠಿನ ಪರಿಸ್ಥಿತಿಯನ್ನು ಬಿಚ್ಚಿಟ್ಟರು.

ಹಾಸ್ಟೆಲ್‌ನಲ್ಲಿದ್ದು ದರಿಂದ ನಮಗೆ ಊಟ, ತಿಂಡಿಗೆ ಸಮಸ್ಯೆಯಾಗಿರಲಿಲ್ಲ. ಮಾರುಕಟ್ಟೆ ಬಂದ್‌ ಆದ್ದರಿಂದ ಕುಡಿಯುವ ನೀರಿಗೆ ಸ್ವಲ್ಪ ಸಮಸ್ಯೆಯಾಯಿತು. ಮತ್ತೆ ಮಾರುಕಟ್ಟೆ ಒಂದಷ್ಟು ಹೊತ್ತು ತೆರೆದಾಗ ಅಗತ್ಯ ವಸ್ತುಗಳೆಲ್ಲವನ್ನು ಖರೀದಿಸಿದೆವು. ಒಂದೆರಡು ದಿನ ಬಂಕರ್‌ನಲ್ಲಿದ್ದೆವು. ಆದರೆ ಅಲ್ಲಿ ಉಸಿರಾಟದ ಸಮಸ್ಯೆಯಿಂದ ಹಾಸ್ಟೆಲ್‌ಗೆ ವಾಪಸಾದೆವು.

ಆರಂಭದಲ್ಲಿ ಗಂಟೆಗೊಂದು ಸ್ಫೋಟ ಕೇಳಿಸುತ್ತಿದ್ದರೆ, ದಿನ ಕಳೆದಂತೆ ಆಗಾಗ ಕೇಳಿಸಲಾರಂಭಿಸಿತು. ನಾವು ಭಯದಿಂದಲೇ ಇದ್ದೆವು. ರಾಜ್ಯದ ವಿದ್ಯಾರ್ಥಿ ನವೀನ್‌ ಮೃತಪಟ್ಟ ಸ್ಥಳ ಸಮೀಪದಲ್ಲೇ ಇತ್ತು. ಆದರೆ ರಷ್ಯಾದವರಾಗಲಿ, ಉಕ್ರೇನ್‌ ಸೈನಿಕರಾಗಲಿ ಭಾರತೀಯ ವಿದ್ಯಾರ್ಥಿಗಳಿಗೆ ತೊಂದರೆ ಮಾಡುತ್ತಿರಲಿಲ್ಲ. ಇದು ನಮಗೆ ಒಂದಷ್ಟು ಧೈರ್ಯ ತಂದಿತ್ತು.

ಡಿಸಿ, ತಹಶೀಲ್ದಾರ್‌ ಸಂಪರ್ಕ
ಅಂಕಿತಾ ಮನೆಯ ವರೊಂ ದಿಗೆ ನಿರಂತರ ಸಂಪರ್ಕ ದಲ್ಲಿದ್ದರು. ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್‌ ಹಾಗೂ ಬೈಂದೂರು ತಹಶೀಲ್ದಾರ್‌ ಶೋಭಾಲಕ್ಷ್ಮೀ ಅವರು ನನ್ನನ್ನು ಫೋನ್‌ ಮೂಲಕ ಸಂಪರ್ಕಿಸಿ ಧೈರ್ಯ ತುಂಬಿದರು ಎಂದರು.

Advertisement

ಅನ್ಯರ ಕೈಯಲ್ಲೂ ನಮ್ಮ ಧ್ವಜ!
ರಾಯಭಾರ ಕಚೇರಿ ಅಧಿಕಾರಿಗಳು ನಮ್ಮನ್ನು ಸಂಪರ್ಕಿಸಿ, ಪೋಲಂಡ್‌ ಗಡಿಗೆ ಬರುವಂತೆ ಸೂಚಿಸಿದರು. ಆರಂಭದಲ್ಲಿ ಅಲ್ಲಿಂದ ಬರಲು ವ್ಯವಸ್ಥೆಯಿರಲಿಲ್ಲ. ಮಾ. 1ರಂದು ಖಾರ್ಕಿವ್‌ನಿಂದ ಲವ್‌ ಯಾ ನಗರಕ್ಕೆ ಬಸ್ಸಿನಲ್ಲಿ 3 ಗಂಟೆ ಪ್ರಯಾಣಿಸಿ ಅಲ್ಲಿಂದ ಮಾ. 2ರಂದು ಪೋಲಂಡ್‌ ಗಡಿಯವರೆಗೆ ರೈಲಿನಲ್ಲಿ ಬಂದೆವು. ಬೇರೆ ದೇಶದವರೂ ಜತೆಗಿದ್ದರು. ಅವರ ಕೈಯಲ್ಲೂ ನಮ್ಮ ದೇಶದ ಧ್ವಜ ಹಿಡಿದುಕೊಂಡಿರುವುದು ಕಂಡುಬಂತು.
ವಿದೇಶಿಗರು ಕೂಡ ತಮ್ಮ ಜೀವ ಉಳಿಸಿಕೊಳ್ಳಲು ನಮ್ಮ ರಾಷ್ಟ್ರಧ್ವಜಕ್ಕೆ ಮೊರೆ ಹೋಗಿರುವುದನ್ನು ಕಂಡು ನಮ್ಮ ದೇಶದ ಮೇಲಿನ ಅಭಿಮಾನ ಇಮ್ಮಡಿಯಾಯಿತು. ಅಲ್ಲಿ ರಾಯಭಾರ ಕಚೇರಿ ಅಧಿಕಾರಿಗಳು ಭಾರತೀಯರಿಗೆ ಉಳಿದುಕೊಳ್ಳಲು ಒಂದು ಕಡೆ ವ್ಯವಸ್ಥೆ ಮಾಡಿದ್ದರು. ಅಲ್ಲಿ ಕೇಂದ್ರ ಸಚಿವರು ಸಹ ಇದ್ದರು. ನಮ್ಮೊಂದಿಗೆ ಮಾತನಾಡಿ, ಮುಂದಿನ ಶಿಕ್ಷಣದ ಬಗ್ಗೆ ಆತಂಕ ಬೇಡ. ನಿಶ್ಚಿಂತೆಯಿಂದ ತವರಿಗೆ ವಾಪಸಾಗಿ ಎಂದು ಧೈರ್ಯ ತುಂಬಿದ್ದರು. ಆ ದಿನ ಸಂಜೆ 4.30ಕ್ಕೆ ಪೋಲಂಡ್‌ನಿಂದ ಇಸ್ತಾಂಬುಲ್‌ ಮೂಲಕ ದಿಲ್ಲಿ, ಅಲ್ಲಿಂದ ಮಾ. 3ರ ಸಂಜೆ 6ಕ್ಕೆ ಮುಂಬಯಿಗೆ ಹೊರಟು, ರಾತ್ರಿ 8ಕ್ಕೆ ತಲುಪಿದ್ದೇನೆ ಎಂದು ಅಂಕಿತಾ ಉಕ್ರೇನ್‌ನಿಂದ ತವರಿಗೆ ಬಂದಂತಹ ಪ್ರಯಾಣದ ಹಾದಿಯನ್ನು ಬಿಚ್ಚಿಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next