Advertisement

ಉಡುಪಿ: ಸಂತೆಕಟ್ಟೆ-“ಟ್ರಕ್‌ ಬೇ’ ಅವ್ಯವಸ್ಥೆ ಕೇಳೋರಿಲ್ಲ

05:07 PM Jun 17, 2024 | Team Udayavani |

ಉಡುಪಿ: ಸಂತೆಕಟ್ಟೆ ರಾ. ಹೆದ್ದಾರಿಯ ವೆಹಿಕ್ಯೂಲರ್‌ ಓವರ್‌ಪಾಸ್‌ ಕಾಮಗಾರಿ ಪ್ರಗತಿಯಲ್ಲಿದ್ದು, ಇಲ್ಲಿನ ಸಮೀಪವೇ
ಇರುವ “ಟ್ರಕ್‌ ಬೇ’ ಅವ್ಯವಸ್ಥೆಯ ಆಗರವಾಗಿದೆ. ಎನ್‌ಎಚ್‌66 ಕಾಮಗಾರಿ ಮತ್ತು ನಿರ್ವಹಣೆ ಸಂಬಂಧಿಸಿ ಪ್ರಾಧಿಕಾರವು ಕುಂದಾಪುರದರಿಂದ ಹೆಜಮಾಡಿವರೆಗೂ ಹಲವು ವರ್ಷದಿಂದ ನಿರ್ಲಕ್ಷ್ಯ ಮತ್ತು ವಿಳಂಬ ಧೋರಣೆ ತೋರುತ್ತಿದೆ ಎಂಬುದು ಸ್ಥಳೀಯರ ಅಭಿಪ್ರಾಯ.

Advertisement

ಈ ಹೆದ್ದಾರಿಯಲ್ಲಿ ನಿತ್ಯವು ಲಕ್ಷಾಂತರ ಘನ ಮತ್ತು ಲಘು ವಾಹನ ಓಡಾಡುತ್ತಿರುತ್ತವೆ. ಆದರೂ ಹೆದ್ದಾರಿ ಪ್ರಾಧಿಕಾರ ಯಾವ
ಸಮಸ್ಯೆಗಳಿಗೂ ಸರಿಯಾಗಿ ಸ್ಪಂದಿಸುವುದಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ. ಉಡುಪಿ ಕಡೆಯಿಂದ ಬ್ರಹ್ಮಾವರ ಕಡೆಗೆ ಹೋಗುವಾಗ ಸಂತೆಕಟ್ಟೆ ವೆಹಿಕ್ಯೂಲರ್‌ ಓವರ್‌ಪಾಸ್‌ ಕಾಮಗಾರಿ ಸ್ವಲ್ಪ ಮುಂದಕ್ಕೆ ಟ್ರಕ್‌ ಬೇ ಸಿಗುತ್ತದೆ. ಈ ಟ್ರಕ್‌ ಬೇ ಪರಿಸರದಲ್ಲಿ ವಿದ್ಯುತ್‌ ವ್ಯವಸ್ಥೆ ಇಲ್ಲದೆ ಹಲವಾರು ತಿಂಗಳು ಕಳೆದಿದೆ. ಇಲ್ಲಿ ಸ್ಥಳೀಯರು ಓಡಾಡಲು ಭಯಪಡುವಂತ ಪರಿಸ್ಥಿತಿ ಇದೆ. ಇಲ್ಲಿ ನಿಲ್ಲಿಸುವ ಲಾರಿ, ಟೆಂಪೊ, ಟ್ರಕ್‌ಗಳು ಕತ್ತಲಿನಲ್ಲೇ ತಮ್ಮ ವಿಶ್ರಾಂತಿ ಕಳೆಯುವ ಪರಿಸ್ಥಿತಿ ಇದೆ.

ಶೌಚಾಲಯ ನಿರ್ವಹಣೆ ಇಲ್ಲ 
ಟ್ರಕ್‌ ಬೇ ಒದಗಿಸುವ ಮೂಲ ಸೌಕರ್ಯಗಳ ಕನಿಷ್ಠ ನಿರ್ವಹಣೆಗೂ ಹೆದ್ದಾರಿ ಪ್ರಾಧಿಕಾರ ಆಸಕ್ತಿ ತೋರಿಲ್ಲ. ಶೌಚಾಲಯ ವ್ಯವಸ್ಥಿತವಾಗಿ ರೂಪಿಸಿದ್ದರೂ, ಶೌಚಾಲಯದ ಬಾಗಿಲು ಮುರಿದು ಬೀಳುವ ಸ್ಥಿತಿಯಲ್ಲಿದೆ. ಇದರ ದುರ್ವಾಸನೆಯಿಂದಾಗಿ ಪರಿಸರದ ಸುತ್ತಮುತ್ತ ಓಡಾಡುವರೂ ಸಹ ಮೂಗು ಮುಚ್ಚಿಕೊಂಡು ಹೋಗುವಂತ ದುಸ್ಥಿತಿ ಇಲ್ಲಿದೆ ಎನ್ನುತ್ತಾರೆ ಸ್ಥಳೀಯರು.

ಹೆಚ್ಚುತ್ತಿದೆ ಅಕ್ರಮಗಳ ಕಾರುಬಾರು
ಕಳೆದ ಹಲವಾರು ತಿಂಗಳಿನಿಂದ ಇಲ್ಲಿ ವಿದ್ಯುತ್‌ ಬೇಳಕಿನ ವ್ಯವಸ್ಥೆ ಇಲ್ಲದ ಪರಿಣಾಮ ಅಕ್ರಮ ಚಟುವಟಿಕೆಗಳ ತಾಣವಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅಪರಿಚಿತರು ಇಲ್ಲಿ ಮದ್ಯ ಸೇವಿಸುವುದು, ಗಲಾಟೆ ಮಾಡುವುದು, ಇನ್ನಿತರೆ ಅಕ್ರಮ ಚಟುವಟಿಕೆ ನಡೆಯುತ್ತಿರುವ ಬಗ್ಗೆ ಸ್ಥಳೀಯರು ಆರೋಪಿಸಿದ್ದಾರೆ. ಪೊಲೀಸ್‌ ಇಲಾಖೆಯೂ ಈ ಬಗ್ಗೆ ಗಮನ ವಹಿಸುವಂತೆ ಆಗ್ರಹಿಸಿದ್ದಾರೆ.

ಬೀದಿದೀಪ ವ್ಯವಸ್ಥೆ ಸರಿಪಡಿಸಿ
ಸಂತೆಕಟ್ಟೆ ಟ್ರಕ್‌ ಬೇ ಪರಿಸರ ಸಮರ್ಪಕ ನಿರ್ವಹಣೆ ಇಲ್ಲದೆ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗುತ್ತಿದೆ.ಹಲವು ತಿಂಗಳಿನಿಂದ ಇಲ್ಲಿನ ಬೀದಿದೀಪ ವ್ಯವಸ್ಥೆ ಸ್ಥಗಿತಗೊಂಡಿದೆ. ಶೌಚಾಲಯ ಬಾಗಿಲು ಒಡೆದು ಹೋಗಿದ್ದು, ಅಕ್ರಮ ಚಟುವಟಿಕೆಗಳ ತಾಣವಾಗುತ್ತಿದೆ. ಕೂಡಲೆ ಹೆದ್ದಾರಿ ಪ್ರಾಧಿಕಾರ ಮೂಲ ಸೌಕರ್ಯ ವ್ಯವಸ್ಥೆ ಸರಿಪಡಿಸಬೇಕು. ಪೊಲೀಸ್‌
ಇಲಾಖೆಯೂ ಈ ಪರಿಸರದಲ್ಲಿ ನಿಗಾವಹಿಸಬೇಕು.
*ಜಯಾನಂದ್‌, ನಗರಸಭಾ ಮಾಜಿ ಸದಸ್ಯ

Advertisement
Advertisement

Udayavani is now on Telegram. Click here to join our channel and stay updated with the latest news.

Next