Advertisement

Kaup: ಮಳೆ ಸಿಂಚನದ ನಡುವೆ ಉಚ್ಚಿಲ ದಸರಾಕ್ಕೆ ವಿಜೃಂಭಣೆಯ ತೆರೆ

07:16 PM Oct 13, 2024 | Team Udayavani |

ಕಾಪು: ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರ ಹಾಗೂ ಭಕ್ತಾಭಿಮಾನಿಗಳ ಸಹಭಾಗಿತ್ವದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಮೂರನೇ ವರ್ಷದ “ಉಡುಪಿ ಉಚ್ಚಿಲ ದಸರಾ 2024′ ವೈಭವವು ಶನಿವಾರ ತಡರಾತ್ರಿ ವಿಜೃಂಭಣೆಯ ತೆರೆ ಕಂಡಿದೆ.

Advertisement

7 ಗಂಟೆ 41 ನಿಮಿಷ
ನವದುರ್ಗೆಯರು ಮತ್ತು ಶಾರದಾ ಮಾತೆಯ ಸನ್ನಿಧಿಯಲ್ಲಿ ಸಾಮೂಹಿಕ ಪ್ರಾರ್ಥನೆ, ವಿಸರ್ಜನಾ ಪೂಜೆಯ ಬಳಿಕ ಶನಿವಾರ ಸಂಜೆ 3.20ಕ್ಕೆ ಅಂಬಾರಿ ಹೊತ್ತ ಆನೆಯ ಪ್ರತಿಕೃತಿಗೆ ಪುಷ್ಪಾರ್ಚನೆಗೈದು ಶೋಭಾಯಾತ್ರೆಗೆ ಚಾಲನೆ ನೀಡಲಾಯಿತು. 4.45ಕ್ಕೆ ಶಾರದೆಯ ಮೇಲೆ ಡ್ರೋನ್‌ ಮೂಲಕ ಪುಷ್ಪಾರ್ಚನೆ ಮಾಡಲಾಯಿತು.

ರಾ. ಹೆ. 66ರ ಉಚ್ಚಿಲದಿಂದ ಹೊರಟ ಶೋಭಾಯಾತ್ರೆ ಎರ್ಮಾಳು-ಉಚ್ಚಿಲ-ಮೂಳೂರು ಮೂಲಕ 9.55ಕ್ಕೆ ಕೊಪ್ಪಲಂಗಡಿಗೆ, 10.51ಕ್ಕೆ ಓಶಿಯನ್‌ ಬೀಚ್‌ ರೆಸಾರ್ಟ್‌ ಬಳಿಯ ಬೀಚ್‌ ತಲುಪಿತು.

ಗಂಗಾರತಿ, ಮಹಾಮಂಗಳಾರತಿ ಬಳಿಕ ಬಾಲಕೃಷ್ಣ ಕೋಟ್ಯಾನ್‌ ಕಾಪು ಮತ್ತು ಬಳಗದ ಸಹಕಾರದೊಂದಿಗೆ ಸಮುದ್ರಕ್ಕೆ ತಂದು 12.01ಕ್ಕೆ ಸಮುದ್ರ ಕಿನಾರೆಯಲ್ಲಿ ಡ್ರೋನ್‌ ಶಿವು ನೇತೃತ್ವದಲ್ಲಿ ಪುಷ್ಪಾರ್ಚನೆಗೈದು ಜಲಸ್ತಂಭನ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಯಿತು.

ಕ್ಷೇತ್ರದ ಪ್ರಧಾನ ಅರ್ಚಕ ವೇ| ಮೂ| ರಾಘವೇಂದ್ರ ಉಪಾಧ್ಯಾಯರ ನೇತೃತ್ವದಲ್ಲಿ ಹತ್ತು ಮಂದಿ ಪುರೋಹಿತರು ಪುಷ್ಪಾರ್ಚನೆ ಸಹಿತ ಗಂಗಾರತಿ ಬೆಳಗಿಸಿದರು. ಸಹಸ್ರಾರು ಮಂದಿ ಮಹಿಳೆಯರು ಮಹಾಮಂಗಳಾರತಿ ಬೆಳಗಿದರು. ಅನಂತರ ದಸರಾ ರೂವಾರಿ ಡಾ| ಜಿ. ಶಂಕರ್‌ ಮತ್ತು ಶಾಲಿನಿ ಜಿ. ಶಂಕರ್‌ ಅವರಿಂದ ಸಮಷ್ಠಿಯ ಹಿತಕ್ಕಾಗಿ ಪ್ರಾರ್ಥನಾ ಸಂಕಲ್ಪ, ಜಯಘೋಷದೊಂದಿಗೆ ನವದುರ್ಗೆಯರು ಮತ್ತು ಶಾರದಾ ಮಾತೆಯನ್ನು ಏಕಕಾಲದಲ್ಲಿ ಜಲಸ್ತಂಭನಗೊಳಿಸಲಾಯಿತು.

Advertisement

ಬೀಚ್‌ನಲ್ಲಿ ಜನಸಾಗರ
ಶೋಭಾಯಾತ್ರೆ ಮತ್ತು ಜಲಸ್ತಂಭನದ ಸಂದರ್ಭ ಭಾರೀ ಜನಸಾಗರ ಹರಿದು ಬಂದಿದೆ. ಬೀಚ್‌ನಲ್ಲಿ ಸಂಗೀತ ರಸಮಂಜರಿ ಮತ್ತು ಆಕರ್ಷಕ ಸುಡುಮದ್ದು ಪ್ರದರ್ಶನ ಭಾರೀ ಗಮನ ಸೆಳೆಯಿತು. ಮೊಗವೀರ ಯುವ ಸಂಘಟನೆ ಸಹಿತ ವಿವಿಧ ಸಂಸ್ಥೆಗಳ ಪ್ರತಿನಿಧಿಗಳನ್ನೊಳಗೊಂಡ ಸ್ವಯಂ ಸೇವಕರು ಮತ್ತು ಪೊಲೀಸರು ಜನರನ್ನು ನಿಯಂತ್ರಿಸಲು ಭಾರೀ ಶ್ರಮಿಸಬೇಕಾಯಿತು.

ಸಹಕರಿಸಿದ ವರುಣ, ಅಬ್ಬರಿಸಿದ ಕಡಲು
ಶೋಭಾಯತ್ರೆ ಸಂದರ್ಭ ಎರ್ಮಾಳು ಪರಿಸರದಲ್ಲಿ ಮಳೆ ಸುರಿದಿದ್ದು, ಉಳಿದಂತೆ ವರುಣದೇವ ಉಚ್ಚಿಲ ದಸರಾಕ್ಕೆ ಸಂಪೂರ್ಣ ಸಹಕರಿಸಿದ್ದ. ಜಲಸ್ತಂಭನ ವೇಳೆ ಕಡಲಬ್ಬರ ಹೆಚ್ಚಾಗಿದ್ದು, ಬೃಹತ್‌ ಅಲೆಗಳ ಆರ್ಭಟದ ನಡುವೆಯೂ ಶಾಸಕ ಯಶ್‌ಪಾಲ್‌ ಸುವರ್ಣ ಮತ್ತು ಬಾಲಕೃಷ್ಣ ಕೋಟ್ಯಾನ್‌ ಮಾರ್ಗದರ್ಶನದಲ್ಲಿ ಸ್ವಯಂಸೇವಕರು ಶಿಸ್ತುಬದ್ಧವಾಗಿ ಹತ್ತೂ ವಿಗ್ರಹಗಳ ಜಲಸ್ತಂಭನ ಕಾರ್ಯಕ್ರಮವನ್ನು ಪೂರ್ಣಗೊಳಿಸಿ, ಮೆಚ್ಚುಗೆಗೆ ಪಾತ್ರರಾದರು.

ಶಾಸಕರಾದ ಗುರ್ಮೆ ಸುರೇಶ್‌ ಶೆಟ್ಟಿ, ಯಶ್‌ಪಾಲ್‌ ಸುವರ್ಣ, ದ. ಕ. ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ಡಾ| ಜಿ. ಶಂಕರ್‌, ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್‌, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಗಿರಿಧರ ಸುವರ್ಣ, ದಸರಾ ಸಮಿತಿ ಅಧ್ಯಕ್ಷ ವಿನಯ ಕರ್ಕೇರ, ಕ್ಷೇತ್ರಾಡಳಿತ ಸಮಿತಿ ಮಾಜಿ ಅಧ್ಯಕ್ಷ ವಾಸುದೇವ ಸಾಲ್ಯಾನ್‌, ಜೀರ್ಣೋದ್ಧಾರ ಸಮಿತಿ ಮಾಜಿ ಅಧ್ಯಕ್ಷ ಗುಂಡು ಅಮೀನ್‌, ಓಶಿಯನ್‌ ಬೀಚ್‌ ರೆಸಾರ್ಟ್‌ ಮಾಲಕರಾದ ಗಂಗಾಧರ ಸುವರ್ಣ, ಶಿಲ್ಪಾ ಜಿ. ಸುವರ್ಣ, ಮೊಗವೀರ ಯುವ ಸಂಘಟನೆ ಜಿಲ್ಲಾಧ್ಯಕ್ಷ ಜಯಂತ್‌ ಅಮೀನ್‌, ಮಹಾಜನ ಸಂಘದ ಪದಾಧಿಕಾರಿಗಳು, ಶೋಭಾಯಾತ್ರೆ, ಟ್ಯಾಬ್ಲೋ ಸಮಿತಿ ಪದಾಧಿಕಾರಿಗಳು ಹಾಗೂ ಸಮಾಜ ಭಾಂದವರು ಉಪಸ್ಥಿತರಿದ್ದರು.

ದೇಗುಲದ ವ್ಯವಸ್ಥಾಪಕ ಸತೀಶ್‌ ಅಮೀನ್‌ ಪಡುಕೆರೆ ಸಮಗ್ರ ಕಾರ್ಯಕ್ರಮವನ್ನು ನಿರೂಪಿಸಿದರು

ಕೃತಜ್ಞತೆ ಸಲ್ಲಿಕೆ
ತಾಯಿ ಶ್ರೀ ಮಹಾಲಕ್ಷ್ಮೀ ಸನ್ನಿಧಾನದಲ್ಲಿ ಹತ್ತು ದಿನಗಳ ಕಾಲ ಜರಗಿದ ಉಚ್ಚಿಲ ದಸರಾ 2024 ಅತ್ಯಂತ ವಿಜೃಂಭಣೆಯೊಂದಿಗೆ ಸಂಪನ್ನಗೊಂಡಿದೆ.

ಸಮಾಜ, ರಾಷ್ಟ್ರದ ಒಳಿತಿಗಾಗಿ ಮತ್ತು ಸಮಷ್ಠಿಯ ಅಭಿವೃದ್ಧಿ, ಕಸುಬುದಾರರಿಗೆ ಹೇರಳ ಮತ್ಸ್ಯಸಂಪತ್ತು ದೊರಕುವಂತಾಗಲಿ ಎಂದು ಪ್ರಾರ್ಥಿಸಿ ಸಮುದ್ರ ಪೂಜೆ, ಗಂಗಾರತಿ ನಡೆಸಲಾಗಿದೆ.

ದಸರಾ ಯಶಸ್ಸಿನಲ್ಲಿ ಸಹಕಾರ ನೀಡಿದ ಸಹೃದಯಿ ಭಕ್ತಾಭಿಮಾನಿಗಳು, ದಾನಿಗಳು, ರಾಜ್ಯ ಸರಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ, ಪೊಲೀಸ್‌ ಇಲಾಖೆ, ಮಾಧ್ಯಮ ವಿಭಾಗ, ಪುರೋಹಿತ ವರ್ಗ, ಮೊಗವೀರ ಸಂಯುಕ್ತ ಸಭೆ, ಗ್ರಾಮ ಸಭೆಗಳು, ಮೀನುಗಾರಿಕೆ ಸಂಘಟನೆಗಳು, ಸ್ವಯಂಸೇವಕರು ಹಾಗೂ ಎಲ್ಲ ಭಕ್ತಾಭಿಮಾನಿಗಳಿಗೆ ಡಾ| ಜಿ. ಶಂಕರ್‌ ಮತ್ತು ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್‌ ಕೃತಜ್ಞತೆ ಸಲ್ಲಿಸಿದ್ದಾರೆ.

ಚಿತ್ರಗಳು : ರಾಕೇಶ್‌ ಕುಂಜೂರು

Advertisement

Udayavani is now on Telegram. Click here to join our channel and stay updated with the latest news.

Next