ಹೊಸದಿಲ್ಲಿ: ಇನ್ನು ಮುಂದೆ ಕಾಲೇಜುಗಳಲ್ಲಿ ಮತ್ತು ವಿವಿಗಳಲ್ಲಿ ಆಪ್ತ ಸಮಾಲೋಚಕರ ನೇಮಕ ಕಡ್ಡಾಯವಾಗಲಿದೆ.
ಶೈಕ್ಷಣಿಕ ವಿಚಾರಗಳು, ಸ್ನೇಹಿತರಿಂದ ಉಂಟಾಗುವ ಒತ್ತಡಗಳು ಸೇರಿದಂತೆ ಹಲವು ಮಾನಸಿಕ ಒತ್ತಡಗಳು ವಿದ್ಯಾರ್ಥಿಗಳಿಗೆ ಉಂಟಾಗುವುದರಿಂದ ಅವುಗಳ ಪರಿಹಾರಕ್ಕೆ ಯುಜಿಸಿ ಈ ಹೆಜ್ಜೆಯನ್ನು ಇರಿಸಿದೆ. ಅದಕ್ಕೆ ಸಂಬಂಧಿಸಿದಂತೆ ಯುಜಿಸಿ ಬುಧವಾರ ಕರಡು ನಿಯಮಗಳನ್ನು ಬಿಡುಗಡೆ ಮಾಡಿದೆ.
ಅದರ ಪ್ರಕಾರ ಇನ್ನು ಮುಂದೆ ವಿವಿಗಳು, ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಉಂಟಾಗುವ ದುಗುಡ ಮತ್ತು ಒತ್ತಡಗಳನ್ನು ನಿವಾರಿಸುವ ನಿಟ್ಟಿನಲ್ಲಿ ಪ್ರತ್ಯೇಕ ಸೆಲ್‌ಗಳನ್ನು ಕಡ್ಡಾಯವಾಗಿ ಸ್ಥಾಪಿಸಬೇಕಾಗುತ್ತದೆ. ಇಂಥ ಕ್ರಮಗಳ ಮೂಲಕ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಅರ್ಧಕ್ಕೇ ಶಿಕ್ಷಣಕ್ಕೆ ವಿದಾಯ ಹೇಳುವವರ ಸಂಖ್ಯೆಯನ್ನು ಕಡಿಮೆಗೊಳಿಸುವ ಪ್ರಯತ್ನವ ಮಾಡಲು ಮುಂದಾಗಿದೆ.
ವಿದ್ಯಾರ್ಥಿಗಳಲ್ಲಿ ಧನಾತ್ಮಕ ನಿಲುವು ತರಲು, ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಯುಜಿಸಿ ಅಧ್ಯಕ್ಷ ಪ್ರೊ.ಎಂ.ಜಗದೀಶ್ ಕುಮಾರ್ ಹೇಳಿದ್ದಾರೆ.