Advertisement

Udupi Paryaya ಜನೋತ್ಸಾಹ, ಸಂಭ್ರಮದ ಪುತ್ತಿಗೆ ಪರ್ಯಾಯ ಉತ್ಸವ

11:53 PM Jan 17, 2024 | Team Udayavani |

ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಚತುರ್ಥ ಪರ್ಯಾಯೋತ್ಸವಕ್ಕೆ ಉಡುಪಿ ನಗರವೇ ಸಿದ್ಧಗೊಂಡಿದೆ. ಗುರುವಾರ ಬೆಳಗ್ಗೆ ಪರ್ಯಾಯ ದರ್ಬಾರ್‌ ನಡೆಯಲಿದೆ. ಬುಧವಾರ ಸಂಜೆಯಿಂದಲೇ ನಗರ ಜನಜಂಗುಳಿ ಹೆಚ್ಚತೊಡಗಿತ್ತು. ರಾತ್ರಿ ಹಲವೆಡೆ ಸಂಗೀತ ನೃತ್ಯ ಕಾರ್ಯಕ್ರಮಗಳು ನಡೆದು ಭಕ್ತಾದಿಗಳಿಗೆ ಸಾಂಸ್ಕೃತಿಕ ಸವಿಯನ್ನು ಉಣಬಡಿಸಿತು.

Advertisement

ಮೆರವಣಿಗೆಗೆ ಆಕರ್ಷಣೆ ತುಂಬಿದ ಸ್ತಬ್ಧಚಿತ್ರಗಳು
ಉಡುಪಿ: ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಚತುರ್ಥ ಪರ್ಯಾಯೋತ್ಸವದ ಮೆರವಣಿಗೆ ವಿಶೇಷ ಆಕರ್ಷಣೆಯಿಂದ ಕೂಡಿದೆ. ಮೆರವಣಿಗೆಯಲ್ಲಿ ಸ್ಥಳೀಯ ಕಲಾತಂಡಗಳು ಸಹಿತ ನಾಸಿಕ್‌ ಡೋಲು, ತಾಸೆ, ಕೃಷ್ಣನ ಅವತಾರಕ್ಕೆ ಸಂಬಂಧಿಸಿದ 8 ಸ್ತಬ್ಧಚಿತ್ರಗಳು, ಗೀತೆಯ ನಾಣ್ಣುಡಿ ಇರುವ 4 ಟ್ಯಾಬ್ಲೋಗಳು ಸಹಿತ ಸರಕಾರಿ ಇಲಾಖೆಯ ಟ್ಯಾಬ್ಲೋಗಳು, ಕೇರಳ-ಭಾರತೀಯ ಶೈಲಿಯ ವಿವಿಧ ಮಾದರಿಯ ಚೆಂಡೆಗಳು, ಕುಣಿತ ಭಜನೆ, ಜನಪದ ಕಲೆ, ಡೊಳ್ಳು ಕುಣಿತ, ಸೋಮನ ಕುಣಿತ, ವೀರಗಾಸೆ, ಮಕ್ಕಳಿಂದ ಪಾರಾಯಣ, ವೈವಿಧ್ಯಮಯ ಕೋಲಾಟ, ಕುಣಿತ ಭಜನೆ, ಬಳ್ಳಾರಿಯ ಕೋಲಾಟ, ತುಳುನಾಡ ಸಂಸ್ಕೃತಿಯನ್ನು ಬಿಂಬಿಸುವ ಸ್ತಬ್ಧಚಿತ್ರಗಳು, ಪರಶುರಾಮನ ಬೃಹತ್‌ ವಿಗ್ರಹ, ಹುಲಿಯ ಸ್ತಬ್ಧಚಿತ್ರ, ಚಿಲಿಪಿಲಿ ಗೊಂಬೆಗಳು, ಚೆಂಡೆ, ವಯೋಲಿನ್‌, ಜನಪದ ಕಲೆಗಳು, ಮಧ್ವಗಾನ ಯಾನ, ಕುಣಿತ ಭಜನೆ, ವಿಷ್ಣು ಸಹಸ್ರನಾಮ ಶ್ಲೋಕಗಳು, ಪೌರಾಣಿಕ ಸನ್ನಿವೇಶದ ಸ್ತಬ್ಧಚಿತ್ರಗಳು ಜನಾಕರ್ಷಣೆಯಾಗಿವೆ.

ಹರಿದು ಬಂದ ಹೊರೆಕಾಣಿಕೆ
ಹೊರೆ ಕಾಣಿಕೆ ಸಂಗ್ರಹಾಲಯಕ್ಕೆ ಸಾಕಷ್ಟು ಪ್ರಮಾಣದಲ್ಲಿ ಹೊರೆ ಕಾಣಿಕೆ ಹರಿದು ಬಂದಿದೆ. ಜ.9 ರಿಂದ ಉಡುಪಿ ಸಹಿತ ಹೊರ ಜಿಲ್ಲೆಗಳಿಂದಲೂ ಹೆಚ್ಚಿನ ಪ್ರಮಾಣದಲ್ಲಿ ಹೊರೆ ಕಾಣಿಕೆ ಬಂದಿದೆ. ವಿವಿಧ ಸಂಘ, ಸಂಸ್ಥೆ, ಸಂಘಟನೆಗಳಿಂದ ಅಕ್ಕಿ, ಸಕ್ಕರೆ, ಬೆಲ್ಲ, ದವನ ಧಾನ್ಯ, ಬೇಳೆ, ಕಾಳು, ತರಕಾರಿ, ಹಣ್ಣು ಮೊದಲಾದ ದಿನಸಿ ಸಾಮಾಗ್ರಿಗಳು ಹೆಚ್ಚಿನ ಪ್ರಮಾಣದಲ್ಲಿ ಶೇಖರಣೆಯಾಗಿದೆ. ಹೊರೆ ಕಾಣಿಕೆ ಸಂಗ್ರಹಾಲಯವು ಆಕರ್ಷಣೆ ಕೇಂದ್ರವಾಗಿ ಗಮನ ಸೆಳೆಯುತ್ತಿದ್ದು, ಸೆಲ್ಫಿ ಕ್ಲಿಕ್ಕಿಸಿಕೊಂಡು ಜನರು ಸಂಭ್ರಮಿಸಿದರು.

ಬಸ್‌ಗಳು ಫ‌ುಲ್‌ ರಶ್‌
ನಗರದ ಭಾಗದಿಂದ ವಿವಿಧೆಡೆ ತೆರಳುವ ಬಸ್‌ಗಳು ಜನರಿಂದ ತುಂಬಿಹೋಗಿತ್ತು. ತಡರಾತ್ರಿಯವರೆಗೂ ಬಸ್‌ ವ್ಯವಸ್ಥೆ ಕಲ್ಪಿಸಿದ ಕಾರಣ ದೂರದ ಊರಿಗೆ ತೆರಳುವವರಿಗೆ ಅನುಕೂಲವಾಯಿತು. ನಗರದ ಭಾಗದಲ್ಲಿ ಮುಂಜಾನೆಯವರೆಗೂ ಸೀಮಿತ ಸಂಖ್ಯೆಯಲ್ಲಿ ಬಸ್‌ಗಳು ಓಡಾಟ ಮಾಡಿದವು. ಜಿಲ್ಲಾಡಳಿತ ನಿಗದಿಪಡಿಸಿದ ಪಾರ್ಕಿಂಗ್‌ ಸ್ಥಳದಲ್ಲಿ ವಾಹನಗಳನ್ನು ಇರಿಸಿ ಭಕ್ತರು ಹಾಗೂ ಸಾರ್ವಜನಿಕರು ಕಾಲ್ನಡಿಗೆಯ ಮೂಲಕ ನಗರದ ಅಂದ ವೀಕ್ಷಣೆ ಮಾಡಿದರು.

ಸ್ವಚ್ಛತಾ ಪಡೆ
ಅಹರ್ನಿಶಿ ಸೇವೆ
ನಗರಸಭೆ ವತಿಯಿಂದ ಪರ್ಯಾಯ ಸ್ವಚ್ಛತಾ ಕಾರ್ಯಕ್ಕೆ ವಿಶೇಷ ಸ್ವತ್ಛತಾ ಪಡೆಯನ್ನು ರೂಪಿಸಿದ್ದು, ನಗರಸಭೆ ಪೌರಕಾರ್ಮಿಕರು ಒಳಗೊಂಡು ಹೆಚ್ಚುವರಿ ಕಾರ್ಮಿಕರನ್ನು ರೂಪಿಸಿ ವಿಶೇಷ ಸ್ವಚ್ಛತಾ ಪಡೆಯನ್ನು ರಚಿಸಲಾಗಿದೆ. 200 ಮಂದಿಯ ಈ ತಂಡವು ಪರ್ಯಾಯ ಮೆರವಣಿಗೆಯ ಅನಂತರ ರಸ್ತೆಯ ಉದ್ದಗಲಕ್ಕೂ ಸ್ವಚ್ಛತಾ ಕಾರ್ಯ ನಡೆಸಿ, ಜನರು ತಿಂದು ಎಸೆದ ಪ್ಲಾಸ್ಟಿಕ್‌ ತ್ಯಾಜ್ಯ, ಇನ್ನಿತರೆ ಹಸಿ ತ್ಯಾಜ್ಯಗಳನ್ನು ಹೆಕ್ಕಿ ಸ್ವಚ್ಛಗೊಳಿಸಿದರು. ರಾತ್ರಿ, ಹಗಲು ಎರಡು ಪಾಳಿಯಲ್ಲಿ ಸ್ವಚ್ಛತಾ ಕಾರ್ಯ ನಿರಂತರವಾಗಿ ನಡೆಯುತ್ತಿದ್ದು, ಪರ್ಯಾಯ ಮೆರವಣಿಗೆ ಬಳಿಕ ಎಲ್ಲ ರಸ್ತೆಗಳನ್ನು ಸ್ವಚ್ಛಗೊಳಿಸಿ ತಮ್ಮ ಅಹರ್ನಿಶಿ ಸೇವೆಯ ಮೂಲಕ ಜನರ ಗಮನ ಸೆಳೆದರು.

Advertisement

ಶೃಂಗಾರಗೊಂಡ ಕೃಷ್ಣ ನಗರಿ
ಉಡುಪಿ ನಗರವು ಬಣ್ಣ ಬಣ್ಣದ ವಿದ್ಯುದ್ದೀಪಾಲಂಕಾರಗಳಿಂದ ಕಂಗೊಳಿಸಿ ಪರ್ಯಾಯ ಮಹೋ ತ್ಸವದ ಮೆರುಗನ್ನು ಹೆಚ್ಚಿಸಿತು. ರಥಬೀದಿ ಹಾಗೂ ನಗರದ ಸುತ್ತ ವೈವಿಧ್ಯಮಯ ದೀಪಾಲಂಕಾರಗಳಿಂದ ಜನಮನಸೂರೆಗೊಂಡಿತು. ರಥಬೀದಿಯ ಸುತ್ತ ಹಾಗೂ ನಗರದ ಪ್ರಮುಖ ಬೀದಿಗಳಲ್ಲಿ ಸುಮಾರು ನಾಲ್ಕು ಲಕ್ಷಕ್ಕೂ ಅಧಿಕ ಮಿನಿಯೇಚರ್‌ಗಳನ್ನು ಅಳವಡಿಸಲಾಗಿದೆ. ಅಷ್ಟಮಠ, ಮಧ್ವಸರೋವರ, ಕಟ್ಟಿಗೆ ರಥ, ವಸತಿ ಗೃಹಗಳು ವೈವಿಧ್ಯಮಯ ದೀಪಗಳಿಂದ ಕಂಗೊಳಿಸಿದವು. ವಿವಿಧ ಸಂಘಟನೆಗಳು, ಸಂಘ ಸಂಸ್ಥೆಗಳು ಶುಭಕೋರುವ ಬ್ಯಾನರ್‌ಗಳು, ಫ್ಲೆಕ್ಸ್‌ಗಳು ನಗರದೆಲ್ಲೆಡೆ ರಾರಾಜಿಸಿದೆ.

ರಥಬೀದಿಯಲ್ಲಿ
ಭಕ್ತ ಸಮೂಹ
ಕೃಷ್ಣಮಠ ರಥಬೀದಿ, ತೆಂಕಪೇಟೆ, ಬಡಗುಪೇಟೆ ರಸ್ತೆ ಸಹಿತ ಕೃಷ್ಣ ಮಠ ಸಂಪರ್ಕಿಸುವ ರಸ್ತೆಗಳಲ್ಲಿ ಭಕ್ತರು ಸಾಗರೋಪದಿಯಲ್ಲಿ ಹರಿದು ಬಂದರು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕಣ್ತುಂಬಿಕೊಂಡರು.
ಪಾರ್ಕಿಂಗ್‌ ಪ್ರದೇಶದಲ್ಲಿ ಎಲ್‌ಇಡಿ ಟಿವಿ ಅಳವಡಿಸಿ ನಗರದ ವಿದ್ಯುತ್‌ ಅಲಂಕಾರದ ವೈಭವದ ದೃಶ್ಯವನ್ನು ಜನರ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಯಿತು. ಬೈಲಕೆರೆ ಹೊರೆಕಾಣಿಕೆ ಸಂಗ್ರಹ, ಭೋಜನ ಪ್ರಸಾದ ವಿತರಣೆ ಆವರಣದಲ್ಲಿ ಯೂನಿಯನ್‌ ಬ್ಯಾಂಕ್‌ ವತಿಯಿಂದ ಉಚಿತ ನೀರಿನ ಬಾಟಲಿ ವ್ಯವಸ್ಥೆ ಮಾಡಲಾಗಿತ್ತು. ರಾಷ್ಟ್ರೀಯ ಗೋ ಸೇವಾ ಸಂಸ್ಥಾನದ ಟ್ಯಾಬ್ಲೊ ಭಕ್ತರ ಗಮನ ಸೆಳೆಯಿತು. ಟ್ಯಾಬ್ಲೊ ವಾಹನದಲ್ಲಿ ಎರಡು ಗೋವುಗಳಿದ್ದವು. ಕಾಣಿಕೆ ಸಮರ್ಪಿಸಿ ಗೋವಿನ ಆಶೀರ್ವಾದ ಪಡೆದರು.

ಗಮನಸೆಳೆದ ಸಾಂಸ್ಕೃತಿಕ ಚಟುವಟಿಕೆ
ರಥಬೀದಿ, ಹೊರೆಕಾಣಿಕೆ ಸ್ಥಳದ ಗದ್ದೆ, ಪೇಜಾವರ ಮಠದ ಮುಂಭಾಗ, ಶ್ರೀಕೃಷ್ಣ ಮಠದ ಎದುರು, ಕಿನ್ನಿಮೂಲ್ಕಿ, ಸರ್ವಿಸ್‌ ಬಸ್‌ ತಂಗುದಾಣ, ಹಳೆ ಕೆಎಸ್ಸಾರ್ಟಿಸಿ ಬಸ್‌ ತಂಗುದಾಣ, ತ್ರಿವೇಣಿ ಸರ್ಕಲ್‌, ತ್ರಿಶಾ ಸರ್ಜಿಕಲ್‌ ಬಳಿ, ಗಿರಿಜಾ ಸರ್ಜಿಕಲ್‌ ಬಳಿ, ಪುರಭವನದಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸಾಂಸ್ಕೃತಿಕ ಕಲಾಚಟುವಟಿಕೆಯನ್ನು ಸಹಸ್ರಾರು ಸಂಖ್ಯೆಯಲ್ಲಿ ಜನರು ವೀಕ್ಷಿಸಿದರು.

ಅಂದ ಹೆಚ್ಚಿಸಿದ ಲೈಟಿಂಗ್‌ ಅಲಂಕಾರ
ಕಾಪು ದಂಡತೀರ್ಥದಿಂದ ಶ್ರೀಕೃಷ್ಣ ಮಠ ಹಾಗೂ ಉಡುಪಿ ನಗರದ ಸುತ್ತಮುತ್ತಲೂ ವಿದ್ಯುತ್‌ ದೀಪಾಲಂಕಾರ ಹಾಗೂ ಕೇಸರಿ ಬಾವುಟಗಳು ಕಂಗೊಳಿಸಿದವು. ವಿವಿಧ ಭಾಗಗಳಲ್ಲಿ ಸೆಲ್ಫಿ ಪ್ರಿಯರು ಫೋಟೋ ಕ್ಲಿಕ್ಕಿಸುವ ಮೂಲಕ ಗಮನಸೆಳೆದರು. ಕೆಂಪು, ಬಿಳಿ, ಕೇಸರಿ, ನೀಲಿ, ಹಳದಿ, ಹಸುರು ಸಹಿತ ವಿವಿಧ ಬಣ್ಣದ ಲೈಟಿಂಗ್‌ಗಳು, ಬಣ್ಣದ ಕೊಡೆಗಳು, ವಿವಿಧ ವಿನ್ಯಾಸಗಳು ಪರ್ಯಾಯೋತ್ಸವದ ಅಂದವನ್ನು ಮತ್ತಷ್ಟು ಹೆಚ್ಚಿಸಿತು.

ಜನರ ದಂಡು
ಸಂಜೆ 5 ಗಂಟೆಯಿಂದಲೇ ಶ್ರೀಕೃಷ್ಣ ಮಠಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಜನರು ಆಗಮಿಸತೊಡಗಿದರು. ಸಂಜೆ 6 ಗಂಟೆ ಸುಮಾರಿಗೆ ನಗರದಲ್ಲಿ ವಾಹನಗಳ ಪ್ರವೇಶಕ್ಕೆ ನಿಷೇಧ ಹೇರಲಾಗಿತ್ತು. ಪಾರ್ಕಿಂಗ್‌ ಸ್ಥಳದಲ್ಲಷ್ಟೇ ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಸಂಜೆ ಆಗಮಿಸಿದವರು ನಗರದ ವಿವಿಧೆಡೆ ಏರ್ಪಡಿಸಲಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಿ ಅನಂತರ ನಡೆದ ಪರ್ಯಾಯೋತ್ಸವದ ಮೆರವಣಿಗೆ ಕಂಡು ತೆರಳಿದರು.

ವಿವಿಧೆಡೆ ಹೂವಿನ ಅಲಂಕಾರ
ನಗರದ ಜೋಡುಕಟ್ಟೆ ರಸ್ತೆ, ಶ್ರೀಕೃಷ್ಣ ಮಠದ ಮುಂಭಾಗದಲ್ಲಿ ಆಕರ್ಷಕ ಹೂವುಗಳ ಅಲಂಕಾರದೊಂದಿಗೆ ಸಿಂಗರಿಸಲಾಗಿತ್ತು. ಪರ್ಯಾಯ ಮೆರವಣಿಗೆ ಹಾದು ಹೋಗುವ ರಸ್ತೆಯ ಇಕ್ಕೆಲಗಳಲ್ಲಿ ವಿವಿಧ ಬ್ಯಾನರ್‌, ಕಟೌಟ್‌ಗಳು ರಾರಾಜಿಸತೊಡಗಿದವು.

ಇಂದಿನ ಸಾಂಸ್ಕೃತಿಕ ಕಾರ್ಯಕ್ರಮ
ಉಡುಪಿ: ಪರ್ಯಾಯ ಮಹೋತ್ಸವದ ಹಿನ್ನೆಲೆಯಲ್ಲಿ ಜ. 18ರಂದು ರಾಜಾಂಗಣದಲ್ಲಿ ಪ್ರಭಾತ್‌ ದರ್ಬಾರ್‌, ಬೆಳಗ್ಗೆ 4ರಿಂದ 5.45ರ ವರೆಗೆ ಮೈಸೂರಿನ ವಿದ್ವಾನ್‌ ಎ. ಚಂದನ್‌ ಕುಮಾರ್‌ ಮತ್ತು ಬಳಗದಿಂದ ವೇಣು ವಾದನ, ಬೆಳಗ್ಗೆ 5.45ರಿಂದ 6.30ರವರೆಗೆ ಕೃಷ್ಣಗೀತಾ ನೃತ್ಯ ರೂಪಕ, ಬೆಳಗ್ಗೆ 6.30ರಿಂದ ದರ್ಬಾರ್‌ ಸಭಾ ಕಾರ್ಯಕ್ರಮ ನಡೆಯಲಿದೆ.

ಸಂಧ್ಯಾ ದರ್ಬಾರ್‌ ಹಿನ್ನೆಲೆಯಲ್ಲಿ ಸಂಜೆ 4ರಿಂದ 5ರ ವರೆಗೆ ಪ್ರಕಾಶ್‌ ದೇವಾಡಿಗ ಮತ್ತು ಬಳಗದಿಂದ ಸ್ಯಾಕೊÕàಪೋನ್‌ ವಾದನ, 5.15ರಿಂದ 7.30ರ ವರೆಗೆ ಸಂಧ್ಯಾ ದರ್ಬಾರ್‌ ಸಭಾ ಕಾರ್ಯಕ್ರಮ, ನಿರಂತರ ಜ್ಞಾನ ಸತ್ರ/ಅಖಂಡ ಗೀತಾ ಪಾರಾಯಣ, ದ್ವೆ„ವಾರ್ಷಿಕ ಅವಿರತ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ, ಭಾರ್ಗವಿ ತಂಡದಿಂದ ಸಾಂಸ್ಕೃತಿಕ ಕ್ಷಣ, ಗಣ್ಯರಿಗೆ ಸಮ್ಮಾನ, ಪರ್ಯಾಯ ಪುತ್ತಿಗೆ ಶ್ರೀಪಾದರಿಂದ ಧರ್ಮಸಂದೇಶ ನಡೆಯಲಿದೆ.

ರಾತ್ರಿ 7.30ರಿಂದ 9ರ ವರೆಗೆ ಬೆಂಗಳೂರಿನ ವಿ| ನಿರುಪಮಾ ರಾಜೇಂದ್ರ ಅವರಿಂದ ಭರತನಾಟ್ಯ-ಕೃಷ್ಣ ಕರ್ಣಾಮೃತ, ವ್ಯಾಖ್ಯಾನ: ಶತಾವಧಾನಿ ಡಾ| ಆರ್‌. ಗಣೇಶ್‌.

ಪ್ರದರ್ಶನ ಮಳಿಗೆ ವೈಶಿಷ್ಟ್ಯ
ಈ ಬಾರಿಯ ಪರ್ಯಾಯ ವಿಶೇಷವಾಗಿ ಇಲ್ಲಿನ ಹೊರೆಕಾಣಿಕೆ ಸಂಗ್ರಹಾಲಯ ಸಮೀಪ ಪ್ರದರ್ಶನ ಮತ್ತು ಮಾರಾಟ ಮಳಿಗೆ ಗಮನ ಸೆಳೆಯಿತು. ಪುಸ್ತಕಗಳು, ಗೃಹೋಪಯೋಗಿ ಉತ್ಪನ್ನಗಳು, ಅಲಂಕಾರಿಕೆ, ಆಟಿಕೆಗಳು ಇಲ್ಲಿದ್ದವು. ಮೂವತ್ತಕ್ಕೂ ಅಧಿಕ ಮಳಿಗೆ ಇದ್ದು, ವ್ಯಾಪಾರ ಚಟುವಟಿಕೆ ಜೋರಾಗಿ ನಡೆಯಿತು.

ಪರ್ಯಾಯ ದರ್ಬಾರ್‌ಗೆ
ಸಜ್ಜಾಗಿ ನಿಂತ ರಾಜಾಂಗಣ
ಉಡುಪಿ: ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಚತುರ್ಥ ಪರ್ಯಾಯದ ಪ್ರಾತಃ ಹಾಗೂ ಸಂಧ್ಯಾ ದರ್ಬಾರ್‌ ಮತ್ತು ಮುಂದಿನ 2 ವರ್ಷಗಳವರೆಗೂ ವಿವಿಧ ಧಾರ್ಮಿಕ ಸಭೆ , ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅನುಕೂಲವಾಗುವಂತೆ ವಿಭಿನ್ನ ರೀತಿಯಲ್ಲಿ ಸಿದ್ಧಗೊಂಡಿರುವ ರಾಜಾಂಗಣ ಜನರನ್ನು ಆಕರ್ಷಿಸುತ್ತಿದೆ.

ಪರ್ಯಾಯ ದರ್ಬಾರ್‌ಗೆ ತಾತ್ಕಾಲಿಕವಾಗಿ ರಾಜಾಂಗಣದ ಮುಖ್ಯ ವೇದಿಕೆಯನ್ನು ಹೂ, ಎಳನೀರು, ಬಣ್ಣ ಬಣ್ಣದ ಬಟ್ಟೆ ಸಹಿತ ವಿವಿಧ ಪ್ರಾಕೃತಿಕವಾಗಿ ಲಭ್ಯವಿರುವ ವಸ್ತುಗಳನ್ನು ಬಳಸಿ ಸಿಂಗಾರ ಮಾಡಲಾಗಿದೆ. ಮುಖ್ಯ ವೇದಿಕೆಯನ್ನು ಸಂಪೂರ್ಣವಾಗಿ ನವೀಕರಿಸಲಾಗಿದೆ. ಹೊಸ ಮಾದರಿಯ ಪರಿಕರಗಳನ್ನು ಬಳಸಿ ರಾಜನ ಆಸ್ಥಾನದ ದರ್ಬಾರ್‌ ಸಭಾಂಗಣದಂತೆ ರಾಜಾಂಗಣವನ್ನು ಸಿದ್ಧಪಡಿಸಲಾಗಿದೆ. 80 ಅಡಿ ಅಗಲ ಹಾಗೂ 40 ಅಡಿ ಉದ್ದವಿರುವ ಈ ವೇದಿಕೆಯಲ್ಲಿ ನಿರ್ಮಿಸಿರುವ ಕಂಬಗಳ ಮಧ್ಯೆ ದಶಾವತಾರದ ಮೂರ್ತಿಗಳನ್ನು ಇಡಲಾಗಿದೆ. ರಾಜಾಂಗಣದಲ್ಲಿ ದರ್ಬಾರ್‌ ಕಾರ್ಯಕ್ರಮಕ್ಕಾಗಿ ಕುರ್ಚಿ ವ್ಯವಸ್ಥೆಯ ಜತೆಗೆ ಎಲ್‌ಇಡಿ ಸ್ಟ್ರೀನ್‌ ವ್ಯವಸ್ಥೆಯನ್ನು ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next