ಬೆಳ್ತಂಗಡಿ: ಅಭಿವೃದ್ಧಿ ಎಂಬುದು ಇಚ್ಛಾಶಕ್ತಿಯಲ್ಲಿರುವ ಗುಣಮಟ್ಟದ ಚಿಂತನೆಯಾಗಿದೆ. ತಮ್ಮ ಊರು ಕೇರಿ ಜತೆಗೆ ಪಟ್ಟಣಕ್ಕೆ ಪೂರಕ ವಾತಾವರಣ ಸೃಷ್ಟಿಸಬೇಕೆಂಬ ಮಹತ್ವಾಕಾಂಕ್ಷೆಯಿಂದ ಉಜಿರೆ ಗ್ರಾ.ಪಂ. ಹಾಗೂ ಶಾಸಕ ಹರೀಶ್ ಪೂಂಜ ಅವರ ದೂರದೃಷ್ಟಿಯಡಿ ಉಜಿರೆ ಅತ್ತಾಜೆಯಲ್ಲಿರುವ 3 ಎಕ್ರೆ ವಿಸ್ತಾರದ ಕೆರೆ ಹಾಗೂ ಸುತ್ತಲಿರುವ 11 ಎಕ್ರೆ ಪ್ರದೇಶವನ್ನು ಪ್ರವಾಸಿ ತಾಣವಾಗಿಸುವಲ್ಲಿ ಹೊಸ ರೂಪರೇಖೆ ಯೊಂದು ಸಿದ್ಧಗೊಂಡಿದೆ.
ಉಜಿರೆ ಪೇಟೆಯಿಂದ 2 ಕಿ.ಮೀ. ದೂರದ ಅತ್ತಾಜೆ ಕೆರೆಯು ಅಳಿವಿನಂಚಿಗೆ ಸರಿದಿತ್ತು. ಕೊರೊನಾ ಲಾಕ್‌ಡೌನ್ ಅವಧಿಯಲ್ಲಿ ಸ್ಥಳೀಯ 60ಕ್ಕೂ ಅಧಿಕ ಕುಟುಂಬದ ಮಹಿಳೆಯರು ನರೇಗಾದಡಿ ಕೆರೆ ಹೂಳೆತ್ತುವ ಮೂಲಕ ಮರುಹುಟ್ಟು ನೀಡಿದ್ದರು. ಬಳಿಕ ಇಲ್ಲೊಂದು ಉತ್ತಮ ಉದ್ಯಾನವನ ನಿರ್ಮಿಸುವ ಮಹದಾಸೆ ಸ್ಥಳೀಯಾಡಳಿತಕ್ಕೆ ಬಂದಿತ್ತು. ಅದನ್ನು ಶಾಸಕರು ದೊಡ್ಡ ಮಟ್ಟಕ್ಕೆ ವಿಸ್ತರಿಸುವ ಸಲಹೆ ನೀಡಿದಂತೆ ಸಣ್ಣ ನೀರಾವರಿ ಇಲಾಖೆಯಿಂದ 1.75 ಲಕ್ಷ ರೂ. ಒದಗಿಸಿದ್ದು ಉಳಿದ ಅನುದಾನ ಸೇರಿ ಪ್ರಸಕ್ತ 2.20 ಕೋ.ರೂ. ಲಭ್ಯತೆಯಲ್ಲಿ ಆರಂಭಿಕವಾಗಿ ಹೂಳು ತೆರವು ತಡೆಗೋಡೆ ನಿರ್ಮಾಣ ನೀರಾವರಿ ಇಲಾಖೆಯಿಂದ ನಡೆಯಲಿದೆ.
ಪ್ರವಾಸಿ ತಾಣವಾಗಿ ಬದಲಾವಣೆ: ಅತ್ತಾಜೆ ಕೆರೆಯು 3 ಎಕ್ರೆ ಸ್ಥಳದಲ್ಲಿ ವ್ಯಾಪಿಸಿದೆ. ಉಳಿದಂತೆ 11 ಎಕ್ರೆ ಇತರ ಸ್ಥಳವಿದ್ದು, ಈ ಪ್ರದೇಶದಲ್ಲಿ ಉದ್ಯಾನವನ, ಪವಿತ್ರ ವನ, ಎಂಆರ್ ಎಫ್ ತ್ಯಾಜ್ಯ ಸಂಸ್ಕರಣ ಘಟಕ, ವಾಕಿಂಗ್ ಟ್ರ್ಯಾಕ್, ಮಕ್ಕಳ ಪಾರ್ಕ್ ನಿರ್ಮಾಣಗೊಳ್ಳಲಿದೆ. ಇದರ ನಿರ್ವಹಣೆಯನ್ನು ಮಹಿಳಾ ಸಂಜೀವಿನಿ ಒಕ್ಕೂಟಕ್ಕೆ ನೀಡುವ ಮೂಲಕ ಮಹಿಳೆ ಯರಿಗೊಂದು ಆದಾಯ ವರಮಾನ ಗೊಳಿಸುವ ಚಿಂತನೆ ಗ್ರಾ.ಪಂ.ನದ್ದಾಗಿದೆ.
ಪ್ರಥಮ ಹಂತದ ಕಾಮಗಾರಿ: ಕೆರೆ ಅಭಿವೃದ್ಧಿಯ ಪ್ರಥಮ ಹಂತವಾಗಿ ಸಣ್ಣ ನೀರಾವರಿ ಇಲಾಖೆಗೆ 1.75 ಕೋ.ರೂ. ವೆಚ್ಚದಲ್ಲಿ ಹೂಳೆತ್ತಲು ಟೆಂಡರ್ ಕರೆಯಲಾಗಿದೆ. ಕೆರೆ ಮೇಲ್ಭಾಗದ ತಡೆಗೋಡೆ ನಿರ್ಮಾಣ ಕಾಮ ಗಾರಿ ಪ್ರಗತಿಯಲ್ಲಿದೆ. ಕೆರೆ ತುಂಬಿದ ಬಳಿಕ ಅಧಿಕ ನೀರು ಹೊರ ಹೋಗಲು ಇನ್ನೊಂದು ಬದಿಯಲ್ಲಿ ರುವ ಕಿಂಡಿಗಳ ದುರಸ್ತಿಯಾಗ ಲಿದೆ. ಕೆರೆಯ ಮೇಲ್ಭಾಗದಲ್ಲಿರುವ ಇನ್ನೊಂದು ಕೆರೆ ಹಾಗೂ ಸುತ್ತ ಇರುವ 2 ಕೆರೆಗಳು ಅಭಿವೃದ್ಧಿಯಾದಲ್ಲಿ ತಾಲೂಕಿನ ಅತ್ಯುತ್ತಮ ಪ್ರವಾಸಿ ತಾಣವಾಗಿ ಕಂಗೊಳಿಸಲಿದೆ.
ಅರಣ್ಯ ಇಲಾಖೆಯಿಂದ ಪವಿತ್ರವನ:
ಅಳಿವಿನಂಚಿನಲ್ಲಿರುವ ಅನೇಕ ಪಾರಂಪರಿಕ ಸಸ್ಯಗಳನ್ನು ಉಳಿಸುವುದು ಹಾಗೂ ಸುಮಾರು 100ಕ್ಕೂ ಅಧಿಕ ಬಗೆಯ ಔಷಧೀಯ ಸಸ್ಯಗಳನ್ನು ಪೋಷಿಸುವ ನೆಲೆಯಲ್ಲಿ ಉದ್ಯಾನವನದಲ್ಲಿ 1 ಎಕ್ರೆಯನ್ನು ಪವಿತ್ರ ವನಕ್ಕಾಗಿ ಮೀಸಲಿರಿಸಲಾಗುತ್ತದೆ. ಇದರ ಸಂಪೂರ್ಣ ನಿರ್ವಹಣೆ ಅರಣ್ಯ ಇಲಾಖೆಗೆ ವಹಿಸಲಾಗಿದೆ.
- ಉಜಿರೆ ಅತ್ತಾಜೆ ಕೆರೆ ವಿಸೀ¤ರ್ಣ 3 ಎಕ್ರೆ
- ಕೆರೆದಂಡೆ ಸುತ್ತಮುತ್ತ ವಿಸ್ತೀರ್ಣ 11 ಎಕ್ರೆ
- ಸಣ್ಣ ನೀರಾವರಿ ಇಲಾಖೆಯಿಂದ 1.75 ಕೋ.ರೂ.
- ಉಜಿರೆ ಗ್ರಾ.ಪಂ., ನರೇಗಾದಿಂದ ನಿಂದ 35 ಲಕ್ಷ ರೂ.
- ಜಿ.ಪಂ. ನಿಂದ 20 ಲಕ್ಷ ರೂ.
- ಒಟ್ಟು 4 ಕೋಟಿ ರೂ. ಅಭಿವೃದ್ಧಿ ಯೋಜನೆ
- 14 ಎಕ್ರೆಯ ನೀಲನಕಾಶೆ ಸಿದ್ಧ
- ಉಜಿರೆ ಪೇಟೆಯಿಂದ 2 ಕಿ.ಮೀ. ದೂರ
1.75 ಕೋ.ರೂ.ಅನುದಾನ: ಬೆಳ್ತಂಗಡಿ ತಾಲೂಕಿಗೆ ಪ್ರವಾಸಿಗರು ಅತೀ ಹೆಚ್ಚು ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಉಜಿರೆಯ ಬೆಳವಣಿಗೆಗೆ ಪೂರಕವಾಗಿ ಅತ್ತಾಜೆ ಕೆರೆಯನ್ನು ಪ್ರವಾಸಿ ತಾಣವಾಗಿಸುವಲ್ಲಿ ಉತ್ತಮ ಯೋಜನೆ ರೂಪುಗೊಳ್ಳುತ್ತಿದೆ. ಇದಕ್ಕಾಗಿ ಸಣ್ಣ ನೀರಾವರಿ ಇಲಾಖೆಯಿಂದ 1.75 ಕೋ. ರೂ. ಅನುದಾನ ಒದಗಿಸಲಾಗಿದೆ. -ಹರೀಶ್ ಪೂಂಜ, ಶಾಸಕರು ಬೆಳ್ತಂಗಡಿ
ಹಂತಹಂತವಾಗಿ ಕಾಮಗಾರಿ ಅತ್ತಾಜೆ ಕೆರೆ ಪರಿಸರವನ್ನು ತಾಲೂಕಿನಲ್ಲಿ ಅಲ್ಲದೆ ರಾಜ್ಯದಲ್ಲೇ ಮಾದರಿ ಉದ್ಯಾನವನವಾಗಿ ಅಭಿವೃದ್ಧಿಪಡಿಸುವ ಇರಾದೆ ಗ್ರಾ.ಪಂ.ನದ್ದಾಗಿದೆ. ಅನುದಾನಗಳ ಆಧಾರದಲ್ಲಿ ಹಂತಹಂತವಾಗಿ ಕಾಮಗಾರಿ ನಡೆಸಲಾಗುವುದು. ಈಗಾಗಲೆ 2.20 ಕೋ.ರೂ. ಅನುದಾನ ಲಭಿಸಿದ್ದು ಒಟ್ಟು 4 ಕೋ.ರೂ.ವೆಚ್ಚದಲ್ಲಿ ಅಭಿವೃದ್ಧಿ ಪಡಿಸುವ ಚಿಂತನೆಯಿದೆ.
-ಪ್ರಕಾಶ್ ಶೆಟ್ಟಿ ನೊಚ್ಚ, ಪಿಡಿಒ, ಉಜಿರೆ ಗ್ರಾ.ಪಂ.
-ಚೈತ್ರೇಶ್ ಇಳಂತಿಲ