Advertisement

ಕಲ್ಲಾಜೆ ಹೊಳೆಗೆ ಸೇತುವೆಯಿಲ್ಲದೆ ಉಜಿರಡ್ಕದವರಿಗೆ ಸಂಕಷ್ಟ

04:25 PM Nov 06, 2017 | Team Udayavani |

ಸುಬ್ರಹ್ಮಣ್ಯ: ಎಲ್ಲ ಊರಿಗೂ ಸಂಪರ್ಕ ರಸ್ತೆ ಇದೆ ಎಂಬ ಕಾರಣಕ್ಕೆ ನಮಗೂ ರಸ್ತೆ ಇದೆ. ಆದರೆ ಅಲ್ಲಿ ತೆರಳುವ ವೇಳೆ ಇರುವ ಅಡ್ಡಿ ಬಗ್ಗೆ ಮಾತ್ರ ಕೇಳಬೇಡಿ. ಉಜಿರಡ್ಕ ನಿವಾಸಿಗಳ ಬಳಿ ಕೇಳಿದರೆ ಅವರು ಹೀಗೆ ಹೇಳ್ಳೋದು.

Advertisement

ಭರವಸೆ ಈಡೇರದ ಬೇಸರದಿಂದ ಉಜಿರಡ್ಕ ನಿವಾಸಿಗಳು ಹೇಳುವ ಮಾತು ಇದು. ತಮ್ಮೂರಿಗೆ ಸಾಗುವ ರಸ್ತೆ ಮಧ್ಯೆ ಹರಿಯುವ ಕಲ್ಲಾಜೆ ಹೊಳೆಗೆ ಸೇತುವೆ ನಿರ್ಮಿಸಿ ಕೊಡುವಂತೆ ಬೇಡಿಕೆ ಇಟ್ಟು ದಶಕಗಳು ಕಳೆದಿವೆ. ಇದುವರೆಗೆ ಅದು ಈಡೇರಿಲ್ಲ. ಎಲ್ಲರ ಭರವಸೆಗಳು ಇಲ್ಲಿ ಹುಸಿಯಾಗಿವೆ. ಇಲ್ಲಿಯವರು ಮಳೆಗಾಲದ ವೇಳೆ ತುಂಬಿದ ಹೊಳೆ ದಾಟಬೇಕು. ಜತೆಗೆ ಸುತ್ತು ಬಳಸಿ ತೆರಳಬೇಕು.

ಸುತ್ತುಬಳಸಿ ತೆರಳಬೇಕು
ಗುತ್ತಿಗಾರು ಗ್ರಾ.ಪಂ. ವ್ಯಾಪ್ತಿಯಲ್ಲಿದೆ ಉಜಿರಡ್ಕ ಪ್ರದೇಶ, ಇಲ್ಲಿ ದಶಕಗಳಿಂದ ಹಲವಾರು ಬಡಕುಟುಂಬಗಳು ವಾಸಿಸು
ತ್ತಿವೆ. ಪರಿಶಿಷ್ಟ ಜಾತಿ ಜತೆ ಇತರೆ ವರ್ಗದ ಕುಟುಂಬಗಳು ಇಲ್ಲಿವೆ. ಕೂಲಿ ಕೆಲಸವೇ ಇವರ ಜೀವನಾಧಾರ. ದಿನನಿತ್ಯದ ವ್ಯಾವಹಾರಿಕ ಚಟುವಟಿಕೆಗಳಿಗೆ ಸಮೀಪದ ಯೇನೆಕಲ್ಲು, ಸುಬ್ರಹ್ಮಣ್ಯಕ್ಕೆ ತೆರಳಲು ಇಲ್ಲಿಯ ನಾಗರಿಕರು 1 ಕಿ.ಮೀ. ಇರುವ ದೂರವನ್ನು 20 ಕಿ.ಮೀ. ಸುತ್ತುಬಳಸಿ ತೆರಳಬೇಕು.

ನರಕ ಯಾತನೆ
ಇಲ್ಲಿಯವರು ರಸ್ತೆ ಅಡ್ಡಲಾಗಿ ಹರಿಯುವ ಕಲ್ಲಾಜೆ ಹೊಳೆ ದಾಟಬೇಕು. ಮಳೆಗಾಲದಲ್ಲಿ  ಈ ಹೊಳೆ ತುಂಬಿ ಹರಿಯುತ್ತದೆ. ಮಹಿಳೆಯರು, ಮಕ್ಕಳು, ವೃದ್ಧರು ಸೇರಿದಂತೆ ನಾಗರಿಕರು ಇಲ್ಲಿ ಸಂಚರಿಸುವ ವೇಳೆ ನರಕ ಯಾತನೆ ಅನುಭವಿಸುತ್ತಾರೆ. ಸ್ಥಳೀಯರು ಸೇರಿಕೊಂಡು ಮಳೆಗಾಲದಲ್ಲಿ ತಮ್ಮ ಅನುಕೂಲಕ್ಕಾಗಿ ತಾತ್ಕಾಲಿಕ ಮರದ ಸೇತುವೆ ನಿರ್ಮಿಸಿಕೊಳ್ಳುತ್ತಾರೆ.

ಇಲ್ಲಿ ಸೇತುವೆ ನಿರ್ಮಾಣ ಆದಲ್ಲಿ ತುಂಬಾ ಅನುಕೂಲ. ಸುತ್ತಿಬಳಸಿ ಸಾಗುವ ಸಂಕಟ ದೂರವಾಗುತ್ತದೆ. ಜತೆಗೆ ಸಮಯ ಉಳಿತಾಯವೂ ಆಗುತ್ತದೆ, ಮಳೆಗಾಲದ ವೇಳೆ ಮಕ್ಕಳು ಶಾಲೆಗೆ ತೆರಳುವ ಸಂದರ್ಭ ತಾತ್ಕಾಲಿಕವಾಗಿ ನಿರ್ಮಿಸಿಕೊಂಡ ಮರದ ತೂಗು ಸೇತುವೆ ಮೇಲೆ ದಾಟುವ ಆತಂಕ ದೂರವಾಗುತ್ತದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯ.

Advertisement

ದೇಗುಲಕ್ಕೂ ಹತ್ತಿರ ದಾರಿ
ಇಲ್ಲಿಗೆ ಹೊಂದಿಕೊಂಡ ಮರಕತ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನವಿದ್ದು, ದೇಗುಲಕ್ಕೆ ಪಂಜ, ಯೇನೆಕಲ್ಲು, ಬಳ್ಪ ಭಾಗದಿಂದ ಬರುವ ಭಕ್ತರಿಗೆ ವರ್ಷ ವಿಡೀ ತುಂಬಿ ಹರಿಯುವ ಕಲ್ಲಾಜೆ ಹೊಳೆ ಅಡ್ಡಿಯಾಗುತ್ತಿದ್ದು, ಸೇತುವೆ ನಿರ್ಮಾಣವಾದರೆ ಅವರಿಗೂ ಅನುಕೂಲವಾಗಲಿದೆ.

ಮರೆತರೆ ಹೇಗೆ?
ಸೇತುವೆ ಇಲ್ಲದೆ ಇಲ್ಲಿಯ ನಿವಾಸಿಗಳು ವಿವಿಧ ಪಕ್ಷಗಳ ಜನಪ್ರತಿನಿಧಿಗಳ ಮುಂದೆ ಅಳಲು ತೋಡಿಕೊಂಡಿದ್ದರು. ಪ್ರತಿ ಚುನಾವಣೆ ವೇಳೆ ಇಲ್ಲಿಗೆ ಭೇಟಿ ನೀಡುವ ಪಕ್ಷದ ಪ್ರಮುಖರು ಭರವಸೆ ವ್ಯಕ್ತಪಡಿಸುತ್ತಿರುತ್ತಾರೆ. ಸೇತುವೆಯಂತೂ ಇಲ್ಲಿ ತನಕ ಆಗಿಲ್ಲ

ಬೇಸರ ತಂದಿದೆ
ಭರವಸೆ ನೀಡಿ ಸೇತುವೆ ನಿರ್ಮಾಣ ಕೈ ಬಿಡುತ್ತಿರುವುದು ಬೇಸರ ತಂದಿದೆ. ಇದರಿಂದ ನಾವು ವಂಚಿತರಾಗಿದ್ದೇವೆ. ನಮಗೆ ಸೇತುವೆ ನಿರ್ಮಿಸಿಕೊಡುವಲ್ಲಿ ಸಹಕರಿಸಿದವರಿಗೆ ನಮ್ಮ ಮತ. ಇಲ್ಲವಾದಲ್ಲಿ ಮುಂದಿನ ಚುನಾವಣೆ ಬಹಿಷ್ಕರಿಸಲು ನಿರ್ಧರಿಸಿದ್ದೇವೆ.
ಸುರೇಶ್‌ ಉಜಿರಡ್ಕ, ಸ್ಥಳೀಯ ನಿವಾಸಿ

ಪ್ರಯತ್ನಿಸುವೆ
ಅಲ್ಲಿ ಸೇತುವೆ ನಿರ್ಮಿಸಲು ಬೃಹತ್‌ ಪ್ರಮಾಣದ ಅನುದಾನ ಅಗತ್ಯವಿದೆ. ಪಂಚಾಯತ್‌ ವತಿಯಿಂದ ಅಷ್ಟು ಹಣ ಒದಗಿಸಲು ಸಾಧ್ಯವಾಗುತ್ತಿಲ್ಲ. ಇತರೆ ಇಲಾಖೆ ಮೂಲಕ ಅನುದಾನ ದೊರೆತಲ್ಲಿ ಸೇತುವೆ ನಿರ್ಮಿಸಬಹುದಷ್ಟೆ. ಶಾಸಕ, ಸಂಸದರ ಗಮನಕ್ಕೆ ತಂದು ಬೇರೆ ಅನುದಾನಕ್ಕೆ ಪ್ರಯತ್ನಿಸುವೆ. 
ಅಚ್ಯುತ ಗುತ್ತಿಗಾರು,
  ಅಧ್ಯಕ್ಷ ಗುತ್ತಿಗಾರು ಗ್ರಾ.ಪಂ.

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next