Advertisement
ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ
ಭೃಂಗದ ಸಂಗೀತ ಕೇಳಿ
ಮತ್ತೆ ಕೇಳ ಬರುತಿದೆ
ಬೇವಿನ ಕಹಿ ಬಾಳಿನಲ್ಲಿ
ಹೂವಿನ ನಸುಗಂಪು ಸೂಸಿ
ಜೀವಕಳೆಯ ತರುತಿದೆ ವರುಷಕೊಂದು ಹೊಸತು ಜನ್ಮ
ಹರುಷಕೊಂದು ಹೊಸತು ನೆಲೆಯು
ಅಖೀಲ ಜೀವ ಜಾತಕೆ
ಒಂದೆ ಒಂದು ಜನ್ಮದಲ್ಲಿ
ಒಂದೆ ಬಾಲ್ಯ ಒಂದೆ ಹರೆಯ
ನಮಗದಷ್ಟೆ ಏತಕೆ..
Related Articles
ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ
Advertisement
- ಅಂಬಿಕಾತನಯದತ್ತ
ಯುಗಾದಿಯಂದು ಮುಂಜಾನೆ ಆಕಾಶವಾಣಿಯ ಎಲ್ಲಾ ಸ್ಟೇಷನ್‌ಗಳಿಂದಲೂ ಕೇಳಿ ಬರುತ್ತಿದ್ದುದು ಕುಲವಧು ಚಿತ್ರಕ್ಕೆ ಬಳಕೆಯಾದ ಬೇಂದ್ರೆಯವರ “ಯುಗಯುಗಾದಿ ಕಳೆದರೂ…’ ಗೀತೆ. ರೇಡಿಯೋದಲ್ಲಿ ಕೇಳಿಸುತ್ತಿದ್ದಷ್ಟು ಗೀತೆಯ ಸಾಹಿತ್ಯವಷ್ಟೇ ಇಲ್ಲಿದೆ.
ಕಾಪ್ಪಡ ವಾಡಪ ಆಚರಣೆಯುಗಾದಿ ಅಂದರೆ ಸಂವತ್ಸರದ ಮೊದಲ ದಿನ. ವರ್ಷದ ಪ್ರಾರಂಭ. ವಸಂತ ಋತುವಿನೊಂದಿಗೆ ಆರಂಭವಾಗುವ ಹೊಸ ವರ್ಷವನ್ನು ಹರ್ಷದಿಂದ ಬರಮಾಡಿಕೊಳ್ಳುವ ಹಬ್ಬ.
ಮನೆಯನ್ನು ಶುಭ್ರಗೊಳಿಸಿ, ಮುಂಬಾಗಿಲನ್ನು ತಳಿರು ತೋರಣ ಮತ್ತು ರಂಗೋಲಿಯಿಂದ ಶೃಂಗರಿಸುವುದು ಎಲ್ಲೆಡೆ ಇರುವ ಪದ್ಧತಿ. ದೇವರಿಗೆ ವಿಶೇಷ ಅಲಂಕಾರ, ವಿವಿಧ ಭಕ್ಷ್ಯಗಳ ನೈವೇದ್ಯ, ಹೊಸ ಪಂಚಾಂಗವನ್ನು ಇಟ್ಟು ಭಜನೆ, ಪೂಜೆ ಇದ್ದೇ ಇರುತ್ತದೆ. ಕೊಂಕಣಿ ಸಮುದಾಯದವರು, ಅಂದು ವಿಶೇಷವಾಗಿ “ಕಾಪ್ಪಡ ವಾಡಪ’ ಎನ್ನುವ ಸಂಪ್ರದಾಯ ಆಚರಿಸುತ್ತಾರೆ. ಅಂದರೆ ಮನೆಮಂದಿಗೆ ತಂದ ಹೊಸ ಬಟ್ಟೆಗಳನ್ನು (ಸೀರೆ, ಧೋತಿ ಮತ್ತು ಶಲ್ಯ ಕಡ್ಡಾಯ) ಮಣೆಯ ಮೇಲಿಟ್ಟು, ದೀಪ ಬೆಳಗಿಸಿ ದೈವಾಧೀನರಾದ ಕುಟುಂಬದ ಹಿರಿಯರನ್ನು ಭಕ್ತಿಯಿಂದ ಸ್ಮರಿಸುತ್ತಾರೆ. ನಂತರ, ಅಡುಗೆಯನ್ನು ಒಂದು ಎಲೆಯಲ್ಲಿ ಬಡಿಸಿ ಹಿರಿಯರಿಗೆ ಅರ್ಪಿಸಿ, ಆರತಿ ಬೆಳಗಿ ಅವರಿಂದ ಆಶೀರ್ವಾದ ಪಡೆದು ಹೊಸ ವರ್ಷಕ್ಕೆ ಸಜ್ಜಾಗುವುದು ಸಂಪ್ರದಾಯ. ಜೀವನದಲ್ಲಿ ಬರುವ ಸುಖ,ದುಃಖಗಳನ್ನು ಸಮಚಿತ್ತರಾಗಿ ಸ್ಪೀಕರಿಸುವ ಸಂಕೇತವಾಗಿ ಬೇವು-ಬೆಲ್ಲ ತಿನ್ನುತ್ತೇವೆ. ನಂತರ, ಹಬ್ಬದ ಪ್ರಯುಕ್ತ ಕೊಂಕಣಿ ವಿಶೇಷ ಖಾದ್ಯಗಳಾದ ಎಳೆ ಗೇರುಬೀಜದ ಪಲ್ಯ, ಕೊಟ್ಟೆ ಕಡುಬು, ಕಡಲೆ ಗಷಿ, ದಾಳಿ ತೊವ್ವೆ, ಗಜಬಜೆ, ವಿವಿಧ ತರಕಾರಿಗಳ ಪೋಡಿ, ಅಂಬ್ಯಾ ಉಪRರಿ (ಮಾವಿನ ಹಣ್ಣಿನ ಪಲ್ಯ), ಮಡ್ಗಣೆ (ಕಡಲೇ ಬೇಳೆ ಪಾಯಸ) ರಸ ವಡೆ ಮತ್ತು ಪಾನಕವನ್ನು ದೇವರಿಗೆ ನೈವೇದ್ಯ ಮಾಡಿ ಮನೆಯವರೆಲ್ಲ ಔತಣ ಮಾಡುತ್ತೇವೆ. ಕುಟುಂಬದಲ್ಲಿ ನವ ದಂಪತಿಗಳಿದ್ದರೆ ಮೊದಲ ಯುಗಾದಿಗೆ ವಧುವಿನ ತವರು ಮನೆಯಲ್ಲಿ, ಅಳಿಯ ಮಗಳಿಗೆ ಮುತ್ತೈದೆಯರಿಂದ ಆರತಿ ಬೆಳಗಿಸಿ, ಉಡುಗೊರೆಗಳನ್ನು ಕೊಟ್ಟು ನವ ಜೀವನಕ್ಕೆ ಶುಭ ಹಾರೈಸುತ್ತೇವೆ.
-ಸುಮನ ಪೈ, ಬೆಂಗಳೂರು
ಅಮೆರಿಕನ್ನಡಿಗರ ಯುಗಾದಿ!
ಅಮೆರಿಕದಲ್ಲಿ ವಸಂತನ ಆಗಮನಕ್ಕೆ ಹೆಚ್ಚಿನ ಮಹತ್ವವಿದೆ. ಯಾಕೆಂದರೆ, ಸೆಪ್ಟೆಂಬರ್ ಕೊನೆಯಿಂದಲೇ ಸಣ್ಣಗೆ ಶುರುವಾಗುವ ಚಳಿಗೆ, ನವೆಂಬರ್ ಹೊತ್ತಿಗೆ ಹಿಮಪಾತವು ಸೇರಿಕೊಂಡು ಬೆನ್ನು ಹುರಿಯಲ್ಲಿ ಥಂಡಿ ಸ್ಥಾಯಿಯಾಗಿ ನಿಲ್ಲುತ್ತದೆ. ಹಗಲು ಕಡಿಮೆಯಾಗಿ ಸಂಜೆ ನಾಲ್ಕಕ್ಕೆಲ್ಲಾ ಕವಿದುಕೊಳ್ಳುವ ಕತ್ತಲೆ ಮೈ ಮನಸ್ಸುಗಳ ಲವಲವಿಕೆಯನ್ನೇ ಕಸಿದುಕೊಳ್ಳುತ್ತದೆ. ಅಕಾರಣ ಖನ್ನತೆಯೊಂದು ಚಿತ್ತವನ್ನು ಆವರಿಸಿಕೊಳ್ಳುತ್ತಿರುವಾಗಲೇ, ಚಳಿಯನ್ನು ಕೊಂದು ಬರುವ ವಸಂತ ಋತು, ಹೊಸ ಭರವಸೆಯನ್ನೇ ಹೆಗಲ ಮೇಲೆ ಹೊತ್ತು ತರುತ್ತಿರುವಂತೆ ಭಾಸವಾಗುತ್ತದೆ. ಸಂವತ್ಸರದ ಮೊದಲ ಹಬ್ಬವಾದ “ಯುಗಾದಿ’ಯೊಂದಿಗೆ ನಮ್ಮ ಹೊಸ ವರ್ಷವೂ ಪ್ರಾರಂಭವಾಗುವುದರಿಂದ, ಅಮೆರಿಕನ್ನಡಿಗರ ಮನೆಗಳಲ್ಲಿ ಸಂಭ್ರಮ ಮನೆ ಮಾಡಿರುತ್ತದೆ. ಭಾರತೀಯರ ದಿನಸಿ ಅಂಗಡಿಗಳಲ್ಲಿ ಈಗ ಮಾವು-ಬೇವಿನ ಎಲೆಗಳಿಂದ ಹಿಡಿದು ಸಿಹಿ ತಿನಿಸುಗಳವರೆಗೆ ಸಮಸ್ತವೂ ಸಿಗುತ್ತದೆ. ಸಮಸ್ಯೆಯೆಂದರೆ, ನಮ್ಮ ಹಬ್ಬಗಳಿಗೆ ಇಲ್ಲಿ ರಜೆ ಇರುವುದಿಲ್ಲ. ವಾರದ ನಡುವೆ ಹಬ್ಬದ ದಿನ ಬಂದಲ್ಲಿ ಹೆಚ್ಚಿನ ಸಡಗರಕ್ಕೆ ಸಮಯವಾಗದು. ಅಂದು ಎಂದಿಗಿಂತ ಮುಂಚಿತವಾಗಿ ಎದ್ದು ದೇವರ ಪೂಜೆ ಮುಗಿಸಿ, ನಿತ್ಯದ ಊಟದ ಜೊತೆಗೊಂದು ಸಿಹಿ ತಿಂಡಿ ಇದ್ದರೆ ಅದೇ ಹೆಚ್ಚು. ಹಬ್ಬದ ಆಚರಣೆಗೆ ರಂಗೇರಲು ಅನಿವಾಸಿಗಳು ವಾರಾಂತ್ಯಕ್ಕೆ ಕಾಯುವುದು ಅನಿವಾರ್ಯ. ಆ ದಿನ ಪ್ರತಿ ಮನೆಗಳಲ್ಲಿಯೂ ಇಷ್ಟ ಮಿತ್ರರೊಂದಿಗೆ ಹಬ್ಬದ ಆಚರಣೆ. ಯುಗಾದಿಯ ವಿಶೇಷವಾದ ಒಬ್ಬಟ್ಟು ಮತ್ತಿತರ ಸಿಹಿ, ಖಾರ ತಿನಿಸುಗಳ ಭೂರಿ ಭೋಜನ. ಈಗ ಒಬ್ಬಟ್ಟು ತಯಾರಿಸಲು ಕಲಿತಿರಬೇಕೆಂದಿಲ್ಲ. ಮೊದಲೇ ಆರ್ಡರ್ ಮಾಡಿದ್ದರೆ, ಬೆಂಗಳೂರಿನ “ಹೋಳಿಗೆ ಮನೆ’ಯಲ್ಲಿ ಸಿದ್ಧಪಡಿಸಿದ ಥರಾವರಿ ಒಬ್ಬಟ್ಟುಗಳು ಹಬ್ಬದ ಹೊತ್ತಿಗೆ “ಗರುಡ ವೇಗ’ ಕೊರಿಯರ್ ಮೂಲಕ ಕೈಗೆ ತಲುಪಿ, ಹಬ್ಬದೂಟದ ರುಚಿ ಹೆಚ್ಚಿಸುತ್ತವೆ. ಅಮೆರಿಕದ ಕನ್ನಡ ಕೂಟಗಳು ವರ್ಷದ ಮೊದಲ ಕಾರ್ಯಕ್ರಮವಾಗಿ “ಯುಗಾದಿ’ ಹಬ್ಬ ಆಚರಿಸುವುದು ಸಂಪ್ರದಾಯವೇ ಆಗಿ ಹೋಗಿದೆ. ಆ ಸಮಯದಲ್ಲಿ ಕನ್ನಡಿಗರೆಲ್ಲರೂ ಒಟ್ಟಾಗಿ ಕಲೆತು ಸಿಹಿಯೂಟ ಮಾಡಿ ಹೊಸ ಸಂವತ್ಸರವನ್ನು ಸ್ವಾಗತಿಸುತ್ತಾರೆ. ಆದರೆ, ಈ ಬಾರಿ ಯುಗಾದಿಯ ಮೇಲೂ ಕೊರೊನದ ಕರಿ ನೆರಳು ಬಿದ್ದಿದೆ. ಕನ್ನಡ ಕೂಟಗಳು ಸಾಮೂಹಿಕವಾಗಿ ಆಚರಿಸುವ ಯುಗಾದಿ ಹಬ್ಬವನ್ನು ರದ್ದುಪಡಿಸಿವೆ. ಹೊಸ ಬಟ್ಟೆ ಧರಿಸಿ, ದೇವಸ್ಥಾನಗಳಿಗೆ ತೆರಳಿ ಪ್ರಾರ್ಥನೆ, ಪೂಜೆ ಸಲ್ಲಿಸೋಣವೆಂದರೆ, ದೇಗುಲಗಳೂ ಭಕ್ತರ ಆಗಮನಕ್ಕೆ ತಡೆಯೊಡ್ಡಿವೆ. ಯುಗಾದಿ ಪ್ರಯುಕ್ತ ನಡೆಯಲಿದ್ದ ಸಂಗೀತ ಕಾರ್ಯಕ್ರಮಗಳೂ ಕೂಡ ಮುಂದೆ ಹೋಗಿವೆ. ಹೀಗಿದ್ದರೂ ಹಬ್ಬಗಳ ರಾಜ “ಯುಗಾದಿ’ಯನ್ನು ಆಚರಿಸದೆ ಇರುವಂತಿಲ್ಲ. ಹೆಚ್ಚಿನ ಗೌಜುಗದ್ದಲವಿಲ್ಲದಿದ್ದರೂ ಸರಳವಾಗಿ ಸಿಹಿಯೂಟದೊಂದಿಗೆ ಹೊಸ ಸಂವತ್ಸರವನ್ನು ಬರಮಾಡಿಕೊಳ್ಳುತ್ತಿದ್ದಾರೆ ಅಮೆರಿಕನ್ನಡಿಗರು.
-ತ್ರಿವೇಣಿ ಶ್ರೀನಿವಾಸರಾವ್, ಶಿಕಾಗೊ
ಪಂಚಾಂಗ ಶ್ರವಣ, ಬಿಸಿ ನೀರ ಅಭ್ಯಂಜನ
ಎಲ್ಲ ಕಡೆಗಳಂತೆಯೇ, ನಮ್ಮ ಮಲೆನಾಡಿನಲ್ಲಿಯೂ ಯುಗಾದಿ ಅಂದ್ರೆ, ಹೊಸ ಹಬ್ಬದ, ಹೊಸ ವರ್ಷದ ಸಂಭ್ರಮ. ಕಲಿಯುಗ ಶುರುವಾದದ್ದು ಯುಗಾದಿಯಂದು ಮತ್ತು ಬ್ರಹ್ಮ ಜಗತ್ತನ್ನು ಸೃಷ್ಟಿಸಿದ್ದು ಕೂಡಾ ಇದೇ ದಿನದಂದು ಎಂಬ ನಂಬಿಕೆ ನಮ್ಮಲ್ಲಿದೆ. ಒಟ್ಟು ಅರವತ್ತು ಸಂವತ್ಸರಗಳಿದ್ದು ಅಷ್ಟೂ ಸಂವತ್ಸರಗಳ ಯುಗಾದಿಯನ್ನು ನೋಡಿದವರು ಪೂರ್ಣ ಜೀವನ ನಡೆಸಿದಂತೆ ಎಂಬ ವಾಡಿಕೆಯ ಮಾತುಗಳಿವೆ. ಯುಗಾದಿಯ ದಿನದ ಪಂಚಾಂಗ ಶ್ರವಣದ ಬಗ್ಗೆ ಬಾಲ್ಯದಿಂದಲೂ ನನಗೆ ಕುತೂಹಲ. ಹೊಸ ಸಂವತ್ಸರದಲ್ಲಿ ಯಾವ ಗ್ರಹ ಯಾವ ವಿಷಯದ ಅಧಿಪತ್ಯ ವಹಿಸಿ¨ªಾನೆ, ಯಾವ ಗ್ರಹಕ್ಕೆ ಈ ಸಂವತ್ಸರದಲ್ಲಿ ರಾಜನ ಸ್ಥಾನ, ಯಾವುದಕ್ಕೆ ಮಂತ್ರಿಯ ಸ್ಥಾನ, ಯಾರು ಮಳೆಯನ್ನು ನಿಯಂತ್ರಿಸುತ್ತಿದ್ದಾರೆ ಅಂತೆಲ್ಲಾ ಪಂಚಾಂಗ ಕೇಳಿ ತಿಳಿದುಕೊಳ್ಳುತ್ತಿದ್ದೆ. ಆ ದಿನ ಮಾವಿನ ತೋರಣವನ್ನು ಮನೆಯ ಮುಂಬಾಗಿಲಿಗೋ ಅಥವಾ ದೇವರ ಮನೆಯ ಬಾಗಿಲಿಗೋ ನೇತು ಬಿಟ್ಟಾಗ ಮನೆಯೆಲ್ಲಾ ತುಂಬುವ ಮಾವಿನ ಸುಗಂಧದಲ್ಲಿ ಮಿಂದೇಳುವುದೇ ಒಂದು ಸೊಗಸಾದ ಅನುಭವ. ತೋರಣದ ಮೇಲೊಂದು ಹೂವಿನ ಹಾರ ಹಾಕಿದರಂತೂ, ಮನೆಯ ಕಳೆಯೇ ಬದಲಾಗುತ್ತದೆ. ಇನ್ನು ಅಜ್ಜಿ ಹಚ್ಚುವ ಹರಳೆಣ್ಣೆಗೆ ಮೈಯೊಡ್ಡಿ ನಂತರ ಹಂಡೆಯ ಬಿಸಿ ನೀರಿನಲ್ಲಿ ಶೀಗೆ ಕಾಯಿ ಹಾಕಿ ಅಭ್ಯಂಜನ ಮಾಡುವುದು ಯುಗಾದಿಯ ಪರಮ ಸುಖಗಳಲ್ಲೊಂದು. ಮರುದಿನ ಕಾಣುವ ಬಿದಿಗೆ ಚಂದ್ರನಿಗೆ ವಿಶೇಷ ಸ್ಥಾನ. ಈ ಸಂವತ್ಸರದ ಮೊದಲ ಚಂದ್ರನನ್ನು ನೋಡಿ, ಆತ ಕಾಣಿಸಿದ ಆಕಾರದ ಮೇಲೆ ಸಂವತ್ಸರದ ಶುಭ- ಅಶುಭಗಳ ಫಲ ಅಳೆಯುತ್ತಾರೆ ಹಿರಿಯರು. ಪ್ರಕೃತಿಯು ಹಳೆಯದನ್ನೆಲ್ಲ ಅಳಿಸಿ ಹೊಸ ಚಿಗುರು ಪಡೆದು ಸಂಭ್ರಮಿಸುವ ಕಾಲದಲ್ಲಿ, ನಾವು ಕೂಡಾ ಹಳೆ ಕಹಿಗಳನ್ನು ಮರೆತು ಹೊಸ ವರ್ಷವನ್ನು ಸ್ವಾಗತಿಸುವ ಈ ಯುಗಾದಿ, ಆಚರಣೆಯಾಗಿ ಮಾತ್ರವಲ್ಲದೆ, ಭಾವನಾತ್ಮಕವಾಗಿಯೂ ನಮ್ಮನ್ನು ಪ್ರಕೃತಿಯ ಸತ್ಯಗಳೊಂದಿಗೆ ಬೆಸೆಯುತ್ತದೆ.
ಮಂದಾರ ಭಟ್, ಶೃಂಗೇರಿ ಬೇಳೆ ಹೋಳಿಗೆ, ಶ್ಯಾವಿಗೆ ಪಾಯಸ
“ಅಯ್ಯ ಯುಗಾದಿ ಇನ್ನೇನ ಎರಡು ದಿನಾ ,ದನಾ ಎಲ್ಲಾ ಒಯ್ದು ಹಿತ್ತಲದ್ದಾಗ ಕಟ್ರೀ, ಅಂಗಳಾ ಚಂದಾಗಿ ಶಗಣೀಲೇ ಸಾರಸ್ಬೇಕಾರ, ಗ್ವಾದ್ಲಿನೂ ಸಾರ್ಶೇಬಿಡೋಣು. ಹಂಗ ಎರಡವಾಟಗಾ ಹೊಸಾ ಗೋದಿ ರವಾ ಬೀಸಿದ್ದದ. ಝರಡೀ ಹಿಡದ ಪಿಟೆಧಿಟ್ಟು ಮಡೀಲೆ ಕಲಿಸಿಡ್ಲಿಕ್ಕೆ ಹೇಳ್ತೇನಿ ಗಿರಿಜಾಗ (ನಮ್ಮ ಅಮ್ಮ). ಮೈ ತೊಕ್ಕೊಂಡು ಮಡೀಲೆ ಶ್ಯಾವಿಗಿ ಮಾಡಿಟ್ಟ ಬಿಡ್ತೇನಿ. ನಾ ಇರೋತನಕ ಹಬ್ಬಕ್ಕ ಹೊಸಾ ಶ್ಯಾವಿಗಿ ಪಾಯ್ಸನ ಆಗ್ಲಿ ಮಕ್ಳು ಮಮ್ಮಕ್ಳಿಗೆ…’ ಎಂದು ಯುಗಾದಿಗೆ ಒಂದುವಾರ ಇರುವಾಗಲೇ, ಇಳಿ ವಯಸ್ಸಿನಲ್ಲೂ ಸದಾ ಉತ್ಸಾಹಿಯಾಗಿದ್ದ ನನ್ನ ಅಜ್ಜಿಯ ನೆನಪು ಸದಾ ತಾಜಾ ಮತ್ತು ಪ್ರೋತ್ಸಾಹಕರ. ಉತ್ತರ ಕರ್ನಾಟಕದ ಯುಗಾದಿಯು ತನ್ನದೇ ಆದ ವಿಶಿಷ್ಟತೆಯನ್ನು ಇಂದಿಗೂ ಉಳಿಸಿಕೊಂಡಿದೆ. ಹಬ್ಬ ಎಂಟತ್ತು ದಿನಗಳಿರುವಾಗಲೇ ಹೊಸದಾಗಿ ಬೆಳೆದ ಗೋದಿಯನ್ನು ಮನೆಯಲ್ಲೇ ಬೀಸಿ ರವಾ ಮತ್ತು ಪಿಠೆ ಎಂದು ಕರೆಯುವ ಅತೀ ಜಿನುಗಾದ ಹಿಟ್ಟಿನಿಂದ ಮಾಡುವ ಕೈಶ್ಯಾವಿಗೆ, ಗೌಲಿ, ಸೌತಿಬೀಜಗಳನ್ನು ಮಾಡಿ ಒಣಗಿಸಿರುತ್ತಾರೆ.ಯುಗಾದಿ ಹಬ್ಬದ ದಿನ ಅದರದೇ ಪಾಯಸ ಮಾಡಿ, ಅದರೊಂದಿಗೆ ಬೇಳೆ ಹೋಳಿಗೆಯನ್ನು ಇಟ್ಟು ದೇವರಿಗೆ ನೈವೇದ್ಯ ಮಾಡುವುದು ಸಂಪ್ರದಾಯ. ಹಳ್ಳಿ ಮನೆಗಳಲ್ಲಿ ಇಂದಿಗೂ ಆಕಳ ಸಗಣಿಯಿಂದ ಅಂಗಳ ಹಿತ್ತಲೂ ಸಾರಿಸಿ ಮಡಿ ಮಾಡುತ್ತಾರೆ. ಮನೆಯ ಹಿರಿಯರು ಎಲ್ಲರಿಗೂ ಎಣ್ಣೆ ಸ್ನಾನ ಮಾಡಿಸಿ ವಿಶೇಷವಾಗಿ ಬೇವಿನ ಎಲೆಗಳನ್ನು ಬಿಸಿ ನೀರಿನಲ್ಲಿ ಹಾಕಿ ಮಾಡಿಸುವರು. ಚರ್ಮರೋಗ ಬಾರದಿರಲೆಂಬುದು ಅದರ ಉದ್ದೇಶ. ಬೇವು-ಬೆಲ್ಲ, ಹುಣಸೆ ಮೊದಲಾದವುಗಳನ್ನು ದೇವರಿಗೆ ಅರ್ಪಿಸಿ ಸೇವಿಸುತ್ತಾರೆ. ಕಹಿ ಸಿಹಿಗಳ ಮೊದಲಾದ ಷಡ್ರುಚಿಗಳು ಸಂಸಾರದ ಸುಖ-ದುಃಖಗಳಿಗೆ ಸ್ಫೂರ್ತಿ. ಹೊಸ ಸಂವತ್ಸರದ ಪಂಚಾಂಗದ ಪೂಜೆ ಮಾಡಿ ಎಲ್ಲರ ಸಮ್ಮುಖದಲ್ಲಿ ಮನೆಯ ಹಿರಿಯರು ಪಠಣ ಮಾಡುವರು. ಹೆಣ್ಣು ಮಕ್ಕಳು ಸಂಜೆಯ ವೇಳೆ ಸಾಂಪ್ರದಾಯಕ ಸೀರೆ ಧರಿಸಿ ದೇವಸ್ಥಾನಗಳಿಗೆ ಹೋಗುವುದು , ಗುರು ಹಿರಿಯರಿಗೆ ನಮಸ್ಕರಿಸಿ ಹಬ್ಬದ ಶುಭಾಶಯಗಳನ್ನು ಹೇಳುವುದು ಇಂದಿಗೂ ಸರ್ವೇ ಸಾಮಾನ್ಯ.
-ಪ್ರಿಯಾ ದೀಕ್ಷಿತ್, ಹುಬ್ಬಳ್ಳಿ ಬೇವು ಕೇಳಿದರೆ ಬೆಲ್ಲ ಫ್ರೀ
ಆಲೂರು, ಸಕಲೇಶಪುರ ಭಾಗದವರಿಗೆ ಯುಗಾದಿ ಕಾಲಕ್ಕೆ ಕರಿಮೆಣಸು ಮತ್ತು ಕಾಫಿಯ ಕೊಯ್ಲು ಮುಗಿದು ತುಸು ಸುಧಾರಿಸಿಕೊಂಡರೂ ಮನೆ ತುಂಬಾ ಮೂಡಲ ಗಾಳಿ ಬೀಸಿದ ಕುರುಹಾಗಿ ಧೂಳ್ಳೋ ಧೂಳು.. ಮನೆಯನ್ನು ಶುಚಿಗೊಳಿಸುವುದೇ ಹಬ್ಬದ ಮೊದಲ ಕೆಲಸ. ಮೂರು ತಾಸಾದರೂ ನೆನೆಯುವಂತೆ ಎಣ್ಣೆ, ಬಿಸಿನೀರಿನೊಂದಿಗೆ ಕಣಕ ಕಲೆಸಿಟ್ಟು, ಬೆಂದ ಬೇಳೆಯನ್ನು ಗಸಗಸೆ, ತುಸು ತೆಂಗಿನತುರಿ, ಬೆಲ್ಲದೊಂದಿಗೆ ನುಣ್ಣಗೆ ರುಬ್ಬಿಕೊಂಡರೆ ಹೂರಣ ತಯಾರು. ಕಣಕದೊಳಗೆ ಹೂರಣ ತುಂಬಿ ಬಾಳೆಲೆಯ ಮೇಲೆ ತಟ್ಟಿ ಕಾವಲಿಯಲ್ಲಿ ತುಪ್ಪದೊಂದಿಗೆ ಬೇಯುವ ಒಬ್ಬಟ್ಟು ಊರಿಗೆ ಊರನ್ನೇ ಹೋಳಿಗೆ ಪರಿಮಳದಲ್ಲಿ ಅದ್ದಿ ತೆಗೆಯುತ್ತದೆ. ಯುಗಾದಿಯ ದಿನ ಬೆಳಗಿಗೂ ಮೊದಲೇ ಹೊಸಿಲು ತೊಳೆದು ಚಂದದ ರಂಗೋಲಿ ಹಾಕಿ ಬಾಗಿಲಿಗೆ ಮಾವಿನಸೊಪ್ಪು, ಬೇವಿನೆಲೆಯ ಗೊಂಚಲುಗಳನ್ನು ಸೇರಿಸಿ ತೋರಣ ಕಟ್ಟುವುದು ರೂಢಿ. ಯಾರ ಮನೆಯವರು ಬೇವಿನ ಸೊಪ್ಪು ಕೇಳುತ್ತಾರೋ ಅವರಿಗೆ ಎರಡಚ್ಚು ಬೆಲ್ಲ ಹೆಚ್ಚಿಗೆ ಇಟ್ಟು ತಲುಪಿಸುವುದು ನಮ್ಮಲ್ಲಿಯ ಪದ್ಧತಿ. ಅಂದರೆ, ನಿಮ್ಮ ಬಾಳಿನಲ್ಲಿ ಬೆಲ್ಲದಂಥ ನಲಿವೇ ಹೆಚ್ಚಿರಲಿ ಎನ್ನುವ ಆಶಯ. ಹರಳೆಣ್ಣೆ, ಕೊಬ್ಬರಿ ಎಣ್ಣೆ , ತುಪ್ಪ, ಎಳ್ಳೆಣ್ಣೆ ಮತ್ತು ಅರಿಶಿಣವನ್ನು ಬೆರೆಸಿ ಹದ ಬೆಚ್ಚಗೆ ಮಾಡಿ ಅಂಗಳದಲ್ಲಿ ಎಲ್ಲರೂ ಕುಳಿತು ಮೈಗೆ ಹಚ್ಚಿಕೊಂಡು ಸ್ವಲ್ಪ ಹೊತ್ತು ಬಿಸಿಲು ಕಾಯಿಸಿ, ಆಮೇಲೆ ಕಡ್ಲೆಹಿಟ್ಟನ್ನು ಹಚ್ಚಿ ಬಿಸಿ ನೀರಿನಲ್ಲಿ ಅಭ್ಯಂಜನ ಮಾಡಿ ಹೊಸಬಟ್ಟೆ ಧರಿಸಿ ಅಲಂಕರಿಸಿಕೊಳ್ಳುವುದು ಯುಗಾದಿಯ ವೈಶಿಷ್ಟ್ಯ. ಬೇವಿನ ಚಿಗುರು,ಬೆಲ್ಲ,ಕೊಬ್ಬರಿ,ಹುರಿಗಡಲೆಯನ್ನು ಸಮವಾಗಿ ಬೆರೆಸಿ ಪುಡಿ ಮಾಡಿ ಮೊದಲು ದೇವರಿಗೆ ಬೇವು ಬೆಲ್ಲ ನೈವೇದ್ಯ ಮಾಡಿ ಸ್ನಾನದ ನಂತರ ಸೇವಿಸುವುದು ಪದ್ಧತಿ. ಹೋಳಿಗೆ ಪಾಯಸದ ಅಡುಗೆಯನ್ನು. ಮನೆ ದೇವರಿಗೆ, ದೇವಸ್ಥಾನಕ್ಕೆ ಎಡೆ ಮಾಡಿದ ಮೇಲೆ ಭೋಜನ. ಮದ್ಯಾಹ್ನದ ವೇಳೆಗೆ ಚೆಂಡಾಟ ಆಡುವುದೂ ಇದೆ. ಸಂಜೆ ವೇಳೆಗೆ ಊರಿನ ಎತ್ತರದ ಜಾಗಗಳಿಗೆ ಯುಗಾದಿ ಚಂದ್ರದರ್ಶನಕ್ಕೆ ಹೊರಡುವುದು.. ಅಲ್ಲಿ ಕಂಡನಾ, ಇಲ್ಲಿ ಕಂಡನಾ…. ಓ ಇÇÉೆಯಾ ಎನ್ನುತ್ತಾ ತೆಳುಗೆರೆಯಂತೆ ಕಂಡ ಚಂದ್ರನಿಗೆ ಭಕ್ತಿಯಿಂದ ನಮಿಸಿ ಮನೆಗೆ ಬರುವುದರೊಂದಿಗೆ ಯುಗಾದಿ ಮುಗಿಯುತ್ತದೆ.
-ನಂದಿನಿ ವಿಶ್ವನಾಥ ಹೆದ್ದುರ್ಗ, ಸಕಲೇಶಪುರ ಮಂಡ್ಯ, ಮೈಸೂರು, ತುಮಕೂರು, ಚಿತ್ರದುರ್ಗ, ಕೋಲಾರ, ಬೆಂಗಳೂರು, ರಾಮನಗರ ಜಿಲ್ಲೆಗಳ ಜನರಿಗೆ ಯುಗಾದಿ ಎಂಬುದು ಬಹುದೊಡ್ಡ ಹಬ್ಬ. ದಕ್ಷಿಣ ಕರ್ನಾಟಕದ ಮಂದಿಗೆ ಯುಗಾದಿಯೆಂದರೆ ಅವರ್ಣನೀಯ ಸಂಭ್ರಮ, ಸಡಗರ. ಮನೆಯನ್ನು ಮಾವು-ಬೇವಿನ ತಳಿರಿನಿಂದ ಸಿಂಗರಿಸುವುದು, ಒಬ್ಬಟ್ಟು-ಪಾಯಸ ಮಾಡುವುದು, ಅಗಲಿದ ಹಿರಿಯರಿಗೆ ನೈವೇದ್ಯ ಅರ್ಪಿಸುವುದು, ಬಾಳಲ್ಲಿ ಸಿಹಿ-ಕಹಿ ಸಮನಾಗಿ ಬರಲೆಂಬ ಸದಾಶಯದಲ್ಲಿ ಬೇವು-ಬೆಲ್ಲ ತಿನ್ನುವುದು… ಇದು ಎಲ್ಲೆಡೆಯೂ ಸಾಮಾನ್ಯ ತಾನೇ? ಹಳೇ ಮೈಸೂರು ಭಾಗದವರು “ಯುಗಾದಿ’ ಅಂದಾಕ್ಷಣ ಬೆರಗಿನಿಂದ ಕಣ್ಣರಳಿಸಲು ಇನ್ನೊಂದು ಮುಖ್ಯ ಕಾರಣವೂ ಇದೆ. ಯಾವುದೋ ಕಾರಣಕ್ಕೆ ಹಿರಿಯರೊಂದಿಗೆ, ಹೆತ್ತವರೊಂದಿಗೆ, ಸೋದರ-ಸೋದರಿಯರೊಂದಿಗೆ ಜಗಳವಾಡಿಕೊಂಡು ಮನೆ ಬಿಟ್ಟು ಹೋದ ಮಕ್ಕಳು; ದುಡಿಮೆಯ ನೆಪದಲ್ಲಿ ಮುಂಬೈಗೋ, ವಿದೇಶಕ್ಕೋ ಹೋದ ಕುಟುಂಬದವರು ಯುಗಾದಿಯ ನೆಪದಲ್ಲಿ ತಪ್ಪದೇ ಊರಿಗೆ ಬರುತ್ತಾರೆ. ಹಾಗೆ ಬಂದವರು ಮನೆಮಂದಿಗೆಲ್ಲಾ ಉಡುಗೊರೆ, ಹೊಸಬಟ್ಟೆ ತರುವುದುಂಟು. ಯುಗಾದಿಗೆ ಬಂದ ನೆಪದಲ್ಲಿ ಅಪ್ಪ-ಮಗನ ಮಧ್ಯೆ, ಅತ್ತೆ-ಸೊಸೆಯ ನಡುವೆ ನಿಂತು ಹೋಗಿದ್ದ ಮಾತುಕತೆ ಶುರುವಾಗುವುದೂ ಇದೆ. ಯುಗಾದಿಗೆ ಹೋಗಿದ್ವಲ್ವ, ಆಗ ಎಲ್ಲಾ ಸರಿ ಹೋಯ್ತು ಎಂದು ಹೇಳಿಕೊಂಡು ಮಕ್ಕಳು ಬೀಗುವುದೂ ಉಂಟು. ಅಪ್ಪ- ಅಮ್ಮನಿಗೆ ಬಟ್ಟೆ ತಗೊಂಡೆ ಎಂದು ಮಕ್ಕಳೂ,ಈ ಬಟ್ಟೆ ಮಗ/ಮಗಳು ತಂದ್ಕೊಂಟ್ಟಿದ್ದು ಎಂದು ಹೆತ್ತವರೂ ಊರಿಗೆಲ್ಲಾ ಹೇಳುವುದೂ ಇದೇ ಸಮಯದಲ್ಲೇ. ಪ್ರತಿ ಯುಗಾದಿಗೂ ಹೊಸದೊಂದು ಉಡುದಾರ ಹಾಕುವ ಪದ್ಧತಿಯೂ ಹಲವು ಕಡೆಗಳಲ್ಲಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಮಗ ದಪ್ಪ ಆದನಾ ಎಂದು ಹೆತ್ತವರು ಚೆಕ್ ಮಾಡುವ ಜಾಣತನವೂ ಈ ಪದ್ಧತಿಯ ಹಿಂದಿದೆ. ಯುಗಾದಿಯ ನೆಪದಲ್ಲಿ ಸಿಗುವ ಎಣ್ಣೆ ಸ್ನಾನ, ಸಂಜೆಯ ವೇಳೆಗೆ ಸಿಗುವ ಹೊಸ- ಹಳೇ ಗೆಳೆಯರ ಬಳಗ- ಇದೆಲ್ಲಾ ಯುಗಾದಿಯಂದು ಸಿಗುವ ಮರೆಯಲಾಗದ ಗಿಫ್ಟ್!
-ಗೀತಾಂಜಲಿ, ಮಂಡ್ಯ