Advertisement

ಉಜಿರೆ ಚಿಕ್ಕ ಮೇಳ: ಮಳೆಗಾಲದ ತಿರುಗಾಟ ಆರಂಭ 

12:49 PM Jun 08, 2018 | Team Udayavani |

ಬೆಳ್ತಂಗಡಿ : ಮಳೆಗಾಲದಲ್ಲಿ ಮನೆ ಮನೆಗಳಲ್ಲಿ ಚಿಕ್ಕ ಮೇಳದ ಯಕ್ಷಗಾನ ಪ್ರದರ್ಶನದಿಂದ, ಚೆಂಡೆ, ಮದ್ದಲೆ, ಗೆಜ್ಜೆ ಕುಣಿತದಿಂದ ದುಷ್ಟ ಶಕ್ತಿಗಳು ದೂರವಾಗುವುದೆಂಬ ನಂಬಿಕೆಯಿದೆ. ದೇವಾಲಯಗಳು ಧರ್ಮ ಪ್ರಚಾರದ ಜತೆಗೆ ಜಿಲ್ಲೆಯ ಸಾಂಪ್ರದಾಯಿಕ ಕಲೆಯಾದ ಯಕ್ಷಗಾನವನ್ನು ಪೋಷಿಸಿ ಬೆಳೆಸಿಕೊಂಡು ಬರುವುದರಿಂದ ಮುಂದಿನ ಪೀಳಿಗೆಯ ಮಕ್ಕಳಲ್ಲಿ ಪೌರಾಣಿಕ ಕಥೆಗಳಲ್ಲಿ ಅಭಿರುಚಿ, ಆಸಕ್ತಿ ಮೂಡಿ ಸಂಸ್ಕೃತಿ-ಸಂಸ್ಕಾರದ ಉದ್ದೀಪನವಾಗುತ್ತದೆ ಎಂದು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ವಿಜಯರಾಘವ ಪಡ್ವೆಟ್ನಾಯ ಹೇಳಿದರು.

Advertisement

ಅವರು ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದಲ್ಲಿ ಶ್ರೀ ಜನಾರ್ದನ ಸ್ವಾಮಿ ಕೃಪಾಶ್ರಿತ ಚಿಕ್ಕಮೇಳದ ಮಳೆಗಾಲದ 4ನೇ ವರ್ಷದ ತಿರುಗಾಟದ ಪ್ರಾರಂಭದಲ್ಲಿ ವಿಶೇಷ ಸೇವಾ ಪೂಜೆಯ ಬಳಿಕೆ ಗೆಜ್ಜೆಯನ್ನು ಕಲಾವಿದರಿಗೆ ವಿತರಿಸಿ, ಶ್ರೀ ದೇವರ ಭಾವಚಿತ್ರವನ್ನು ಚಿಕ್ಕಮೇಳದ ವ್ಯವಸ್ಥಾಪಕ ಯಕ್ಷಗಾನ ಕಲಾವಿದ ಚಂದ್ರಶೇಖರ ಧರ್ಮಸ್ಥಳ ಅವರಿಗೆ ನೀಡಿ ಮಾತನಾಡಿದರು. ಅರ್ಚಕ ವೇ| ಮೂ| ಶ್ರೀನಿವಾಸ ಹೊಳ್ಳ ಅವರು ಶ್ರೀ ಜನಾರ್ದನ ಸ್ವಾಮಿಗೆ ಪೂಜೆ ನೆರವೇರಿಸಿ ಪ್ರಸಾದ ವಿತರಿಸಿದರು.

2 ತಿಂಗಳ ಕಾಲ ಪ್ರದರ್ಶನ
ಚಿಕ್ಕಮೇಳದ ತಿರುಗಾಟ ಪ್ರತಿ ಸಂಜೆ 6ರಿಂದ ರಾತ್ರಿ 11.30ರ ವರೆಗೆ ಉಜಿರೆ, ಧರ್ಮಸ್ಥಳ, ಬೆಳ್ತಂಗಡಿ ಪರಿಸರದಲ್ಲಿ ಪೂರ್ವ ಸೂಚನೆಯಂತೆ ಮನೆ ಮನೆಗೆ ತೆರಳಿ 5-10 ನಿಮಿಷಗಳ ಪೌರಾಣಿಕ ಕಥಾಭಾಗದ ಆಖ್ಯಾನವನ್ನು ಹಾಡುಗಾರಿಕೆ, ಕುಣಿತ, ಅರ್ಥಗಾರಿಕೆಯೊಂದಿಗೆ ಸುಮಾರು 2 ತಿಂಗಳ ಕಾಲ ಪ್ರದರ್ಶನ ನೀಡಲಿದೆ. ಕುಶಾಲಪ್ಪ ಗೌಡ ಅವರ ಸಂಯೋಜನೆಯ ಚಿಕ್ಕಮೇಳದ ತಿರುಗಾಟ ದಲ್ಲಿ ಹಾಡುಗಾರಿಕೆಯಲ್ಲಿ ಕರುಣಾಕರ ಶೆಟ್ಟಿಗಾರ್‌ ಕಾಶಿಪಟ್ಣ, ಮೃದಂಗದಲ್ಲಿ ಸರಪಾಡಿ ಚಂದ್ರಶೇಖರ, ಪಾತ್ರವರ್ಗದಲ್ಲಿ ರಾಘವೇಂದ್ರ ಪೇತ್ರಿ, ಮುರಳೀಧರ ಕನ್ನಡಿಕಟ್ಟೆ ಮತ್ತು ಸತೀಶ ನೀರ್ಕೆರೆ ಹಾಗೂ ಅವಿನಾಶ್‌ ಶೆಟ್ಟಿ ಧರ್ಮಸ್ಥಳ ಸಹಕರಿಸಲಿದ್ದಾರೆ. ತಿರುಗಾಟದ ಪ್ರಾರಂಭದ ಗಣಪತಿ ಸ್ತುತಿಯಲ್ಲಿ ಧರ್ಮಸ್ಥಳ ಯಕ್ಷಗಾನ ಮೇಳದ ವ್ಯವಸ್ಥಾಪಕ ಗಿರೀಶ ಹೆಗ್ಡೆ, ನರೇಂದ್ರ ಕುಮಾರ್‌, ವೆಂಕಟರಮಣ ರಾವ್‌ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next