Advertisement

Udupi: ಇಲ್ಲಿ ಹೊಂಡಗಳೇ ಸ್ಪೀಡ್‌ ಬ್ರೇಕರ್‌ಗಳು!

03:04 PM Nov 27, 2024 | Team Udayavani |

ಉಡುಪಿ: ಅಂಬಾಗಿಲು- ಪೆರಂಪಳ್ಳಿ ರಸ್ತೆಯಲ್ಲಿ ಟ್ರಾಫಿಕ್‌ ದಟ್ಟಣೆ ಕಡಿಮೆಯಿರುವ ಕಾರಣ ಸಂತೆಕಟ್ಟೆ ಹಾಗೂ ಕುಂದಾಪುರ ಭಾಗದಿಂದ ಮಣಿಪಾಲಕ್ಕೆ ಹೋಗುವ ವಾಹನಗಳು ಇದೇ ರಸ್ತೆಯನ್ನೇ ಬಳಕೆ ಮಾಡುತ್ತಿವೆ. ರಸ್ತೆಯೂ ಚೆನ್ನಾಗಿದ್ದು, ಬೇಗನೇ ಗುರಿ ತಲುಪಬಹುದು ಎಂಬ ಲೆಕ್ಕಾಚಾರ ಚಾಲಕರದ್ದು. ಆದರೆ ಅಂಬಾಗಿಲು-ಪೆರಂಪಳ್ಳಿ ಮೂಲಕ ಮಣಿಪಾಲ ಸಂಪರ್ಕಿಸುವ ಚತುಷ್ಪಥ ರಸ್ತೆಯ ಸಾಯಿರಾಧ ಗ್ರೀನ್‌ ವ್ಯಾಲಿಗಿಂತ ಸ್ವಲ್ಪ ಮುಂದಕ್ಕೆ ಇರುವ 350 ಮೀ.ಹೊಂಡ-ಗುಂಡಿ ರಸ್ತೆಯಿಂದಾಗಿ ಇಲ್ಲಿ ಸಂಚರಿಸುವುದೇ ದುಸ್ತರವಾಗಿ ಪರಿಣಮಿಸಿದೆ.

Advertisement

ಹಾಕಿರುವ ಡಾಮರು ಸಂಪೂರ್ಣ ಎದ್ದುಹೋದ ಪರಿಣಾಮ ಈ ಪರಿಸರ ಸಂಪೂರ್ಣ ಧೂಳಿನಿಂದ ಆವೃತ್ತವಾಗಿದೆ. ದ್ವಿಚಕ್ರ ವಾಹನ ಸಹಿತ ಕಾರು ಚಾಲಕರು ತ್ರಾಸಪಟ್ಟುಕೊಂಡು ತಮ್ಮ ವಾಹನವನ್ನು ಚಲಾಯಿಸಿಕೊಳ್ಳುವ ಅನಿವಾರ್ಯ ಸ್ಥಿತಿ ಇದೆ. ರಸ್ತೆಯ ಇಕ್ಕೆಲಗಳಲ್ಲಿ ಬೃಹತ್‌ ಗಾತ್ರದ ಹೊಂಡಗಳು ಇರುವುದರಿಂದ ಅತ್ತ ರಸ್ತೆ ಬದಿಗೆ ಬರುವಂತಿಲ್ಲ. ಇತ್ತ ರಸ್ತೆಯಲ್ಲಿ ಹೋಗುವಂತಿಲ್ಲ ಎಂಬ ಪರಿಸ್ಥಿತಿ ಉದ್ಭವಿಸಿದೆ.

ಈ ಭಾಗ ಬಿಟ್ಟರೆ ಉಳಿದ ರಸ್ತೆಯ ಭಾಗದ ಸ್ಥಿತಿ ಪರವಾಗಿಲ್ಲ ಅನ್ನಬಹುದು. ಕೇವಲ 350 ಮೀ.ರಸ್ತೆಯಿಂದಾಗಿ ಸವಾರರ ಕನಿಷ್ಠ 3-5 ನಿಮಿಷಗಳು ಇಲ್ಲಿಯೇ ವ್ಯಯವಾಗುತ್ತಿದೆ. ವೇಗವಾಗಿ ಹೋದರೆ ವಾಹನದ ಬಿಡಿಭಾಗಗಳು ಒಂದೊಂದೇ ಕಳಚುವ ಸಾಧ್ಯತೆಗಳೂ ಇಲ್ಲಿ ಅಧಿಕವಾಗಿದೆ. ನಿಧಾನಗತಿಯ ಚಾಲನೆಯೇ ಸದ್ಯಕ್ಕೆ ಇರುವ ಪರಿಹಾರ ಎಂಬಂತಾಗಿದೆ.

ಈಗಾಗಲೇ ಹಲವು ದ್ವಿಚಕ್ರ ವಾಹನ ಸವಾರರು ಇಲ್ಲಿ ನಿಯಂತ್ರಣ ತಪ್ಪಿ ಬಿದ್ದು ಏಟು ಮಾಡಿಕೊಂಡ ಉದಾಹರಣೆಗಳೂ ಇವೆ. ಪಕ್ಕದಲ್ಲಿಯೇ ವೆಟ್‌ವೆಲ್‌ ಮಿಶ್ರಣದ ರಾಶಿ ಹಾಕಲಾಗಿದ್ದು, ಇದನ್ನಾದರೂ ರಸ್ತೆಗೆ ಹಾಕಿದರೆ ಉಪಯುಕ್ತ ಎಂಬುವುದು ನಾಗರಿಕರ ಅನಿಸಿಕೆ.

Advertisement

ವರ್ಷಗಳಿಂದ ಬೇಡಿಕೆ
ಈ ರಸ್ತೆಯನ್ನು ಸರಿಪಡಿಸಬೇಕು ಎಂದು ವರ್ಷಗಳಿಂದ ಸ್ಥಳೀಯರು ಸಂಬಂಧಪಟ್ಟ ಇಲಾಖೆಗೆ ಮನವಿ ನೀಡುತ್ತಲೇ ಬಂದಿದ್ದಾರೆ. ಮಳೆಗಾಲದಲ್ಲಿ ಸ್ವಲ್ಪ ತೇಪೆ ಹಚ್ಚುವುದು ನಡೆಯುತ್ತದೆ. ಅನಂತರ ಬಿದ್ದಿರುವ ಹೊಂಡಗಳನ್ನು ಕೇಳುವವರೇ ಇರುವುದಿಲ್ಲ. ಕುಂದಾಪುರ ಮಾರ್ಗವಾಗಿ ಮಣಿಪಾಲಕ್ಕೆ, ವಿಶೇಷವಾಗಿ ಆಸ್ಪತ್ರೆಗೆ ಬರುವವರು ಇದೇ ರಸ್ತೆಯನ್ನು ಅವಲಂಬಿಸಿರುವುದರಿಂದ ವಾಹನ ಸಂಚಾರವೂ ಹೆಚ್ಚಿರುತ್ತದೆ. ಹೀಗಾಗಿ ಸಂಬಂಧಪಟ್ಟ ಇಲಾಖೆ ತತ್‌ಕ್ಷಣವೇ ಹೊಂಡ ಮುಚ್ಚುವ ಕಾರ್ಯ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ನನೆಗುದಿಗೆ ಬಿದ್ದ ಸ್ವಾಧೀನ ಪ್ರಕ್ರಿಯೆ
ಅಂಬಾಗಿಲಿನಿಂದ ಪೆರಂಪಳ್ಳಿ ಮಾರ್ಗವಾಗಿ ಮಣಿಪಾಲಕ್ಕೆ ಬರುವ ರಸ್ತೆ ಈಗಾಗಲೇ ಚತುಷ್ಪಥ ಕಾಮಗಾರಿ ಪೂರ್ಣಗೊಂಡಿದೆ. ಆದರೆ ರಸ್ತೆ ಯೋಜನೆಯಂತೆ ಪೂರ್ಣ ಆಗಿಲ್ಲ. ಕಾರಣ ಇಲ್ಲಿನ 350 ಮೀ. ರಸ್ತೆ ಚತುಷ್ಪಥ ಮಾಡಲು ಇನ್ನೂ ಇಲಾಖೆಗೆ ಸಾಧ್ಯವಾಗಿಲ್ಲ. ಕಾರಣ, ಜಮೀನು ಸ್ವಾಧೀನ ಮಾಡಿಕೊಳ್ಳಲು ಇಲಾಖೆಗೆ ಆಗುತ್ತಿಲ್ಲ. ಜಮೀನು ಮಾಲಕರೊಂದಿಗೆ ಮಾತುಕತೆ ನಡೆಸಿ ಸ್ವಾಧೀನ ಪ್ರಕ್ರಿಯೆ ಆದಷ್ಟು ಶೀಘ್ರ ಮುಗಿಸಿದರೆ ಚತುಷ್ಪಥ ಕಾಮಗಾರಿಗೂ ಮುಕ್ತಿ ದೊರೆಯಲಿದೆ.

ಅನುದಾನ ಬಾಕಿ
ಅಂಬಾಗಿಲಿನಿಂದ ಪೆರಂಪಳ್ಳಿಯ ವರೆಗೆ ರಸ್ತೆಯ ಸ್ಥಿತಿ ಉತ್ತಮವಾಗಿದೆ. ಆದರೆ 350 ಮೀ. ರಸ್ತೆ ಅಭಿವೃದ್ಧಿ ಕಾರ್ಯ ತಾಂತ್ರಿಕ ಕಾರಣಗಳಿಂದ ಬಾಕಿ ಉಳಿದಿದೆ. ಜತೆಗೆ ಅನುದಾನ ಬಿಡುಗಡೆಗೂ ಬಾಕಿ ಇದೆ. ಇದು ಪೂರ್ಣಗೊಂಡ ಅನಂತರ ಪೂರ್ಣಪ್ರಮಾಣದಲ್ಲಿ ರಸ್ತೆಗೆ ಡಾಮರು ಹಾಕಲಾಗುವುದು.
-ಮಂಜುನಾಥ್‌, ಎಇಇ, ಪಿಡಬ್ಲ್ಯುಡಿ

Advertisement

Udayavani is now on Telegram. Click here to join our channel and stay updated with the latest news.

Next