Advertisement
ಕಲಾ ಪ್ರಕಾರವೇ ಔಷಧಜಗತ್ತಿನ ಶಾಂತಿ, ಸಂತೋಷಕ್ಕೆ ಭಾರತೀಯ ಸಂಗೀತ ಕಲಾ ಪ್ರಕಾರವೇ ಔಷಧವಾಗಿದೆ ಎನ್ನುತ್ತಾರೆ ತಬಲಾ ಮಾಂತ್ರಿಕ ಇಷಾನ್ ಘೋಷ್. ಎಲ್ಲರನ್ನೂ ಒಗ್ಗೂಡಿಸುವ ಮಾಂತ್ರಿಕ ಶಕ್ತಿ ಸಂಗೀತದಲ್ಲಿದೆ. ಒಬ್ಬ ಸಂಗೀತಗಾರ ತನ್ನ ಹೃದಯದಿಂದ ಸಂಗೀತ ನುಡಿಸಿದಾಗ ಮಾತ್ರ ಪ್ರೇಕ್ಷಕರ ಹೃದಯ ಮುಟ್ಟುವಂತಿರುತ್ತದೆ. ಈ ನಿಟ್ಟಿನಲ್ಲಿ ಭಾರತೀಯ ಸಂಗೀತವು ತನ್ನ ಅಗಾಧತೆಯನ್ನು ವ್ಯಾಪಿಸಿಕೊಂಡಿದೆ. ಭಾರತದ ಪುರಾತನ ಶಾಸ್ತ್ರೀಯ ಸಂಗೀತವು ಎಲ್ಲ ಕಾಲಘಟ್ಟಗಳಲ್ಲಿ ಮೂಲಕ್ಕೆ ಚ್ಯುತಿ ಬಾರದಂತೆ ಬೇರೆಬೇರೆ ಆಯಾಮಗಳಲ್ಲಿ ಸಂಯೋಜಿಲ್ಪಟ್ಟು ಪ್ರೇಕ್ಷಕರಿಗೆ ಮನೋರಂಜನೆ ನೀಡುತ್ತಿದೆ. ಸಾಕಷ್ಟು ಮೇರು ಕಲಾವಿದರ ಶ್ರಮ ಇದರ ಹಿಂದಿದೆ. ಹಾಗೇ ನಮ್ಮ ತಂಡವು ನಿಯೋ ಕ್ಲಾಸಿಕ್ ಶೈಲಿಯಲ್ಲಿ ಸಂಯೋಜಿಸಿ ಸಂಗೀತ ಪ್ರಿಯರನ್ನು ಮಂತ್ರಮುಗ್ಧಗೊಳಿಸುವಲ್ಲಿ ವಿಶೇಷ ಪ್ರಯತ್ನ ಮುಂದುವರಿದಿದೆ. ತಬಲಾ, ಸಿತಾರ್, ಕೊಳಲು, ಸಾರಂಗಿ, ವೋಕಲ್ಸ್ ಈ ಸಂಗೀತ ಪರಿಕರಗಳು ಸಂಗೀತದಲ್ಲಿ ರಾಗ ಶ್ರೀಮಂತಿಕೆಯನ್ನು ಹೆಚ್ಚಿಸಿದ್ದು, ಸಂಗೀತದಲ್ಲಿ ಇವುಗಳ ಪಾತ್ರ ಅತ್ಯಮೂಲ್ಯವಾಗಿದೆ. “ಅರಾಜ್’ ಎಂದರೆ ಪ್ರಾರ್ಥನೆ ಎಂದರ್ಥವಾಗಿದ್ದು, ನಮ್ಮ ಸಂಗೀತ ಕಲಾ ಪ್ರಕಾರದ ಸಂಸ್ಕೃತಿಯನ್ನು ಬಿಂಬಿಸುವ ಒಂದು ಪರಿಕಲ್ಪನೆಯಾಗಿದೆ.
ಇಷಾನ್ ಘೋಷ್ (ತಬಲಾ) ಅವರ ಸಾರಥ್ಯದಲ್ಲಿ ಪ್ರತೀಕ್ ಸಿಂಗ್ (ವೋಕಲ್ಸ್), ಮೆಹ್ತಾಬ್ ಅಲಿ ನಿಝಾಯ್(ಸಿತಾರ್) ವನರಾಜ್ ಶಾಸ್ತ್ರಿ (ಸಾರಂಗಿ), ಎಸ್. ಆಕಾಶ್(ಕೊಳಲು) ಅವರ ಒಂದು ತಂಡವಾಗಿ ಭಾರತ ಸಹಿತ ವಿದೇಶಗಳಲ್ಲಿ ಶಾಸ್ತ್ರೀಯ ಸಂಗೀತದ ರಸದೌತಣ ಪ್ರಸ್ತುತಪಡಿಸಿದ್ದಾರೆ. ಒಂದು ತಂಡವನ್ನು ರೂಪಿಸಿ ಶಾಸ್ತ್ರೀಯ ಸಂಗೀತದಲ್ಲಿ ವಿಭಿನ್ನ ಪರಿಕಲ್ಪನೆಯ ಮೂಲಕ ಜನಪ್ರಿಯರಾದ ಇಷಾನ್ ಘೋಷ್ ಅವರು ಆಕಾಶ್ ಅವರೊಂದಿಗೆ ಸೇರಿ 2016ರಲ್ಲಿ ಮೊದಲ ಕಚೇರಿಯನ್ನು ಆರಂಭಿಸಿದರು. ಅನಂತರ ಅವರ ಯೋಚನೆಯ ಲಹರಿ ಬದಲಾಗಿ ಒಂದು ತಂಡವಾಗಿ ಪ್ರೇಕ್ಷಕರಿಗೆ ಶಾಸ್ತ್ರೀಯ ಸಂಗೀತ ಪ್ರಸ್ತುತಪಡಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಿ ಬೇರೆ ಬೇರೆ ಸಂಗೀತ ಕಾರ್ಯಕ್ರಮದಲ್ಲಿ ಪರಿಚಯವಾಗಿದ್ದ ಪ್ರತೀಕ್ ಸಿಂಗ್, ಮೆಹ್ತಾಬ್, ವನರಾಜ್ ಅವರನ್ನು ಸೇರಿಸಿಕೊಂಡು 2018ರಲ್ಲಿ ಮೊದಲ ಪ್ರದರ್ಶನ ನೀಡಿದ್ದರು. ಇತ್ತೀಚೆಗೆ ಮುಂಬಯಿನಲ್ಲಿ ಜರಗಿದ ನೀತಾ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್ ಉದ್ಘಾಟನೆ ಕಾರ್ಯಕ್ರಮದಲ್ಲಿಯೂ ಕಛೇರಿಯನ್ನು ಪ್ರಸ್ತುತಪಡಿಸಿ ಸಂಗೀತ ಪ್ರಿಯರನ್ನು ಮಂತ್ರಮುಗ್ಧಗೊಳಿಸಿದ್ದರು.
Related Articles
ಆಸ್ಟ್ರೇಲಿಯ, ಯುರೋಪ್ ದೇಶಗಳಲ್ಲಿ ಸಂಗೀತ ಕಾರ್ಯ ಕ್ರಮ ಪ್ರಸ್ತುತಪಡಿಸಿದ್ದು, ಭಾರತೀಯ ಶಾಸ್ತ್ರೀಯ ಸಂಗೀತಕ್ಕೆ ಅತ್ಯುತ್ತಮ ಸ್ಪಂದನೆವಾಗಿತ್ತು. ಅಲ್ಲದೆ ಬೇರೆ ಬೇರೆ ಆಯಾಮ ಗಳಲ್ಲಿ ಇದಕ್ಕೆ ಸಿಕ್ಕಿದ ವಿಮರ್ಶೆ ಅನನ್ಯವಾಗಿತ್ತು. ಯುವ ಜನರಲ್ಲಿ ಶಾಸ್ತ್ರೀಯ ಸಂಗೀತದ ಆಸಕ್ತಿ ಕಡಿಮೆಯಾಗುತ್ತಿದೆ ಎಂಬ ಯಾವ ಕಳವಳವು ಬೇಡ. ಇದರಲ್ಲಿ ಆಸಕ್ತಿ ಇರುವ ಪ್ರೇಕ್ಷಕ ವರ್ಗವು ಡಿಜೆ, ಪಾಶ್ಚಾತ್ಯ ಪಾಪ್ ಸಂಗೀತ, ಮಾಡರ್ನ್ ಸಿನಿ ಸಂಗೀತಕ್ಕೂ ಮೀರಿ ಶಾಸ್ತ್ರೀಯ ಸಂಗೀತವು ವಿವಿಧ ಆಧುನಿಕ ಮಾದರಿಯ ಸಂಯೋಜನೆಯಡಿ ಜಾಗತಿಕ ಮಟ್ಟದಲ್ಲಿ ಪ್ರೇಕ್ಷಕರ ಹೃದಯವನ್ನು ಮುಟ್ಟುತ್ತಿದೆ ಎಂದು ಇಷಾನ್ ಹೇಳುತ್ತಾರೆ.
Advertisement