ಮಲ್ಪೆ: ಮಂಗಳೂರು ಯುವವಾಹಿನಿ ಕೇಂದ್ರ ಸಮಿತಿಯ ಉಡುಪಿ ಘಟಕದ ವತಿಯಿಂದ ವಿದ್ಯಾನಿಧಿ ವಿತರಣಾ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಜು.2 ರಂದು ಉದ್ಯಾವರ ನಿತ್ಯಾನಂದ ಆರ್ಕೇಡ್‌ನಲ್ಲಿ ಜರಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬ್ರಹ್ಮಾವರ ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಬಿ.ಎನ್. ಶಂಕರ್ ಪೂಜಾರಿ ಅವರು ನಮ್ಮ ವಿದ್ಯಾರ್ಥಿಗಳು ಉತ್ತಮವಾದ ವಿದ್ಯಾಭ್ಯಾಸವನ್ನು ಪಡೆದು, ಐಎಎಸ್, ಐಪಿಎಸ್ ಸಾಧನೆಗಳನ್ನು ಮಾಡಲು ಯುವವಾಹಿನಿಯಂತಹ ಸಂಘಟನೆಗಳು ಅದಕ್ಕೆ ಬೇಕಾದಂತಹ ಮಾರ್ಗದರ್ಶನ ಶಿಬಿರಗಳನ್ನು ಏರ್ಪಡಿಸಬೇಕು ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಡುಪಿ ಘಟಕದ ಅಧ್ಯಕ್ಷ ರಮೇಶ್ ಕುಮಾರ್ ವಹಿಸಿದ್ದರು.
ಉಡುಪಿ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ದಯಾನಂದ ಡಿ. ಅವರು ವಿದ್ಯಾರ್ಥಿಗಳಿಗೆ ಪ್ರೇರಣೆ ಹಾಗೂ ಮಾರ್ಗದರ್ಶನವನ್ನು ನೀಡಿದರು.ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. 20 ವಿದ್ಯಾರ್ಥಿಗಳಿಗೆ ರೂ. 75000 ಮೌಲ್ಯದ ವಿದ್ಯಾನಿಧಿಯನ್ನು ವಿತರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಪದ್ಮನಾಭ ಮರೋಳಿ, ತಾ. ಪಂ. ಸದಸೆÂ ಶಿಲ್ಪ ರವೀಂದ್ರ ಕೋಟ್ಯಾನ್, ವಿದ್ಯಾರ್ಥಿ ಭವಿಷ್ಯ ನಿರ್ಮಾಣದ ಸಂಚಾಲಕ ಗಣೇಶ್ ಕುಮಾರ್, ಮಹಿಳಾ ಸಂಚಾಲಕಿ ಸುಶ್ಮಿತಾ ಗಿರಿರಾಜ್, ಭಾಸ್ಕರ್ ಕೆ. ಸುವರ್ಣ ಉಪಸ್ಥಿತರಿದ್ದರು.
ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್ ಪ್ರಸ್ತಾವನೆಗೈದರು. ಘಟಕದ ಉಪಾಧ್ಯಕ್ಷ ಅಶೋಕ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು. ಘಟಕದ ಕಾರ್ಯದರ್ಶಿ ಭಾರತಿ ಭಾಸ್ಕರ್ ಸುವರ್ಣ ವಂದಿಸಿದರು.