Advertisement

ಉಜ್ವಲಾ: ಸಮಗ್ರ ಸಮೀಕ್ಷೆಗೆ ಡಿಸಿ ಸೂಚನೆ

02:49 PM Jul 10, 2018 | Team Udayavani |

ಉಡುಪಿ: ಕೇಂದ್ರ ಸರಕಾರದ ಅನಿಲ ಸಂಪರ್ಕ “ಉಜ್ವಲಾ’ ಯೋಜನೆಯಡಿ ಅರ್ಹ ಫ‌ಲಾನುಭವಿಗಳಿಗೆ ಸಂಪರ್ಕ ಕಲ್ಪಿಸಲು ಬಾಕಿ ಇರುವವರ ಸಮೀಕ್ಷೆ ನಡೆಸಿ ಎಂದು ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ಸೂಚಿಸಿದ್ದಾರೆ. 

Advertisement

ಸೋಮವಾರ ಜಿಲ್ಲಾಧಿಕಾರಿ ಕಚೇರಿ ಯಲ್ಲಿ ಉಜ್ವಲಾ ಯೋಜನೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಕುರಿತು ನಡೆದ ಸಭೆಯಲ್ಲಿ ಮಾತನಾಡಿದ ಅವರು, ಎಷ್ಟು ಜನರಿಗೆ ಅನಿಲ ಸಂಪರ್ಕ ಕೊಡಲಾಗಿದೆ, ಎಷ್ಟು ಜನರಿಗೆ ಕೊಡಲು ಬಾಕಿ ಇದೆ ಎಂಬ ಕುರಿತು ಮಾಹಿತಿಯನ್ನು ಸಂಗ್ರಹಿಸಿ. ಈ ಸಾಮಾಜಿಕ ಆರ್ಥಿಕ ಸಮೀಕ್ಷೆಯ ವರದಿಯನ್ನು ಜು. 20ರೊಳಗೆ ನೀಡಬೇಕು ಎಂದರು. ಆಹಾರ ಮತ್ತು ನಾಗರಿಕ ಪೂರೈಕೆ ಜಿಲ್ಲಾ ಉಪ ನಿರ್ದೇಶಕರು, ಎಚ್‌ಪಿಸಿಎಲ್‌ ಅಧಿಕಾರಿಗಳು ಉಪಸ್ಥಿತರಿದ್ದರು. 

ಅನಿಲ ಸಂಪರ್ಕದಲ್ಲಿ ಅವ್ಯವಹಾರ ನಡೆದ ಕುರಿತು ಜಿಲ್ಲಾಧಿಕಾರಿಯವರ ಪ್ರತಿಕ್ರಿಯೆ ಕೇಳಿದಾಗ, ಎಚ್‌ಪಿಸಿಎಲ್‌ ನೋಡಲ್‌ ಅಧಿಕಾರಿಗಳು ಇದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದರು. 

ಪರಿಶಿಷ್ಟ ಜಾತಿ- ಪಂಗಡ, ಎಎವೈ (ಅಂತ್ಯೋದಯ, ಅನ್ನ ಯೋಜನೆ) ಫ‌ಲಾನುಭವಿಗಳಿಗೆ ಉಚಿತವಾಗಿ ಅನಿಲ ಸಿಲಿಂಡರ್‌ ಸಂಪರ್ಕವನ್ನು ಕೊಡುತ್ತಿದ್ದೇವೆ. ಈ ವರ್ಗದವರು ಸಮೀಪದ ಅನಿಲ ವಿತರಕರಿಂದ ಸಂಪರ್ಕವನ್ನು ಪಡೆಯಬಹುದು. ಮುಂದಿನ ದಿನಗಳಲ್ಲಿ ಬಿಪಿಎಲ್‌ ಕಾರ್ಡುದಾರರಿಗೂ ಅವಕಾಶ ಸಿಗುವ ಸಾಧ್ಯತೆ ಇದೆ. ದೇಶದಲ್ಲಿ ಒಟ್ಟು 4.5 ಕೋಟಿ ಜನರಿಗೆ ಅನಿಲ ಸಂಪರ್ಕ ಕಲ್ಪಿಸಲಾಗಿದೆ. ಇನ್ನು 3.5 ಕೋಟಿ ಜನರಿಗೆ ನೀಡಬೇಕಾಗಿದೆ ಎಂದು ಎಚ್‌ಪಿಸಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ. 

ಚುರುಕುಗೊಂಡ ತನಿಖೆ
ಬೈಂದೂರು:
ಉಡುಪಿ ಜಿಲ್ಲೆಯಲ್ಲಿ ನಡೆದ ಉಜ್ವಲಾ ಗೋಲ್‌ಮಾಲ್‌ ಹಗರಣ ಕುರಿತಂತೆ ಕೇಂದ್ರ ಪೆಟ್ರೋಲಿಯಂ ಇಲಾಖೆಯ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ. ಕೇಂದ್ರದ ಮಹತ್ವಾಕಾಂಕ್ಷಿ ಯೋಜನೆಯಾದ ಉಜ್ವಲಾ ಅಡುಗೆ ಅನಿಲ ವಿತರಣೆಯಲ್ಲಿ ಲೋಪ ನಡೆದಿರುವುದು ಬಹುತೇಕ ಸಾಬೀತುಗೊಂಡಿದೆ. ರಾಜ್ಯದ ವಿವಿಧ ಕಡೆ ಈ ಪ್ರಕರಣ ನಡೆದಿರುವುದು ಕೂಡ ಸಾಬೀತಾಗಿದೆ.

Advertisement

ಬೈಂದೂರು ತಾಲೂಕಿನಲ್ಲಿ ಉಜ್ವಲಾ ವಿತರಣೆಯಲ್ಲಿ ಗೋಲ್‌ಮಾಲ್‌ ನಡೆದಿರುವ ಕುರಿತು “ಉದಯವಾಣಿ’ ವರದಿ ಪ್ರಕಟಿಸಿತ್ತು. ವರದಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಕೇಂದ್ರ ಸರಕಾರದ ನೋಡಲ್‌ ಅಧಿಕಾರಿಗಳಿಗೆ ನೋಟಿಸ್‌ ನೀಡಿದ್ದರು. ಈಗಾಗಲೇ ತನಿಖೆ ಚುರುಕುಗೊಳಿಸಿದ ಅಧಿಕಾರಿಗಳು ವಿತರಣೆಯಾದ ಗ್ಯಾಸ್‌ ಸಂಪರ್ಕಗಳ ಸಮಗ್ರ ವಿವರ ಪಡೆದು ವರದಿ ನೀಡಲಿದ್ದಾರೆ. ಒಂದೊಮ್ಮೆ ಪ್ರಕರಣ ಸಾಬೀತಾದರೆ ಕಾನೂನು ವ್ಯಾಪ್ತಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ದಾಖಲೆಗಳ ಪರಿಶೀಲನೆ
ಬ್ರಹ್ಮಾವರ:
ಕೇಂದ್ರ ಸರಕಾರದ ಉಜ್ವಲಾ ಯೋಜನೆ ಸಂಪರ್ಕ ಉಡುಪಿ ಜಿಲ್ಲೆಯಲ್ಲಿ ರಾಂಗ್‌ ಕನೆಕ್ಷನ್‌ ಆಗಿದ್ದ ಹಿನ್ನೆಲೆಯಲ್ಲಿ ಪೆಟ್ರೋಲಿಯಂ ಅಧಿಕಾರಿಗಳು ತನಿಖೆ ಪ್ರಾರಂಭಿಸಿದ್ದಾರೆ. ಮೂವರು ಅಧಿಕಾರಿಗಳ ತಂಡ ಬ್ರಹ್ಮಾವರದ ಗ್ಯಾಸ್‌ ವಿತರಕ ಏಜೆನ್ಸಿಯಲ್ಲಿ ದಾಖಲೆಗಳ ಪರಿಶೀಲನೆ ನಡೆಸಿತು. 3,900 ಸಂಪರ್ಕಗಳಲ್ಲಿ ಸೋಮವಾರದ ತನಕ ಸುಮಾರು 3,000 ದಾಖಲೆಗಳ ಪರಿಶೀಲನೆ ನಡೆದಿದೆ. ಫಲಾನುಭವಿಗಳ ಆಧಾರ್‌, ಮೊಬೈಲ್‌, ಬ್ಯಾಂಕ್‌ ಖಾತೆ ಸಂಖ್ಯೆಗಳ ಸತ್ಯಾಸತ್ಯತೆ ತಿಳಿಯಲಾಗುತ್ತಿದೆ. ಟಿನ್‌ ನಂಬರ್‌ ತುಲನೆ ಮಾಡಲಾಗುತ್ತಿದೆ. ಕಂಪ್ಯೂಟರ್‌ ದಾಖಲೆಗಳನ್ನು ಪರಿಶೀಲಿಸಿ, ಸಂಶಯವಿರುವ ಮಾಹಿತಿಗಳ ನಕಲು ಪ್ರತಿ ಪಡೆಯಲಾಗಿದೆ. ಬ್ರಹ್ಮಾವರದ ಏಜೆನ್ಸಿಯಲ್ಲಿ ಪರಿಶೀಲನೆ ಮಂಗಳವಾರ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next