ಬಳ್ಳಾರಿ: ಶಿವಮೊಗ್ಗ ಸ್ಫೋಟಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಸಿಟ್ಟಿಂಗ್ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು. ತನಿಖೆಗೆ ಯಾವುದೇ ಅಡ್ಡಿ ಆತಂಕಗಳು ನಡೆಯದೇ ಸುಸೂತ್ರವಾಗಿ ನಡೆಯುವ ಸಲುವಾಗಿ ಸಿಎಂ ಯಡಿಯೂರಪ್ಪ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಮಾಜಿ ಸಂಸದ ವಿ.ಎಸ್..ಉಗ್ರಪ್ಪ ಆಗ್ರಹಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಸ್ಫೋಟಕ ವಸ್ತುವುಳ್ಳ ಲಾರಿ ಸ್ಫೋಟಗೊಂಡ ಹಿನ್ನೆಲೆಯಲ್ಲಿ ಐವರು ಮೃತಪಟ್ಟಿದ್ದಾರೆ. ಸಂವಿಧಾನದ 21ರ ಪ್ರಕಾರ ಎಲ್ಲರಿಗೂ ಬದುಕುವ ಹಕ್ಕು ಇದೆ. ಆದರೆ, ಘಟನೆಯಲ್ಲಿ ಐವರು ಮೃತಪಟ್ಟಿದ್ದಾರೆ. ನೂರಾರು ಕಟ್ಟಡಗಳು ಶಿಥಿಲಗೊಂಡಿವೆ. ಆದರೆ, ಈ ಘಟನೆಯ ನೈತಿಕ ಹೊಣೆ ಯಾರು ಹೊರಬೇಕು. ಶಿವಮೊಗ್ಗದಲ್ಲಿ ಗಣಿಗಾರಿಕೆ ಮಾಡುವವರು ಒಂದಲ್ಲ ಒಂದು ರೀತಿಯಲ್ಲಿ ಬಿಜೆಪಿ ಜತೆ ನಂಠು ಹೊಂದಿದವರಾಗಿದ್ದಾರೆ. ಹೀಗಾಗಿ ಘಟನೆಯನ್ನು ಹೈಕೋರ್ಟ್ ಸಿಟ್ಟಿಂಗ್ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು. ಯಾವುದೇ ಅಡ್ಡಿ ಆತಂಕಗಳಿಲ್ಲದೇ ತನಿಖೆ ಸುಸೂತ್ರವಾಗಿ ನಡೆಯುವ ಸಲುವಾಗಿ ಸಿಎಂ ಯಡಿಯೂರಪ್ಪ, ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ:ಕಾಂಗ್ರೇಸ್ ನಲ್ಲಿ ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವೆ ಸಿಎಂ ಸ್ಪರ್ಧೆ : ಈಶ್ವರಪ್ಪ ವ್ಯಂಗ್ಯ
ಸಿಎಂ ಯಡಿಯೂರಪ್ಪ, ಸಚಿವ ಈಶ್ವರಪ್ಪರಿಗೆ ಮನುಷ್ಯತ್ವ ಇದ್ದರೆ ಘಟನೆಯ ನೈತಿಕ ಹೊಣೆ ಹೋರಬೇಕು. ಘಟನೆಯಲ್ಲಿ ಮೃತಪಟ್ಟ ಐವರಿಗೆ ತಲಾ ಐದು ಲಕ್ಷ ಪರಿಹಾರ ಕೊಟ್ಟರೆ ಸಾಲದು. ನೆರೆಯ ಆಂಧ್ರದಿಂದ ಸ್ಫೋಟಕ ವಸ್ತುಗಳನ್ನು ತರುವುದರ ಬಗ್ಗೆ ರಾಜ್ಯ ಗುಪ್ತಚರ ಇಲಾಖೆ ವಿಫಲವಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಹಿರಿಯ ಮುಖಂಡ ಟಪಾಲ್ ಗಣೇಶ್, ಎಲ್.ಮಾರೆಣ್ಣ, ಯುವ ಮುಖಂಡರಾದ ಹನುಮ ಕಿಶೋರ್, ನಾಗರಾಜ್ ಗೌಡ, ಜೆ.ಕೆ.ನಾಯ್ಡು, ತಾಯಪ್ಪ, ಕುಮಾರೆಮ್ಮ ಸೇರಿದಂತೆ ಹಲವರು ಇದ್ದರು.