ಉಡುಪಿ: ನಗರದ ತೆಂಕಪೇಟೆಯ ವಿ.ಟಿ. ಮಾರ್ಗದಲ್ಲಿರುವ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಆ. 10ರಿಂದ 17ರ ತನಕ 124ನೇ ಭಜನ ಸಪ್ತಾಹ ಮಹೋತ್ಸವ ಜರಗಲಿದೆ.
ಆ. 10ರ ಮಧ್ಯಾಹ್ನ 12.05ಕ್ಕೆ ದೀಪ ಪ್ರಜ್ವಲನ ಮತ್ತು ದೀಪ ಸ್ಥಾಪನೆಯೊಂದಿಗೆ ಆರಂಭಗೊಳ್ಳಲಿದೆ. ದ.ಕ., ಉಡುಪಿ, ಉತ್ತರ ಕನ್ನಡ ಜಿÇÉೆಗಳ ಭಜನ ಮಂಡಳಿಗಳು ನಿರಂತರ ಭಜನೆಯಲ್ಲಿ ಪಾಲ್ಗೊಳ್ಳುವರು. ಆ. 15ರ ರಾತ್ರಿ 9ಕ್ಕೆ ಶ್ರೀ ದೇವರ ಸಾನ್ನಿಧ್ಯದಲ್ಲಿ ವಿಶೇಷ ಪುಷ್ಪಾಲಂಕಾರದೊಂದಿಗೆ ರಂಗಪೂಜೆ ಸೇವೆ ನಡೆಯಲಿದೆ.
ಆ. 16ರ ಸಂಜೆ 5ಕ್ಕೆ ಭಕ್ತ ವೃಂದದೊಂದಿಗೆ ನಗರ ಭಜನೆಯು ದೇವಸ್ಥಾನದಿಂದ ಹೊರಟು ವಿ.ಟಿ. ರಸ್ತೆ, ಐಡಿಯಲ್ ಸರ್ಕಲ್, ಡಯನಾ ವೃತ್ತ, ಕೋರ್ಟ್ ರಸ್ತೆ, ಅಜ್ಜರಕಾಡು, ಕಿನ್ನಿಮೂಲ್ಕಿ, ಮೈನ್ ರೋಡ್, ಕಲ್ಸಂಕ, ಬಡಗುಪೇಟೆಯಲ್ಲಿ ತಿರುಗಿ ಶ್ರೀ ಭುವನೇಂದ್ರ ಮಂಟಪ ರಸ್ತೆಯಲ್ಲಿ ಮುಂದುವರಿದು ನಾಗಬನ ರಸ್ತೆಯ ಮೂಲಕ ಹಾದು ಶ್ರೀ ದೇವಸ್ಥಾನದಲ್ಲಿ ಸಂಪನ್ನಗೊಳ್ಳಲಿದೆ.
ಭಜನ ಸಪ್ತಾಹ ಮಹೋತ್ಸವದ 7 ದಿನವೂ ಪ್ರತಿದಿನ ಬೆಳಗ್ಗೆ 5.30ಕ್ಕೆ ಶ್ರೀ ವಿಠೊಬ ರಖುಮಾಯಿ ದೇವರಿಗೆ ಕಾಕಡಾರತಿ ಸೇವೆ ಜರಗಲಿದೆ.
ಆ. 17ರಂದು ವಾಡಿಕೆಯಂತೆ ವಿವಿಧ ಮಂಗಲೋತ್ಸವ ಕಾರ್ಯಕ್ರಮಗಳು, ಬೆಳಗ್ಗೆ 11ಕ್ಕೆ ನಗರ ಭಜನೆ, 11.30ಕ್ಕೆ ಶ್ರೀ ದೇವರಿಗೆ ಮಹಾಪೂಜೆ, ಅನಂತರ ಶ್ರೀ ವಿಠೊಬ ದೇವರಿಗೆ ಮಹಾಪೂಜೆ, ಭಕ್ತರಿಂದ ಉರುಳು ಸೇವೆ, ಮೊಸರು ಕುಡಿಕೆ, ತೆಪ್ಪಂಗಾಯಿ ಸೇವೆ, ರಾತ್ರಿ 9.30ಕ್ಕೆ ದೇವರ ಸಾನ್ನಿಧ್ಯದಲ್ಲಿ ಮರುಭಜನೆಯೊಂದಿಗೆ ಭಜನೆ ಸಪ್ತಾಹ ಮುಕ್ತಾಯಗೊಳ್ಳಲಿವೆ ಎಂದು ದೇವಸ್ಥಾನದ ಆಡಳಿತ ಮಂಡಳಿ, ಭಜನ ಮಹೋತ್ಸವ ಸಮಿತಿ ಪ್ರಕಟನೆ ತಿಳಿಸಿದೆ.