Advertisement
ಉಡುಪಿ ಜಿಲ್ಲೆಯಲ್ಲಿ ಅಪರಾಹ್ನದಿಂದಲೇ ಮೋಡ ಕವಿದ ವಾತಾವರಣವಿತ್ತು. ರಾತ್ರಿ 11 ಗಂಟೆ ಬಳಿಕ ಗುಡುಗು, ಮಿಂಚಿನಿಂದ ಕೂಡಿದ ತುಂತುರು ಮಳೆಯಾಯಿತು. ಮಧ್ಯರಾತ್ರಿ ಬಳಿಕ ಭಾರೀ ಗುಡುಗು ಮಿಂಚಿನೊಂದಿಗೆ ಮುಂಜಾನೆವರೆಗೂ ಗಾಳಿ-ಮಳೆ ಸುರಿದು ವಿದ್ಯುತ್ ಸಂಪರ್ಕ ಕಡಿತವಾಯಿತು.
ಗಾಳಿಯ ಪರಿಣಾಮದಿಂದಾಗಿ ಹಲವೆಡೆ ಮರಗಳು, ವಿದ್ಯುತ್ ಕಂಬಗಳು ಉರುಳಿದವು. ಮೆಸ್ಕಾಂ ಮಣಿಪಾಲ, ಹಿರಿಯಡಕ ವಲಯಗಳಲ್ಲಿ ಶುಕ್ರವಾರ ಮಧ್ಯಾಹ್ನದವರೆಗೆ ವಿದ್ಯುತ್ ಸಂಪರ್ಕ ಇರಲಿಲ್ಲ. ಉಡುಪಿ ನಗರದಲ್ಲಿ ಮಧ್ಯರಾತ್ರಿ ಹೋದ ವಿದ್ಯುತ್ ಬೆಳಗ್ಗೆ 9 ಗಂಟೆಗೆ ಬಂತು. ಉಡುಪಿ ಉಪವಿಭಾಗದಲ್ಲಿ ಸುಮಾರು 60 ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿದ್ದು ಬಹುತೇಕ ಕಂಬಗಳನ್ನು ಪುನಃಸ್ಥಾಪಿಸಲಾಗಿದೆ ಎಂದು ತಿಳಿದುಬಂದಿದೆ. ಮಣಿಪಾಲ – ಪರ್ಕಳ ರಸ್ತೆಯ ಈಶ್ವರನಗರದಲ್ಲಿ ಮಾವಿನ ಮರವೊಂದು ರಸ್ತೆಗೆ ಬಿದ್ದ ಪರಿಣಾಮ ಆರು ವಿದ್ಯುತ್ ಕಂಬಗಳು ಬಿದ್ದವು.
ಬ್ರಹ್ಮಾವರ, ಕೋಟ, ಸಾಲಿಗ್ರಾಮ, ಕೊಲ್ಲೂರು, ವಂಡ್ಸೆ, ಸಿದ್ದಾಪುರ, ಅಮಾಸೆಬೈಲಿನಲ್ಲಿ ಸಿಡಿಲು, ಮಿಂಚಿನಿಂದ ಕೂಡಿದ ಮಳೆಯಾಗಿದೆ. ಸಿಡಿಲಿಗೆ 9 ಹಸುಗಳು ಸಾವು
ಉಡುಪಿ ಜಿಲ್ಲೆಯ ಕಾರ್ಕಳ ಮತ್ತು ಕುಂದಾಪುರ ತಾ|ನ ವಿವಿಧೆಡೆ ಗುರುವಾರ ತಡರಾತ್ರಿ ಸಿಡಿಲು ಬಡಿದು 9 ಹಸುಗಳು ಸಾವಿಗೀಡಾಗಿವೆ.
Related Articles
ಕಳೆದ ನಾಲ್ಕು ದಿನಗಳಿಂದ ಶ್ರೀಕೃಷ್ಣ ಮಠದಲ್ಲಿ ಬ್ರಹ್ಮಕಲಶೋತ್ಸವ ನಿಮಿತ್ತ ನಡೆದ ಸಭೆಗಳಲ್ಲಿ ಮೇ 18ರ ಬಳಿಕ ಮಳೆ ಬರುತ್ತದೆ ಎಂದು ಹಲವರು ತಿಳಿಸಿದ್ದರು. ಒಂದು ದಿನದ ಸಭೆಯಲ್ಲಿ “ಬ್ರಹ್ಮಕಲಶೋತ್ಸವಕ್ಕಾಗಿ ಮಳೆ ವಿಳಂಬವಾಗುವುದು ಬೇಡ. ಮಳೆ ಬರಲಿ’ ಎಂದು ಪೇಜಾವರ ಶ್ರೀಗಳು ಹಾರೈಸಿದ್ದರು. ಅಂತೂ ಬ್ರಹ್ಮಕಲಶೋತ್ಸವ ನಡೆದ ದಿನವೇ ಮಳೆ ಬಂದದ್ದು ಕಾಕತಾಳೀಯವಾಗಿದೆ. ಬ್ರಹ್ಮಕಲಶೋತ್ಸವದ ದಿನವೇ ಮಳೆ ಬಂದಿರುವುದಕ್ಕೆ ಶ್ರೀಕೃಷ್ಣ ಮುಖ್ಯಪ್ರಾಣ ಸೇವಾ ಸಮಿತಿ ಹರ್ಷ ವ್ಯಕ್ತಪಡಿಸಿದೆ. ಮಳೆಗಾಗಿ ಪರ್ಯಾಯ ಶ್ರೀ ಪೇಜಾವರ ಶ್ರೀಗಳ ನೇತೃತ್ವದಲ್ಲಿ ಸಚಿವ ಪ್ರಮೋದ್ ಮಧ್ವರಾಜರು ಪ್ರಾರ್ಥನೆ ಸಲ್ಲಿಸಿದ್ದರು. ಮಸೀದಿ, ಚರ್ಚುಗಳಲ್ಲಿ ಪ್ರಾರ್ಥನೆ ಸಲ್ಲಿಸಿದ್ದರು.
Advertisement