Advertisement

ಎಚ್ಚೆತ್ತುಕೊಳ್ಳದಿದ್ದರೆ ಮತ್ತೆ ಜಲಪ್ರಳಯಾಘಾತ : ಕಣ್ಮರೆಯಾಗಿವೆ 65ಕ್ಕೂ ಹೆಚ್ಚು ತೋಡುಗಳು

12:25 PM Apr 02, 2022 | Team Udayavani |

ಉಡುಪಿ : ನಗರ ಭಾಗದಲ್ಲಿ ಮಳೆ ಪ್ರವಾಹ ನಿಯಂತ್ರಿಸಲು ಇದುವರೆಗೆ ಯಾವುದೇ ಸೂಕ್ತ ಕಾರ್ಯ ಯೋಜನೆ ಆಡಳಿತ ವ್ಯವಸ್ಥೆ ಕೈಗೊಂಡಿಲ್ಲ. ಪ್ರತೀ ವರ್ಷದಂತೆ ಈ ವರ್ಷವೂ ಹೂಳೆತ್ತುವುದು ಬಿಟ್ಟು ವೈಜ್ಞಾನಿಕವಾಗಿ ಮಳೆ ಪ್ರವಾಹದಿಂದ ನಗರವನ್ನು ಹೇಗೆ ರಕ್ಷಿಸಬಹುದು ಎಂಬ ಮುಂದಾಲೋಚನೆ ನಗರಸಭೆ ಮಾಡಿಲ್ಲ.

Advertisement

2020ರ ಸೆ.19, 20 ರಂದು ಸುರಿದ ಅಕಾಲಿಕ ಮಳೆಗೆ ಇಡೀ ನಗರವೇ ತತ್ತರಿಸಿ ಹೋಗಿತ್ತು. ಚರಂಡಿ, ತೋಡು, ನದಿಗಳೆಲ್ಲವೂ ಉಕ್ಕಿ ಹರಿದು ಮನೆ, ಮಠ, ಅಂಗಡಿ, ಮುಂಗಟ್ಟು ಮುಳುಗಿತ್ತು. ಈಗಲೂ ಅದೇ ಹಳೆ ಕಾಲದ ತೋಡು ಸ್ವತ್ಛಗೊಳಿಸುವ ಕೆಲಸ ಮುಂದುವರಿಸಿಕೊಂಡು ಹೋಗಲಾಗುತ್ತಿದೆ.

ಮಳೆ ನೀರು ಇಳಿಮುಖವಾಗಿ ಹರಿದು ಸಮುದ್ರ ಸೇರುವಂತೆ ನೈಸರ್ಗಿಕವಾಗಿ ನಗರದಲ್ಲಿ ಕೆಲವು ಅಡ್ಡವಾಗಿರುವ ಸಂಪರ್ಕ ತೋಡುಗಳು ಇಂದ್ರಾಣಿ ನದಿ ಮೂಲಕ ಹರಿದು ಹೋಗುತ್ತಿತ್ತು. ನಗರದಲ್ಲಿ ಈ ರೀತಿಯ ಮಳೆ ನೀರು ಹರಿಯುವ ತೋಡುಗಳು 65ಕ್ಕೂ ಹೆಚ್ಚಿದ್ದು, ಕಾಲಕ್ರಮೇಣ ಅಭಿವೃದ್ಧಿ ಹೆಸ ರಿ ನಲ್ಲಿ ಅಡ್ಡ ತೋಡುಗಳು ಕಣ್ಮರೆಯಾಗಿವೆ. ಕೆಲವು ಪ್ರದೇಶಗಳಲ್ಲಿ ಮಣ್ಣು ತುಂಬಿಸಿ ಎತ್ತರ ಮಾಡಲಾಯಿತು. ಇನ್ನೂ ಬಹುತೇಕ ತೋಡು ಅತಿಕ್ರಮಿಸಿ ಮನೆ, ಕಟ್ಟಡಗಳನ್ನು ನಿರ್ಮಿಸಿದ್ದಾರೆ. 1964ರಲ್ಲಿ “ಅಡಂಗಲ್‌ ‘ ಆಗುವ ಮೊದಲು ಅಡ್ಡ ತೋಡುಗಳು ಎಷ್ಟಿವೆ ಎಂಬ ಗುರುತಿಸಿ ಕಾಯಕಲ್ಪ ನೀಡುವ ಕೆಲಸವಾಗಬೇಕಿದೆ.

ನೆರೆ ಬಾಧಿತ ಪ್ರದೇಶಗಳು
ಬಡಗುಪೇಟೆ, ತೆಂಕಪೇಟೆ, ರಾಜಾಂಗಣ ಪಾರ್ಕಿಂಗ್‌ ಪ್ರದೇಶ, ಮಠದಬೆಟ್ಟು, ಬನ್ನಂಜೆ, ಶಿರಿಬೀಡು, ಗುಂಡಿಬೈಲು, ಕಲ್ಸಂಕ ಪ್ರದೇಶಗಳು ಪ್ರತೀವರ್ಷ ನೆರೆಯಿಂದ ಬಾಧಿತವಾಗುವ ಪ್ರದೇಶಗಳಾಗಿವೆ. ಬಫ‌ರ್‌ ಝೋನ್‌ (ಮಳೆ ನೀರು ಹರಿಯುವ ತೋಡು ಸುತ್ತಮುತ್ತ) ಕಾನೂನು ಪ್ರಕಾರ ತೋಡಿನ ಅಗಲ ಎಷ್ಟು ಮೀಟರ್‌ ಇರುತ್ತದೋ ಅಷ್ಟೇ ಮೀಟರ್‌ ಅಗಲ ಬಿಟ್ಟು ಮನೆ ಅಥವಾ ಕಟ್ಟಡ ನಿರ್ಮಿಸಬಹುದು. 90ರ ದಶಕದ ನಗರಾಭಿವೃದ್ಧಿ ಯೋಜನೆಯಲ್ಲಿ ಇದು ಸ್ಪಷ್ಟವಾಗಿದ್ದರೂ ನಿಯಮಾವಳಿ ಗಾಳಿಗೆ ತೂರಿದ ಪರಿಣಾಮ ಈಗ ನಗರದ ತಗ್ಗು ಪ್ರದೇಶಗಳು ಕೃತಕ ನೆರೆಯಿಂದ ತತ್ತರಿಸುತ್ತಿದೆ ಎನ್ನುತ್ತಾರೆ ತಜ್ಞರು. ಪ್ರಸ್ತುತ ನಗರವಲ್ಲದೆ ಅಂಬಲಪಾಡಿ, ಕಡೆಕಾರು, ಕಿದಿಯೂರು, ಉಪ್ಪೂರು, ಕೆಮ್ಮಣ್ಣು, ಹೂಡೆ, ಉದ್ಯಾವರದಂತಹ ಗ್ರಾಮಾಂತರ ಭಾಗಗಳೂ ನೆರೆ ಹಾವಳಿಯಿಂದ ತತ್ತರಿಸುತ್ತಿವೆ.

ಕಣ್ಮರೆಯಾಗಿರುವ ಸಂಪರ್ಕ, ಅಡ್ಡ ತೋಡುಗಳ ಮೂಲ ಪತ್ತೆ ಮಾಡಬೇಕು. ಸರ್ವೇಯರ್‌ ಮೂಲಕ ಮೊದಲು ಎಲ್ಲೆಲ್ಲಿ, ಎಷ್ಟು ತೋಡುಗಳಿದ್ದವು ಎಂಬುದು ತಿಳಿಯಬೇಕು. ನುರಿತ ಎಂಜಿನಿಯರ್‌ಗಳು, ಭೂಗರ್ಭ ಶಾಸ್ತ್ರಜ್ಞರು, ಪ್ರವಾಹ ನಿಯಂತ್ರಣ ವಿಶ್ಲೇಷಕರ ಸಮಿತಿ ರಚಿಸಿ ಸೂಕ್ತ ವರದಿ ಪಡೆದು ನೆರೆಯಿಂದ ನಗರವನ್ನು ಪಾರು ಮಾಡುವ ಬಗ್ಗೆ ಯೋಜನೆ ರೂಪಿಸಬೇಕಾಗಿದೆ.

Advertisement

ನೀರು ಹರಿದು ಹೋಗಲು ಜಾಗ ಸಾಲದೆ ನೆರೆ ಸೃಷ್ಟಿ
ನೆರೆ ಸಂಭವಿಸಿದಲ್ಲಿ ನದಿ ಪಾತ್ರ, ತೋಡುಗಳಿಂದ ನೀರು ಉಕ್ಕಿದರೆ ಮತ್ತೆ ಮಳೆ ಕಡಿಮೆಯಾದೊಡನೆ ಇಳಿದು ನದಿಗೆ ಸೇರಬೇಕು. ಇಲ್ಲಿ ಹೀಗಾಗುತ್ತಿಲ್ಲ. ಕೃಷಿ ಭೂಮಿ ಮಣ್ಣು ಹಾಕಿ ಏರಿಸಲಾಗಿದೆ. ಈ ಹಿಂದಿನ ನೈಸರ್ಗಿಕ ಮಳೆ ತೋಡುಗಳು ಈಗ ಇಲ್ಲ. ನೀರು ವಾಪಸು ಹರಿದು ಹೋಗಲು ಸಾಧ್ಯವಾಗುತ್ತಿಲ್ಲ. ಕಲ್ಲು, ಕಾಂಕ್ರೀಟ್‌ ಕಂಪೌಂಡ್‌ಗಳನ್ನು ಕಟ್ಟಲಾಗಿದೆ. ಮಳೆಯಲ್ಲಿ ಇಂದ್ರಾಣಿ ನದಿ ಕಾಂಕ್ರೀಟ್‌ನ ಚೌಕಟ್ಟಿನಲ್ಲಿ ಇಕ್ಕಟ್ಟಾಗಿ ಹರಿಯುತ್ತದೆ. ಜಾಗ ಸಾಲದೇ ಸುತ್ತಮುತ್ತಲು ನೆರೆ ಸೃಷ್ಟಿಸುತ್ತದೆ. ಸದ್ಯಕ್ಕೆ ಹೀಗಿರುವ ತೋಡು, ಇಂದ್ರಾಣಿ ನದಿಯನ್ನು ಹೂಳು ತೆಗೆದು ಸ್ವತ್ಛವಾಗಿಸಬೇಕು.
-ಡಾ| ಉದಯ ಶಂಕರ್‌ ಭೂಗರ್ಭ ಶಾಸ್ತ್ರಜ್ಞ, ಎಂಐಟಿ, ಮಣಿಪಾಲ.

ಅಡ್ಡ ತೋಡುಗಳಿಗೆ ತಡೆ ಕೃತಕ ನೆರೆಗೆ ಕಾರಣ
ಕಳೆದ 22 ವರ್ಷಗಳಲ್ಲಿ ಮಳೆ ಪ್ರಮಾಣ ಹೆಚ್ಚಿರುವುದು ಶೇ. 6 ಮಾತ್ರ. ಒಂದು ಸಣ್ಣ ಮಳೆ ಬಂದರೂ ತಗ್ಗು ಪ್ರದೇಶಗಳು ಜಲಾವೃತವಾಗುತ್ತಿದೆ. ಇಲ್ಲಿ ಬೆಂಗಳೂರಿನ ಮಾದರಿಯಲ್ಲಿ ರಾಜ ಕಾಲುವೆ ವ್ಯವಸ್ಥೆ ಇಲ್ಲ. ಇಂದ್ರಾಣಿ ನದಿಯಲ್ಲೆ ಮಳೆ ನೀರು ಹರಿದು ಸಮುದ್ರ ಸೇರಬೇಕು. ಇಂದ್ರಾಣಿ ನದಿ ಉಕ್ಕಿ ಹರಿದು ಕೆಲವೆಡೇ ನೆರೆ ಸೃಷ್ಟಿಸುತ್ತದೆ. ಹಿಂದಿನ ಕಾಲದ ಅಡ್ಡ ತೋಡುಗಳಿಗೆ ತಡೆಯಾಗಿರುವ ಕಾರಣ ಇಲ್ಲಿ ಕೃತಕ ನೆರೆ ಸಂಭವಿಸುತ್ತಿದೆ. ಈ ಮಳೆ ನೀರು ತೋಡುಗಳನ್ನು ಸರಿಪಡಿಸುವ ಕೆಲಸವಾಗಬೇಕು. ಇದಕ್ಕೊಂದು ವೈಜ್ಞಾನಿಕವಾಗಿ ದೂರದೃಷ್ಟಿ ಯೋಜನೆ ಅಗತ್ಯವಿದೆ.
– ರಾಘವೇಂದ್ರ ಕಿಣಿ, ಸಿವಿಲ್‌ ಎಂಜಿನಿಯರ್‌.

ಬೆಚ್ಚಿ ಬೀಳಿಸಿದ್ದ ಕೃತಕ ನೆರೆ
ಅಭಿವೃದ್ಧಿ ಜತೆಗೆ ನೈಸರ್ಗಿಕ ಅಪಾಯ ಆಹ್ವಾನಿಸುತ್ತಿರುವ ನಾವು 2020 ಸೆ.19-20 ರಂದು ಸುರಿದ ಮಳೆಯಿಂದ ಕೃತಕ ನೆರೆಗೆ ನಗರವೇ ಬೆಚ್ಚಿ ಬಿದ್ದಿತ್ತು. ಇದರ ಪರಿಣಾಮ ಅಂಗಡಿ, ಮುಂಗಟ್ಟು, ವಸತಿಗಳಿಗೆ ಹಾನಿ ಸಂಭವಿಸಿ ಕೋಟ್ಯಂತರ ರೂ. ನಷ್ಟ ಸಂಭವಿಸಿತ್ತು. ನಗರದಲ್ಲಿ 24 ಗಂಟೆಗಳ ಕಾಲ ಸರಾಸರಿ 315.3 ಮಿ.ಮೀ. ಮಳೆಯಾಗಿತ್ತು. ಸೆ. 19ರ ಅಪರಾಹ್ನ 2ಕ್ಕೆಪ್ರಾರಂಭವಾದ ಮಳೆ ಎಡೆಬಿಡದೆ ಸುರಿದಿದ್ದು, ರಾತ್ರಿ 11.30ರ ವೇಳೆಗೆ ಇಂದ್ರಾಣಿ ಸಮೀಪದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿತು. ಅನಂತರ ಹಂತ ಹಂತವಾಗಿಮುಂಜಾನೆ 2.45ಕ್ಕೆ ಗುಂಡಿಬೈಲು ಸೇರಿದಂತೆ ಇತರೆ ಪ್ರದೇಶಗಳಿಗೆ ಭಾರೀ ಪ್ರಮಾಣದಲ್ಲಿ ನೀರು ನುಗ್ಗಿ ಅವಾಂತರವಾಗಿತ್ತು. ನೂರಾರು ಜನರ ಪ್ರಾಣ ರಕ್ಷಣೆ ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next